Advertisement

Mangaluru: ಸ್ಟೇಟ್‌ಬ್ಯಾಂಕ್‌; ಮೇಲ್ದರ್ಜೆಗೇರಿದ ಜಿಐಎಸ್‌ ಸಬ್‌ಸ್ಟೇಶನ್‌ ಸಿದ್ಧ

02:32 PM Dec 10, 2024 | Team Udayavani |

ಮಹಾನಗರ: ನಗರದೊಳಗೆ ವಿದ್ಯುತ್‌ ಪೂರೈಕೆಯಲ್ಲಿ ಎದುರಾಗುತ್ತಿರುವ ವ್ಯತ್ಯಯಗಳನ್ನು ನಿಭಾಯಿಸಲು ಸ್ಟೇಟ್‌ಬ್ಯಾಂಕ್‌ನ ನೆಹರು ಮೈದಾನದ ಬಳಿ 55 ಕೋ. ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ ಸಬ್‌ಸ್ಟೇಶನ್‌ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. ಆ ಮೂಲಕ ನಗರಕ್ಕೆ ಅನಿಯಮಿತವಾಗಿ ವಿದ್ಯುತ್‌ ಪೂರೈಸಬಹುದಾಗಿದೆ.

Advertisement

ಹಿಂದೆ ಇದ್ದ 33 ಕೆ.ವಿ. ಸಾಮರ್ಥ್ಯದ ಸಬ್‌ ಸ್ಟೇಶನ್‌ ಬದಲು ನೂತನ 110 ಕೆ.ವಿ. ಸ್ಟೇಶನ್‌ ನಿರ್ಮಿಸುವ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದೆ. ಆ ಮೂಲಕ ಜಿಲ್ಲೆಯಲ್ಲೇ ಮೊದಲ 110 ಕೆ.ವಿ.ಯ ಅತ್ಯಾಧುನಿಕ ತಂತ್ರಜ್ಞಾನ ಗ್ಯಾಸ್‌ ಇನ್ಸುಲೇಟೆಡ್‌ ಸ್ಟೇಶನ್‌(ಜಿಐಎಸ್‌) ಆಗಿ ಮೇಲ್ದರ್ಜೆಗೆ ಏರಲಿದೆ.

ಬಹುತೇಕ ಕೆಲಸಗಳು ಪೂರ್ಣ
ನೂತನ ಕಟ್ಟಡ, ವಿದ್ಯುತ್‌ ಪೂರೈಕೆಗೆ ಬೇಕಾದ ಟ್ರಾನ್ಸ್‌ಫಾರ್ಮರ್‌ ಜೋಡಣೆ, ಇತರ ಅಗತ್ಯ ಪರಿಕರಗಳ ಅಳವಡಿಕೆ ಸೇರಿದಂತೆ ಇತರ ಕೆಲಸ ಕಾರ್ಯಗಳು ಪೂರ್ಣಗೊಂಡಿವೆ. ವಿದ್ಯುತ್‌ ಸರಬರಾಜು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲಾಗುತ್ತಿದೆ. ಪ್ರಾಯೋಗಿಕ ಕಾರ್ಯ ಪೂರ್ಣಗೊಂಡ ಬಳಿಕವೇ ಕಾರ್ಯಾ ರಂಭಗೊಳ್ಳಲಿದೆ.

ನೆಹರೂ ಮೈದಾನ ಸಮೀಪವಿರುವ 33 ಕೆ.ವಿ. ಸಾಮರ್ಥ್ಯದ ಸಬ್‌ಸ್ಟೇಶನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅಕ್ಕಪಕ್ಕದ ವಿವಿಧ ಭಾಗಗಳಿಗೆ ವಿದ್ಯುತ್‌ ಸರಬರಾಜು ಆಗುತ್ತಿದೆ. ಹೀಗಾಗಿ ಸಾಮಾನ್ಯವಾಗಿ ಇಲ್ಲಿ ಒತ್ತಡ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಜಿಐಎಸ್‌ ತಂತ್ರಜ್ಞಾನದಂತೆ ಮೇಲ್ದ ರ್ಜೆಗೇರಿಸಬೇಕಾದ ಅಗತ್ಯ ಮನಗಂಡು ಮೆಸ್ಕಾಂ ಕೆಪಿಟಿಸಿಎಲ್‌ಗೆ ಪ್ರಸ್ತಾವನೆ ಕಳುಹಿ ಸಿತ್ತು. ಅದರಂತೆ ಮೈದಾನದ ಹಳೆ ಸ್ಟೇಶನ್‌ ಬಳಿ ನೂತನ ಕೇಂದ್ರ ಸ್ಥಾಪಿಸಲಾಗಿದೆ.

ಕೆಪಿಟಿಸಿಎಲ್‌ನ ಕಾವೂರಿನಲ್ಲಿರುವ 220 ಕೆ.ವಿ. ಶರಾವತಿ ವಿದ್ಯುತ್‌ ಸ್ವೀಕರಣಾ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್‌ಸ್ಟೇಷನ್‌ಗೆ ವಿದ್ಯುತ್‌ ಸರಬರಾಜಾಗುತ್ತದೆ. ಇದರಂತೆ ನೆಹರೂ ಮೈದಾನಿನ ಪಕ್ಕದ ಸಬ್‌ಸ್ಟೇಷನ್‌ಗೆ ವಿದ್ಯುತ್‌ ಸರಬರಾಜಾಗುತ್ತಿದೆ. ಕಾವೂರಿನಿಂದ ಬಿಜೈಯ 110 ಕೆ.ವಿ. ಸಬ್‌ಸ್ಟೇಶನ್‌ ಮೂಲಕ ನೆಹರು ಮೈದಾನಕ್ಕೆ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಭೂಗತ ಕೇಬಲ್‌ ಅಳವಡಿಕೆ ಕಾರ್ಯ ವರ್ಷದ ಹಿಂದೆಯೇ ಕೆಪಿಟಿಸಿಎಲ್‌ ಪೂರ್ಣಗೊಳಿಸಿದೆ.

Advertisement

ಏನಿದು ಜಿಐಎಸ್‌
ಜಪಾನಿನಲ್ಲಿ ಪ್ರಥಮವಾಗಿ ಗ್ಯಾಸ್‌ ಇನ್ಸುಲೇಟೆಡ್‌ ವಿಧಾನ ಅಭಿವೃದ್ಧಿ ಪಡಿಸಲಾಗಿತ್ತು. ಹೈ ವೋಲ್ಟೇಜ್‌ ವಿದ್ಯುತ್‌ ಪ್ರಸರಣದ ಪ್ರಮುಖ ರಚನೆಗಳನ್ನು ಕಿರಿದಾಗಿಸಿ, ಸಲ್ಫರ್‌ ಹೆಕ್ಸಾಫ್ಲೂರಿಡ್‌ ಗ್ಯಾಸ್‌ ಕವಚದಲ್ಲಿ ಮುಚ್ಚಿಡುವ ವಿಧಾನ ಇದಾಗಿದೆ. ಬ್ರೇಕರ್‌, ಟ್ರಾನ್‌ಫಾರ್ಮರ್‌ ಯಾರ್ಡ್‌ ಸಣ್ಣ ಕಂಟ್ರೋಲ್‌ ರೂಂನಿಂದ ಇದನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ 110 ಕೆ.ವಿ. ಸಬ್‌ ಸ್ಟೇಶನ್‌ಗೆ 100 ಚದರ ಮೀ.ನಷ್ಟು ಜಾಗದ ಅಗತ್ಯವಿದ್ದರೆ, ಜಿಐಎಸ್‌ ಸಬ್‌ ಸ್ಟೇಶನ್‌ಗೆ ಕೇವಲ 30 ಚದರ ಮೀ. ಜಾಗ ಸಾಕಾಗುತ್ತದೆ. ಇದರ ನಿರ್ಮಾಣ ವೆಚ್ಚ ದುಬಾರಿಯಾದರೂ ಆದರೆ ನಿರ್ವಹಣೆ ಸರಳ ಹಾಗೂ ಹೆಚ್ಚು ಹಣ ವ್ಯಯವಾಗುವುದಿಲ್ಲ.

ಟ್ರಾನ್ಸ್‌ಫಾರ್ಮರ್‌ ಸಾಮರ್ಥ್ಯ ಇಮ್ಮಡಿ
‘ನೆಹರೂ ಮೈದಾನಿನ ಪಕ್ಕದ ಈಗಿನ ಸಬ್‌ಸ್ಟೇಶನ್‌ನಲ್ಲಿ 5 ಎಂ.ವಿ.ಎ ಸಾಮರ್ಥಯದ 2 ಟ್ರಾನ್ಸ್‌ಫಾರ್ಮರ್‌ ಸದ್ಯ ಬಳಕೆಯಲ್ಲಿದ್ದರೆ, ಮುಂದೆ ಹೊಸ ಸ್ಟೇಶನ್‌ನಲ್ಲಿ 20 ಎಂ.ವಿ.ಎ. ಸಾಮರ್ಥ್ಯದ 3 ಟ್ರಾನ್ಸ್‌ಫಾರ್ಮರ್‌ಗಳು ಬರಲಿದೆ. ಈ ಮೂಲಕ ವಿದ್ಯುತ್‌ ಒತ್ತಡ ಕಡಿಮೆಯಾಗಿ ವಿದ್ಯುತ್‌ ಹಂಚಿಕೆ ಸುಲಭವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ 33 ಕೆ.ವಿ. ಸಬ್‌ಸ್ಟೇಶನ್‌ಗಳಾದ ಅತ್ತಾವರ, ಕದ್ರಿ, ಕಂಕನಾಡಿಗಳಲ್ಲಿ ತುರ್ತು ಕೆಲಸ ಕಾರ್ಯಗಳಲಿದ್ದಾಗ ವಿದ್ಯುತ್‌ ಪೂರೈಸಲು ಅವಕಾಶ ಹೊಂದಿದೆ. ಬಿಜೈ ಸ್ಟೇಶನ್‌ಗೆ ಪ್ರಸ್ತುತ ಇರುವ ಒತ್ತಡ ನಿವಾರಣೆಯಾಗಲಿದೆ. ಜಿಐಎಸ್‌ ಸ್ಟೇಶನ್‌ ಆಗಿರುವ ಕಾರಣ ನಿರ್ವಹಣೆ ಸುಲಭವಾಗಿಲಿದೆ.

ಹಳೆಯ ಸಬ್‌ಸ್ಟೇಶನ್‌ ತೆರವಿಗೆ ಕ್ರಮ
ಹಳೆಯ ಸಬ್‌ಸ್ಟೇಶನ್‌ನ ಟ್ರಾನ್ಸ್‌ ಫಾರ್ಮರ್‌ ಸದ್ಯ ಬಳಸಬಹು ದಾಗಿದೆ. ಉಳಿದಂತೆ ಯಾವುದೇ ವಸ್ತುಗಳನ್ನು ಮರುಬಳಕೆ ಮಾಡುವ ಹಾಗಿಲ್ಲ. ಹಳೆಯ ಸಬ್‌ಸ್ಟೇಷನ್‌ನ ಇತರ ವಸ್ತುಗಳನ್ನು ಮೆಸ್ಕಾಂ ತೆರವುಗೊಳಿಸಲಿದೆ. ನಗರದ ವಿವಿಧ ಭಾಗಗಳಿಗೆ 33 ಕೆ.ವಿ. ಸಬ್‌ ಸ್ಟೇಶನ್‌ನಿಂದ ವಿದ್ಯುತ್‌ ಪೂರೈಕೆ ಯಾಗುತ್ತಿರುವ ಕಾರಣ ದಿಂದ ಹೊಸ ಸಬ್‌ಸ್ಟೇಷನ್‌ ಕಾರ್ಯಾರಂಭದ ಬಳಿಕವೇ ಹಳೆಯ ಸಬ್‌ ಸ್ಟೇಷನ್‌ ತೆರವು ಕಾರ್ಯ ನಡೆಯಲಿದೆ.

11 ಕೆ.ವಿ. ಟ್ರಾನ್ಸ್‌ಫಾ ರ್ಮರ್‌ ಅಳವಡಿಕೆ ಹಾಗೂ ಪರಿಶೀಲನೆ ಕಾರ್ಯ ನಡೆಯು ತ್ತಿದೆ. ಉಳಿದಂತೆ ಕೆಲವು ತಾಂತ್ರಿಕ ಕೆಲಸ ಬಾಕಿ ಉಳಿದಿದ್ದು, ಅವುಗಳ ನ್ನು ನಿಭಾಯಿಸಲಾಗುತ್ತಿದೆ. ಸಾಧ್ಯವಾದಷ್ಟು ಶೀಘ್ರದಲ್ಲೇ ಸಂಪೂರ್ಣ ಕಾರ್ಯಾಚರಣೆಗೆ ಕ್ರಮ ವಹಿಸಲಾಗುತ್ತಿದೆ.
– ಚೈತನ್ಯ, ಕೆಪಿಟಿಸಿಯಲ್‌ ಸೂಪರಿಂಟೆಂಡೆಂಟ್‌ ಎಂಜಿನಿಯರ್‌

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next