Advertisement

Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!

12:59 PM Dec 15, 2024 | Team Udayavani |

ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ನಾನಾ ಮೇಳಗಳ ಮಳಿಗೆಗಳ ಪೈಕಿ ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಕಾಲೇಜಿನ ನಂಬ್ರ 58 ವಿಶಿಷ್ಟವಾಗಿದೆ. ಕೇಂದ್ರ ಸರಕಾರದ ಆಯುಷ್‌ ಇಲಾಖೆಯ ಮೂಲಕ ಜಾರಿಗೆ ಬಂದಿರುವ ‘ದೇಶ್‌ ಕಾ ಪ್ರಕೃತಿ ಪರೀಕ್ಷಣ್‌ ಅಭಿಯಾನ್‌’ ಎಂಬ ಯೋಜನೆಯ ಮಹತ್ವವನ್ನು ಈ ಮಳಿಗೆಯಲ್ಲಿರುವ ವೈದ್ಯರು, ತರಬೇತಾದ ಸ್ವಯಂಸೇವಕರು ತಿಳಿಸಿಕೊಡುತ್ತಾರೆ.

Advertisement

ದೇಶದ ಪ್ರಜೆಗಳ ದೈಹಿಕ ಪ್ರಕೃತಿ ಹೇಗಿದೆ ಎಂಬುದನ್ನು ತಿಳಿದು ಎಲ್ಲರ ಮಾಹಿತಿಯನ್ನು ಕಲೆ ಹಾಕುವ ಮೂಲಕ ದೇಶದ ಆರೋಗ್ಯ ಸ್ಥಿತಿ ಗತಿ ಹೇಗಿದೆ ಎಂಬುದನ್ನು ತಿಳಿದು ಅದಕ್ಕೆ ತಕ್ಕ ಆರೋಗ್ಯ ಕ್ರಮಗಳನ್ನು ಹೇಗೆ ಅನುಸರಿಸಬಹುದು ಎಂಬುದನ್ನು ನಿರ್ದರಿಸುವ ಮಹತ್ವದ ಯೋಜನೆ ಇದಾಗಿದೆ.

ಈ ಮಳಿಗೆಯಲ್ಲಿ ‘ದೇಶ್‌ ಕಾ ಪ್ರಕೃತಿ ಪರೀಕ್ಷಣ್‌’ ಆ್ಯಪನ್ನು ಡೌನ್‌ಲೋಡ್‌ ಮಾಡಿಕೊಡುವ ವೈದ್ಯರು ಮುಂದೆ 21 ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಕೊಟ್ಟ ಸಮರ್ಪಕ ಉತ್ತರವನ್ನು ದಾಖಲಿಸಿದ ಬಳಿಕ ಮಾಹಿತಿ ನೀಡಿದವರ ವಿವರ ಸಚಿತ್ರವಾಗಿ ಆಯುಷ್‌ ಇಲಾಖೆಗೆ ಸೂಕ್ತವಾಗಿ ರವಾನೆಯಾಗುತ್ತದೆ.

ಮಾಹಿತಿ ನೀಡಿದವರ ಮಾನಸಿಕ, ದೈಹಿಕ ದೋಷ (ವಾತ, ಪಿತ್ಥ, ಕಫ) ಪ್ರಕೃತಿಯ ಕುರಿತಾದ ದಾಖಲೆ ಲಭ್ಯವಾಗುತ್ತದೆ. ಈ ದಾಖಲೆಯಲ್ಲಿ ಮಾಹಿತಿದಾರರು ಮುಂದೆ ಯಾವ ರೀತಿಯ ಆಹಾರ ಕ್ರಮ ಪಥ್ಯ ಅನುಸರಿಸಬೇಕು, ವ್ಯಾಯಾಮ, ಯೋಗದ ಪರಿಪಾಲನೆ ಕುರಿತಾಗಿ ವಿವರ ನೀಡಲಾಗುತ್ತದೆ.

ಈ ಎಲ್ಲ ದಾಖಲೆಗಳು ಆಯುರ್ವೇದ ವೈದ್ಯರ ಮೂಲಕ, ಅವರ ಸಂಸ್ಥೆಯ ಮೂಲಕ ಆಯುಷ್‌ ಇಲಾಖೆಗೆ ರವಾನೆಯಾಗುತ್ತದೆ.

Advertisement

ಮುಂದೆಯೂ ಇದೆ
ಈ ಅಭಿಯಾನ ಕೇವಲ ಆಳ್ವಾಸ್‌ ವಿರಾಸತ್‌ನಲ್ಲಿ ಮಾತ್ರವಲ್ಲ ಮುಂದೆಯೂ ಆಯುರ್ವೇದ ವೈದ್ಯರ ಮೂಲಕ ಎಲ್ಲ ಕಡೆ ನಡೆಯಲಿದೆ. ವಿಶೇಷವಾಗಿ, ಆಳ್ವಾಸ್‌ ಆಯುರ್ವೇದ ಕಾಲೇಜಿನವರು ಮಾರುಕಟ್ಟೆ, ಸಂಘಸಂಸ್ಥೆಗಳು, ಜನರು ಜಮಾಯಿಸುವಲ್ಲೆಲ್ಲ ಈ ಅಭಿಯಾನವನ್ನು ಮುಂದುವರಿಸಲಿದ್ದಾರೆ. ವಿರಾಸತ್‌ ಮಳಿಗೆ ರವಿವಾರ ರಾತ್ರಿ ವರೆಗೂ ತೆರೆದಿರುತ್ತದೆ. ಉಳಿದಂತೆ, ಆಳ್ವಾಸ್‌ ಆಯುರ್ವೇದ ಕಾಲೇಜಿನಲ್ಲಿ ವಿಚಾರಿಸಬಹುದಾಗಿದೆ. ನೆನಪಿರಲಿ: ವೈಯಕ್ತಿಕವಾಗಿ ಈ ಆ್ಯಪ್‌ ತೆರೆಯುವಂತಿಲ್ಲ, ಆಯುರ್ವೇದ ವೈದ್ಯರ ಮೂಲಕವಷ್ಟೇ ಈ ಯೋಜನೆಯಲ್ಲಿ ಪಾಲ್ಗೊಂಡು ಆರೋಗ್ಯ ಲಾಭ ಪಡೆದುಕೊಳ್ಳಬಹುದು.

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next