Advertisement

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

10:26 PM Dec 23, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳ ಪ್ರವರ್ತಕ ಎಂದೇ ಖ್ಯಾತಿ ಪಡೆದುಕೊಂಡಿದ್ದ ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌(90) ಸೋಮವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.

Advertisement

ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಮುಂಬೈನ ವೋಕಾರ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.14ರಂದು ಅವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು ಎಂದು ಅವರ ಪುತ್ರಿ ಪಿಯಾ ಬೆನೆಗಲ್‌ ಹೇಳಿದ್ದಾರೆ.

1934ರಲ್ಲಿ ಅಂದಿನ ಹೈದರಾಬಾದ್‌ ಪ್ರಾಂತ್ಯದ ತಿರುಮಲಗಿರಿಯಲ್ಲಿ ಅವರು ಜನಿಸಿದ್ದರು. ಕಾಪಿರೈಟರ್‌ ಆಗಿ ವೃತ್ತಿಜೀವನ ಆರಂಭಿಸಿದ ಅವರು, ಗುಜರಾತಿಯಲ್ಲಿ ಮೊದಲ ಸಾಕ್ಷ್ಯಚಿತ್ರ “ಘೇರ್‌ ಬೇತಾ ಗಂಗಾ’ವನ್ನು 1962ರಲ್ಲಿ ನಿರ್ಮಿಸಿದರು. ಅಲ್ಲದೆ 1980ರಿಂದ 1986ರವರೆಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಮಂಡಿ ಸಿನಿಮಾ ರಾಜಕೀಯ ಮತ್ತು ವೇಶ್ಯಾವಾಟಿಕೆ ವಿಷಯಗಳಿಗೆ ಸಂಬಂಧಿಸಿದ ಕಥಾಹಂದರವನ್ನು ಒಳಗೊಂಡಿದೆ.

18 ರಾಷ್ಟ್ರೀಯ ಪ್ರಶಸ್ತಿಗಳು:

ನೈಜವಾಗಿ ಕಥೆ ಹೇಳುವಿಕೆ ಮತ್ತು ಸಾಮಾಜಿಕ ಒಳನೋಟಗಳನ್ನೊಳಗೊಂಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಶ್ಯಾಂ ಬೆನೆಗಲ್‌ ಅವರು ಹೆಸರುವಾಸಿಯಾಗಿದ್ದರು. ಇದಕ್ಕಾಗಿ ಇವರು 18 ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ 1976ರಲ್ಲಿ ಪದ್ಮಶ್ರೀ, 1991ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಿ ಭಾರತ ಸರ್ಕಾರ ಅವರನ್ನು ಗೌರವಿಸಿದೆ. 2005ರಲ್ಲಿ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ. ಶ್ಯಾಂ ಬೆನೆಗಲ್‌ ಅವರು ಅಂಕುರ್‌, ನಿಶಾಂತ್‌, ಮಂಥನ್‌, ಭೂಮಿಕಾ, ಮಮ್ಮೋ, ಸರ್ದಾರಿ ಬೇಗಂ ಮತ್ತು ಜುಬೇದಾ ಸಿನಿಮಾಗಳಿಗಾಗಿ ಹೆಸರುವಾಸಿಯಾಗಿದ್ದಾರೆ.



ಅನಂತ್‌ ನಾಗ್‌ ಜೊತೆ ಹಿಂದಿ ಸಿನಿಮಾ

ಕನ್ನಡದ ಹಿರಿಯ ನಟ ಅನಂತ್‌ನಾಗ್‌ ಅಭಿನಯದಲ್ಲಿ ಹಲವು ಚಿತ್ರಗಳ ನಿರ್ದೇಶನ ಮಾಡುವ ಮೂಲಕ ಅನಂತ್‌ನಾಗ್‌ ಅವರನ್ನು ಹಿಂದಿಯಲ್ಲಿ ಪರಿಚಯಿಸಿದ ಖ್ಯಾತಿ ಕೂಡಾ ಬೆನಗಲ್‌ ಅವರದ್ದು. ಅಂಕುರ್‌, ನಿಶಾಂತ್‌, ಮಂಥನ್‌?, ಭೂಮಿಕಾ, ಕೊಂಡೂರಾ, ಕಲಿಯುಗ್‌? ಮುಂತಾದ ಶ್ಯಾಮ್‌ ಬೆನೆಗಲ್‌ ನಿರ್ದೇಶನದ ಚಿತ್ರಗಳಲ್ಲಿ ಅನಂತ್‌ ನಾಗ್‌ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next