ಭಾರತೀಯ ಸಿನಿಮಾ ರಂಗದಲ್ಲಿ ಹೀರೋವಾಗಲಿ, ನಿರ್ದೇಶಕರಾಗಲಿ ಮಸಾಲಾ, ಹೊಡಿಬಡಿ ಸಿನಿಮಾ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಆದರೆ ಇದರಲ್ಲಿ ಬೆರಳೆಣಿಕೆ ಮಂದಿ ಮಾತ್ರ ದೇಶಪ್ರೇಮ ಸಿನಿಮಾದಲ್ಲಿ ನಟಿಸಲು ಮತ್ತು ಹಣ ಹೂಡಲು ಧೈರ್ಯ ತೋರುತ್ತಾರೆ..ದೇಶಪ್ರೇಮ ಸಿನಿಮಾಗಳ ಪ್ರಸ್ತಾಪ ಬಂದಾಗ ಆ ಕಾಲದಲ್ಲಿ ಮೊತ್ತ ಮೊದಲು ಪ್ರಸ್ತಾಪವಾಗುತ್ತಿದ್ದ ಹೆಸರು ಮನೋಜ್ ಕುಮಾರ್!
ಬಹುತೇಕ ನಟರಿಗೆ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುವುದು ಬೇಕಾಗಿತ್ತು. ಆದರೆ ಬಾಲಿವುಡ್ ನಲ್ಲಿ ಮನೋಜ್ ಕುಮಾರ್ ಅವರನ್ನು ಮಾತ್ರ ಹಾಕಿಕೊಂಡು ದೇಶಪ್ರೇಮದ ಸಿನಿಮಾವನ್ನು ನಿರ್ಮಿಸಬಹುದಾಗಿತ್ತು! ದೇಶಪ್ರೇಮ ಸಿನಿಮಾದಲ್ಲಿ ನಟಿಸುತ್ತಿದ್ದ ಕಾರಣಕ್ಕಾಗಿಯೇ “ಭಾರತ್ ಕುಮಾರ್” ಎಂದು ಪ್ರೇಕ್ಷಕರು, ಅಭಿಮಾನಿಗಳು ಬಿರುದು ಕೊಟ್ಟು ಬಿಟ್ಟಿದ್ದರಂತೆ!
ಅಂದು ಟ್ರೆಂಡಿಂಗ್ ಕಿಂಗ್ ಅನ್ನಿಸಿಕೊಂಡಿದ್ದ ಮನೋಜ್ ಕುಮಾರ್ ಸಿನಿಮಾಗಳ ಕಥೆ ಹೇಗಿದ್ದವು ಅಂದ್ರೆ…ದೇಶದ ಕಾನೂನಿನಿಂದ ತೊಂದರೆಗೊಳಗಾಗುವ ವ್ಯಕ್ತಿ(ಹೀರೋ) ಅಥವಾ ನಿರುದ್ಯೋಗಕ್ಕೆ ಬಲಿಪಶುವಾಗುವ ನಾಯಕನಾಗಿರುತ್ತಿದ್ದರು! ತನ್ನ ಅದ್ಭುತ ನಟನೆಯಿಂದಾಗಿ ಕುಮಾರ್ ಜನಪ್ರಿಯರಾಗಿದ್ದರು.
ದಿಲೀಪ್ ಕುಮಾರ್ ಅಭಿಯಾಗಿದ್ದ ಗೋಸ್ವಾಮಿ ಮನೋಜ್ ಆಗಿ ಬದಲಾಗಿದ್ದರು!
ಭಾರತ ಇಬ್ಭಾಗವಾಗುವ ಮುನ್ನ ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಕುಮಾರ್ ಜನಿಸಿದ್ದರು. ಮೂಲ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ..ಹತ್ತು ವರ್ಷ ಬಾಲಕನಾಗಿದ್ದ ವೇಳೆಯಲ್ಲಿಯೇ ಭಾರತ್ ಮತ್ತು ಪಾಕ್ ಇಬ್ಭಾಗವಾದ ಸಂದರ್ಭದಲ್ಲಿ ಪೋಷಕರು ದೆಹಲಿಗೆ ವಲಸೆ ಬಂದಿದ್ದರು! ಆರಂಭದಲ್ಲಿ ವಿಜಯ್ ನಗರ್ ಕಿಂಗ್ಸ್ ವೇ ಶಿಬಿರದಲ್ಲಿ ನಿರಾಶ್ರಿತರಾಗಿ ದಿನಕಳೆದಿದ್ದರಂತೆ! ಆ ಕರಾಳ ರಾತ್ರಿ, ಹಿಂಸಾಚಾರ ನಿಂತ ಬಳಿಕ ನವದೆಹಲಿಯ ಹಳೇ ರಾಜೇಂದ್ರ ನಗರಕ್ಕೆ ಬಂದು ನೆಲೆಸಿದ್ದರು. ಹೀಗೆ ದೆಹಲಿಯ ಹಿಂದೂ ಕಾಲೇಜ್ ನಲ್ಲಿ ಪದವಿ ಶಿಕ್ಷಣ ಪಡೆದ ಮೇಲೆ ಗೋಸ್ವಾಮಿ ಮನಸ್ಸಿನ ತುಂಬಾ ತುಂಬಿಕೊಂಡಿದ್ದು ಸಿನಿಮಾ ರಂಗ ಪ್ರವೇಶಿಸುವುದು.
ತರುಣ ಗೋಸ್ವಾಮಿ ಬಾಲಿವುಡ್ ನ ಸ್ಟಾರ್ ಗಳಾಗಿದ್ದ ದಿಲೀಪ್ ಕುಮಾರ್, ಅಶೋಕ್ ಕುಮಾರ್ ಹಾಗೂ ಕಾಮಿನಿ ಕೌಶಾಲ್ ಜೊತೆಯಾಗಿ ನಟಿಸಿದ್ದ ಶಬ್ ನಮ್(1949 ವರ್ಷ) ಸಿನಿಮಾ ವೀಕ್ಷಿಸಿದ್ದ. ಆ ಸಿನಿಮಾದಲ್ಲಿ ದಿಲೀಪ್ ಕುಮಾರ್ ನಟನೆಯ ಕಂಡ ಬಳಿಕ ಗೋಸ್ವಾಮಿ ತನ್ನ ಹೆಸರನ್ನು ಮನೋಜ್ ಕುಮಾರ್ ಎಂದು ಬದಲಾಯಿಸಿಕೊಂಡುಬಿಟ್ಟಿದ್ದರು.!
ಮನೋಜ್ ಕುಮಾರ್ ದೇಶಭಕ್ತ ಹೀರೋ ಎಂದೇ ಪ್ರಸಿದ್ಧಿ!
1957ರ ಹೊತ್ತಿಗೆ ಮನೋಜ್ ಕುಮಾರ್ ಫ್ಯಾಶನ್ ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಅದು ಅವರ ಸಿನಿ ಜೀವನಕ್ಕೆ ಯಾವುದೇ ರೀತಿಯಲ್ಲೂ ಸಹಕಾರಿಯಾಗಿಲ್ಲವಾಗಿತ್ತು. 1960ರಲ್ಲಿ ಕಾಂಚ್ ಕೀ ಗುಡಿಯಾ ಚಿತ್ರದಲ್ಲಿ ಸೈದಾ ಖಾನ್ ಜೊತೆ ಮನೋಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1962ರಲ್ಲಿ ಹರಿಯಾಲಿ ಔರ್ ರಾಸ್ತಾ ಸಿನಿಮಾದಲ್ಲಿ ಹೀರೋವಾಗಿದ್ದ ಮನೋಜ್ ಕುಮಾರ್ ಗೆ ಮಾಲಾ ಸಿನ್ನಾ ನಾಯಕಿಯಾಗಿದ್ದರು.
1960ರಲ್ಲಿ ರೋಮ್ಯಾಂಟಿಕ್ ಸಿನಿಮಾಗಳಾದ ಹನಿಮೂನ್, ಅಪ್ನಾ ಬನಾಕೆ ದೇಖೋ, ನಕಲಿ ನವಾಬ್, ಪತ್ಥರ್ ಕೆ ಸನಂ ಹಾಗೂ ಸಾಮಾಜಿಕ ಕಳಕಳಿಯ ಶಾದಿ, ಪೆಹಚಾನ್ ಔರ್ ಆದ್ಮಿ, ಥ್ರಿಲ್ಲರ್ ಸಿನಿಮಾಗಳಾದ ಗುಮ್ ನಾಮ್, ಅನಿತಾ, ವೋ ಕೌನ್ ತಿ ಕುಮಾರ್ ಅವರ ಯಶಸ್ವಿ ಚಿತ್ರಗಳಾಗಿದ್ದವು.
ಹೀಗೆ ಬಾಲಿವುಡ್ ನ್ನು ಪ್ರವೇಶಿಸಿದ್ದ ಮನೋಜ್ ಕುಮಾರ್ ಗೆ ದೊಡ್ಡ ಬ್ರೇಕ್ ತಂದುಕೊಟ್ಟ ಸಿನಿಮಾ ಶಾಹೀದ್..ಇದು 1965ರಲ್ಲಿ ಬಿಡುಗಡೆ ಕಂಡಿತ್ತು. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಭಗತ್ ಸಿಂಗ್ ಜೀವನಾಧಾರಿತ ಕಥಾ ಹಂದರದ ಸಿನಿಮಾ ಅದಕ್ಕಾಗಿತ್ತು. ಇದರೊಂದಿಗೆ ಮನೋಜ್ ಕುಮಾರ್ ಅವರ ದೇಶಪ್ರೇಮಿ ಹೀರೋ ಪಯಣ ಆರಂಭಗೊಂಡಿತ್ತು.
ಖುದ್ದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯೇ ಸಿನಿಮಾ ಮಾಡುವಂತೆ ಕೇಳಿಕೊಂಡಿದ್ದರು!
1965ರಲ್ಲಿ ಭಾರತ, ಪಾಕಿಸ್ತಾನ ಯುದ್ಧ ಮುಗಿದ ಬಳಿಕ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಖುದ್ದು ಮನೋಜ್ ಕುಮಾರ್ ಅವರ ಬಳಿ ಜನಪ್ರಿಯ ಘೋಷವಾಕ್ಯವಾದ ಜೈ ಜವಾನ್, ಜೈ ಕಿಸಾನ್ ಆಧಾರಿತ ಸಿನಿಮಾ ನಿರ್ಮಿಸುವಂತೆ ಕೇಳಿಕೊಂಡಿದ್ದರಂತೆ! ಅದರ ಫಲಿತಾಂಶವೆಂಬಂತೆ ಕುಮಾರ್ 1957ರಲ್ಲಿ “ಉಪಕಾರ್” ಎಂಬ ಮಹಾನ್ ದೇಶಪ್ರೇಮದ ಸಿನಿಮಾವನ್ನು ನಿರ್ದೇಶಿಸುವಂತಾಗಿತ್ತು. ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಅವರು ಸೈನಿಕ ಹಾಗೂ ರೈತನ ಪಾತ್ರದಲ್ಲಿ ಅಭಿನಯಿಸಿದ್ದರು. ಅಂದು ಸೂಪರ್ ಹಿಟ್ ಆಗಿದ್ದ ಉಪಕಾರ್ ಸಿನಿಮಾಕ್ಕಾಗಿ ಕುಮಾರ್ ಫಿಲ್ಮ್ ಫೇರ್ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಗೆ ಭಾಜನರಾಗಿದ್ದರು!
ಹೀಗೆ 1970ರಲ್ಲಿ ಪೂರ್ವ ಔರ್ ಪಶ್ಚಿಮ್, 1972ರಲ್ಲಿ ಬೀ ಇಮಾನ್(ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಗೆ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು), 1972ರಲ್ಲಿ ಕುಮಾರ್ ನಿರ್ದೇಶಿಸಿ, ನಟಿಸಿದ್ದ ಶೋರ್ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು ಹೀಗೆ ಹಲವು ದೇಶಪ್ರೇಮಿ ಕಥಾಹಂದರದ ಸಿನಿಮಾಗಳಲ್ಲಿ ನಟಿಸಿ ದೇಶಪ್ರೇಮಿ ಹೀರೋ ಎಂದು ಜನಪ್ರಿಯರಾಗಿದ್ದರು.
1970ರ ದಶಕದ ಕೊನೆಯಲ್ಲಿ ರೋಟಿ, ಕಪಡಾ ಔರ್ ಮಕಾನ್, ಸನ್ಯಾಸಿ ಹಾಗೂ ದಸ್ ನಂಬರಿ(1976) ಸಿನಿಮಾ ಹಿಟ್ ಆಗುವ ಮೂಲಕ ಮನೋಜ್ ಕುಮಾರ್ ಅವರ ಸಿನಿ ಜೀವನ ಉತ್ತುಂಗಕ್ಕೆ ಏರಲು ಮೆಟ್ಟಿಲುಗಳಾಗಿಬಿಟ್ಟಿದ್ದವು. ಇದರಿಂದಾಗಿಯೇ ನಿರ್ದೇಶನದ ಅವಕಾಶವೂ ಒಲಿದು ಬಂದಿತ್ತು. ತನ್ನ ತಾರುಣ್ಯದಲ್ಲಿಯೇ ಆರಾಧಿಸುತ್ತಿದ್ದ, ಅಭಿಮಾನದಿಂದ ಕಾಣುತ್ತಿದ್ದ ಖ್ಯಾತ ನಟ ದಿಲೀಪ್ ಕುಮಾರ್ ಜೊತೆ ಅಭಿನಯಿಸುವ ಸುವರ್ಣಾವಕಾಶ ಒದಗಿಬಂದಿತ್ತು. 1981ರಲ್ಲಿ ಮನೋಜ್ ಕುಮಾರ್ ನಿರ್ಮಾಣದಲ್ಲಿ ನಿರ್ದೇಶಿಸಿದ್ದ ಕ್ರಾಂತಿ ಸಿನಿಮಾದಲ್ಲಿ ಮನೋಜ್ ಕುಮಾರ್, ದಿಲೀಪ್ ಕುಮಾರ್, ಶಶಿಕಪೂರ್, ಹೇಮಾ ಮಾಲಿನಿ ಸೇರಿದಂತೆ ಘಟಾನುಘಟಿ ನಟರ ದಂಡೇ ಅಭಿನಯಿಸಿತ್ತು. ಇದು ಮನೋಜ್ ಕುಮಾರ್ ಅವರ ಜೀವನದ ಕೊನೆಯ ಯಶಸ್ವಿ ಚಿತ್ರವಾಗಿಬಿಟ್ಟಿತ್ತು.
1980ರ ದಶಕ ಮನೋಜ್ ಕುಮಾರ್ ಅವರ ಸಿನಿ ಜೀವನ ಹೇಳಿಕೊಳ್ಳುವ ಯಶಸ್ಸು ಕಾಣದೆ ವಿಫಲವಾಗಿತ್ತು. ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸೋಲತೊಡಗಿದ್ದವು. 1989ರಲ್ಲಿ ಮನೋಜ್ ಕುಮಾರ್ ಅವರು ನಿರ್ಮಿಸಿದ್ದ ಕ್ಲರ್ಕ್ ಸಿನಿಮಾದಲ್ಲಿ ಪಾಕಿಸ್ತಾನದ ಸ್ಟಾರ್ ನಟರಾಗಿದ್ದ ಮೊಹಮ್ಮದ್ ಅಲಿ ಮತ್ತು ಝೇಬಾ ನಟಿಸಿದ್ದರು. ಅಷ್ಟೇ ಅಲ್ಲ ಬಾಲಿವುಡ್ ಸಿನಿಮಾವೊಂದರಲ್ಲಿ ಪಾಕ್ ನಟರು ನಟಿಸಿದ್ದ ಮೊದಲ ಮತ್ತು ಕೊನೆಯ ಚಿತ್ರ ಕೂಡಾ ಇದಾಗಿದೆ. ನಂತರ ಸಿನಿ ಜೀವನದಿಂದ ನಿವೃತ್ತರಾದ ಮನೋಜ್ ಕುಮಾರ್ 1995ರಲ್ಲಿ ಮೈದಾನ್ ಎ ಜಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 1999ರಲ್ಲಿ ಜೈ ಹಿಂದ್ ಎಂಬ ದೇಶಪ್ರೇಮ ಕಥಾಹಂದರದ ಸಿನಿಮಾವನ್ನು ನಿರ್ಮಾಣ ಮಾಡಿ, ನಿರ್ದೇಶಿಸಿದ್ದರು. ಆದರೆ ಆ ಸಿನಿಮಾ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಸೋತು ಹೋಗಿತ್ತು. ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಪುತ್ರ ಕುನಾಲ್ ಗೋಸ್ವಾಮಿ, ರವೀನಾ ಟಂಡನ್ ನಟಿಸಿದ್ದರು.
ಮನೋಜ್ ಕುಮಾರ್ ಅವರು ಶಶಿ ಗೋಸ್ವಾಮಿಯನ್ನು ವಿವಾಹವಾಗಿದ್ದು, ವಿಶಾಲ್ ಮತ್ತು ಕುನಾಲ್ ಇಬ್ಬರು ಗಂಡು ಮಕ್ಕಳಿದ್ದಾರೆ. ನಾಲ್ಕು ದಶಕಗಳ ಕಾಲ ಬೆಳ್ಳಿಪರದೆ ಮೇಲೆ ರಾರಾಜಿಸಿದ್ದ ಮನೋಜ್ ಕುಮಾರ್ ಅವರ ಅದ್ಭುತ ನಟನೆಗಾಗಿ ಭಾರತ ಸರ್ಕಾರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಮನೋಜ್ ಕುಮಾರ್ ಗೆ ಸಂದಿದೆ. ಇಳಿವಯಸ್ಸಿನಲ್ಲಿ ಕಾಲಕಳೆಯುತ್ತಿರುವ ಮನೋಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ..ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂಬುದೇ ಹಾರೈಕೆ…
*ನಾಗೇಂದ್ರ ತ್ರಾಸಿ