Advertisement

Party Donation: ಬಿಜೆಪಿಗೆ 2,244 ಕೋ.ರೂ. ದೇಣಿಗೆ ಕಳೆದ ಬಾರಿಗಿಂತ ಶೇ. 212 ಏರಿಕೆ

05:15 AM Dec 27, 2024 | Team Udayavani |

ಹೊಸದಿಲ್ಲಿ: ಆಡಳಿತಾರೂಢ ಬಿಜೆಪಿಗೆ 2023-24ರಲ್ಲಿ ವಿವಿಧ ವ್ಯಕ್ತಿಗಳು, ಟ್ರಸ್ಟ್‌ಗಳು ಹಾಗೂ ಕಾರ್ಪೊರೇಟ್‌ ಸಂಸ್ಥೆಗಳಿಂದ ಬರೋಬ್ಬರಿ 2,244 ಕೋಟಿ ರೂ. ದೇಣಿಗೆ ಹರಿದು ಬಂದಿದೆ.

Advertisement

ಕೇಂದ್ರ ಚುನಾವಣ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ದತ್ತಾಂಶದಿಂದ ಈ ವಿಚಾರ ಬೆಳಕಿಗೆ ಬಂದಿದೆ. ವಿಶೇಷವೆಂದರೆ 2023-24ರಲ್ಲಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ (ಭಾರತ್‌ ರಾಷ್ಟ್ರ ಸಮಿತಿ) ಪಕ್ಷವು ಬರೋಬ್ಬರಿ 580 ಕೋಟಿ ರೂ. ಪಡೆಯುವ ಮೂಲಕ ಅತೀ ಹೆಚ್ಚು ದೇಣಿಗೆ ಸ್ವೀಕರಿಸಿದ 2ನೇ ಪಕ್ಷವಾಗಿ ಹೊರಹೊಮ್ಮಿದೆ.

ಈ ಪೈಕಿ ಚುನಾವಣ ಬಾಂಡ್‌ ಮೂಲಕವೇ ಬಿಆರ್‌ಎಸ್‌ಗೆ 495.5 ಕೋಟಿ ರೂ. ಬಂದಿದೆ. ಕಾಂಗ್ರೆಸ್‌ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, 289 ಕೋಟಿ ರೂ. ದೇಣಿಗೆ ಪಡೆದಿದೆ. 2022-23ರಲ್ಲಿ ಕಾಂಗ್ರೆಸ್‌ಗೆ 79.9 ಕೋಟಿ ರೂ. ದೊರೆತಿತ್ತು. 2022-23ರಲ್ಲಿ ಬಿಜೆಪಿ 1,300 ಕೋಟಿ ರೂ. ದೇಣಿಗೆ ಪಡೆದಿತ್ತು. ಈ ಬಾರಿ 2,244 ಕೋಟಿ ರೂ. ಪಡೆದಿದ್ದರೂ ಚುನಾವಣ ಬಾಂಡ್‌ಗಳ ಮೂಲಕ ಸ್ವೀಕರಿಸಿದ ದೇಣಿಗೆಯ ಮೊತ್ತವೆಷ್ಟು ಎಂಬುದು ಬಹಿರಂಗವಾಗಿಲ್ಲ.

ಬಾಂಡ್‌ ಮೂಲಕ ಪಡೆದ ದೇಣಿಗೆಯನ್ನು ಪಕ್ಷಗಳು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ಉಲ್ಲೇಖೀಸಿದರೆ ಸಾಕು ಎಂಬ ನಿಯಮವಿರುವ ಕಾರಣ ಆ ಮೊತ್ತವನ್ನು ಬಿಜೆಪಿಯಾಗಲೀ, ಕಾಂಗ್ರೆಸ್‌ ಆಗಲೀ ಬಹಿರಂಗಪಡಿಸಿಲ್ಲ. ಕೆಲವು ಪ್ರಾದೇಶಿಕ ಪಕ್ಷಗಳು ತಮಗೆ ಬಂದಿರುವ ದೇಣಿಗೆಯ ಮೊತ್ತವನ್ನು ತಾವಾಗಿಯೇ ಘೋಷಿಸಿಕೊಂಡಿವೆ. ಅದರಂತೆ ಚುನಾವಣ ಬಾಂಡ್‌ ಮೂಲಕ ಡಿಎಂಕೆ 60 ಕೋಟಿ ರೂ., ವೈಎಸ್ಸಾರ್‌ ಕಾಂಗ್ರೆಸ್‌ 121.5 ಕೋಟಿ ರೂ., ಜೆಎಂಎಂ 11.5 ಕೋಟಿ ರೂ. ಪಡೆದಿವೆ.

ಆಮ್‌ ಆದ್ಮಿ ಪಕ್ಷವು 11.1 ಕೋಟಿ ರೂ. (ಕಳೆದ ಬಾರಿ 37.1 ಕೋಟಿ ರೂ.), ಸಿಪಿಎಂ 7.6 ಕೋಟಿ ರೂ. (ಕಳೆದ ಬಾರಿ 6.1 ಕೋಟಿ ರೂ.) ಪಡೆದಿರುವುದಾಗಿ ಘೋಷಿಸಿಕೊಂಡಿವೆ. ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ(ಎನ್‌ಪಿಪಿ) 14.8 ಕೋಟಿ ರೂ., ಬಿಎಸ್‌ಪಿ ಮತ್ತು ಬಿಜೆಡಿ 202324ರಲ್ಲಿ ಯಾವುದೇ ದೇಣಿಗೆ ಪಡೆದಿಲ್ಲ ಎಂದು ಹೇಳಿವೆ. ಇದೇ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಚುನಾವಣ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿತ್ತು.

Advertisement

ಬಿಜೆಪಿ ದೇಣಿಗೆ ಶೇ.212ರಷ್ಟು ಏರಿಕೆ
2022-23ಕ್ಕೆ ಹೋಲಿಸಿದರೆ 202324ರಲ್ಲಿ ಬಿಜೆಪಿಗೆ ದೊರೆತ ದೇಣಿಗೆಯ ಪ್ರಮಾಣ ಸೇ. 212ರಷ್ಟು ಏರಿಕೆ ಕಂಡಿದೆ. ಎಲೆಕ್ಟೋರಲ್‌ ಟ್ರಸ್ಟ್‌ ಮೂಲಕ ಬಿಜೆಪಿಗೆ 850 ಕೋಟಿ ರೂ. ಬಂದಿಗೆ. ಈ ಪೈಕಿ 723 ಕೋಟಿ ರೂ.ಗಳನ್ನು ಪ್ರೂಡೆಂಟ್‌ ಟ್ರಸ್ಟ್‌, 127 ಕೋಟಿ ರೂ.ಗಳನ್ನು ಟ್ರಯಂಫ್ ಎಲೆಕ್ಟೋರಲ್‌ ಟ್ರಸ್ಟ್‌, 17.2 ಕೋಟಿ ರೂ.ಗಳನ್ನು ಐನ್‌ಜಿಗಾರ್ಟಿಗ್‌ ಟ್ರಸ್ಟ್‌ ನೀಡಿವೆ. ಲಾಟರಿ ಕಿಂಗ್‌ ಸ್ಯಾಂಟಿಯಾಗೋ ಮಾರ್ಟಿನ್‌ ಅವರ ಫ್ಯೂಚರ್‌ ಗೇಮಿಂಗ್‌ ಆ್ಯಂಡ್‌ ಹೊಟೇಲ್‌ ಸರ್ವಿಸಸ್‌ನಿಂದ 3 ಕೋಟಿ ರೂ.ಗಳನ್ನು ಪಡೆದಿರುವುದಾಗಿ ಬಿಜೆಪಿ ಹೇಳಿದೆ.

ಅತೀ ಹೆಚ್ಚು ದೇಣಿಗೆ ನೀಡಿದವರ್ಯಾರು?
ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ಸಂಸ್ಥೆಯೆಂದರೆ ಪ್ರೂಡೆಂಟ್‌ ಎಲೆಕ್ಟೋರಲ್‌ ಟ್ರಸ್ಟ್‌. ಈ ಟ್ರಸ್ಟ್‌ನಿಂದ ಬಿಜೆಪಿಗೆ 723 ಕೋಟಿ ರೂ. ಹಾಗೂ ಕಾಂಗ್ರೆಸ್‌ಗೆ 156 ಕೋಟಿ ರೂ. ಸಂದಾಯವಾಗಿದೆ ಎಂದು ಚುನಾವಣ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಇದೇ ಟ್ರಸ್ಟ್‌ ಬಿಆರ್‌ಎಸ್‌ಗೆ 85 ಕೋಟಿ ರೂ., ವೈಎಸ್‌ಆರ್‌ ಕಾಂಗ್ರೆಸ್‌ಗೆ 62.5 ಕೋಟಿ ರೂ., ಟಿಡಿಪಿಗೆ 33 ಕೋಟಿ ರೂ. ನೀಡಿದೆ. ಪ್ರೂಡೆಂಟ್‌ ಟ್ರಸ್ಟ್‌  ಎನ್ನುವುದು ಭಾರ್ತಿ ಏರ್‌ಟೆಲ್‌ನ ಮಾತೃಸಂಸ್ಥೆ ಭಾರತಿ ಎಂಟರ್‌ಪ್ರೈಸಸ್‌ ಬೆಂಬಲಿತ ಸಂಸ್ಥೆಯಾಗಿದೆ. ಈ ಟ್ರಸ್ಟ್‌ಗೆ 202223ರಲ್ಲಿ ಮೇಘ ಎಂಜಿನಿಯರಿಂಗ್‌ ಆ್ಯಂಡ್‌ ಇನ್‌ಫ್ರಾ ಲಿ., ಸೀರಂ ಇನ್‌ಸ್ಟಿಟ್ಯೂಟ್‌, ಆರ್ಸೆಲಾರ್‌ ಮಿತ್ತಲ್‌ ಹಾಗೂ ಭಾರ್ತಿ ಏರ್‌ಟೆಲ್‌ ಪ್ರಮುಖ ದೇಣಿಗೆದಾರರಾಗಿದ್ದರು.

ದೇಣಿಗೆ ನೀಡಿದ ಟಾಪ್‌ ಸಂಸ್ಥೆಗಳು

1.ಡಿಎಲ್‌ಎಫ್-  100 ಕೋಟಿ ರೂ.

2. ಆರ್ಸೆಲಾರ್‌ ಮಿತ್ತಲ್‌ – 75 ಕೋಟಿ ರೂ.

3.ಮಾರುತಿ ಸುಜುಕಿ-  60 ಕೋಟಿ ರೂ.

4.ಮೇಘ ಎಂಜಿನಿಯರಿಂಗ್‌ – 50 ಕೋಟಿ ರೂ.

5. ಹೆಟೆರೋ ಲ್ಯಾಬ್ಸ್ 50 ಕೋಟಿ ರೂ.

6.ಅಪೋಲೋ ಟಯರ್ಸ್‌ 50 ಕೋಟಿ ರೂ.

 

Advertisement

Udayavani is now on Telegram. Click here to join our channel and stay updated with the latest news.

Next