ಮಂಗಳೂರು: ವಿಚಾರವಾದಿಗಳ ಸಂಘದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಪ್ರೊ | ನರೇಂದ್ರ ನಾಯಕ್ ಅವರು ತನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ನಗರದ ಉರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರೊ| ನರೇಂದ್ರ ನಾಯಕ್ ಅವರು ಬುಧವಾರ ಬೆಳಗ್ಗೆ ನಗರದ ಹ್ಯಾಟ್‌ಹಿಲ್‌ನಲ್ಲಿರುವ (ಲಾಲ್‌ಬಾಗ್ ಬಳಿ) ತನ್ನ ಮನೆಯಿಂದ ಕಾರಿನಲ್ಲಿ ಹೊರಟು ಬಂದಾಗ ಬುಲೆಟ್ ಬೈಕ್‌ನಲ್ಲಿ ಬಂದ ಇಬ್ಬರು ತಡೆದು ನಿಲ್ಲಿಸಿ “ನಿಮ್ಮ ಕಾರಿನ ಟೈರ್‌ನಲ್ಲಿ ಗಾಳಿ ಇಲ್ಲ’ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದಾರೆ ಎಂದವರು ದೂರಿನಲ್ಲಿ ವಿವರಿಸಿದ್ದಾರೆ.
“ನಾನು ಕಾರನ್ನು ನಿಲ್ಲಿಸದೆ ಮುಂದುವರಿದು ಸಮೀಪದ ಪೆಟ್ರೋಲ್ ಬಂಕ್‌ಗೆ ತೆರಳಿ ಪರಿಶೀ ಲಿಸಿದಾಗ ಕಾರಿನ ಟೈರ್‌ನಲ್ಲಿ ಗಾಳಿ ಕಡಿಮೆಯಾಗಿಲ್ಲದಿರುವುದು ಕಂಡು ಬಂದಿದೆ. ಹಾಗಾಗಿ ಬೈಕ್‌ನಲ್ಲಿ ಬಂದವರು ಸುಳ್ಳು ಹೇಳಿದ್ದಾರೆ. ಅವರು ನನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದು, ನನ್ನ ಮೇಲೆ ದಾಳಿ ನಡೆಸುವುದು ಅವರ ಉದ್ದೇಶವಾಗಿತ್ತೆಂದು ಭಾಸವಾಗುತ್ತಿದೆ. ಒಂದೊಮ್ಮೆ ನಾನು ಕಾರಿನಿಂದ ಇಳಿಯುತ್ತಿದ್ದರೆ ನನ್ನ ಮೇಲೆ ದಾಳಿ ನಡೆಯುತ್ತಿತ್ತು ಎಂಬ ಸಂಶಯವಿದೆ’ ಎಂದವರು ತಿಳಿಸಿದ್ದಾರೆ.
ವರ್ಷದ ಹಿಂದೆ ಕೊಲೆಯಾದ ಆರ್‌ಟಿಐ ಕಾರ್ಯಕರ್ತ ವಿನಾ ಯಕ ಬಾಳಿಗಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ದಿಶೆಯಲ್ಲಿ ಪ್ರೊ| ನರೇಂದ್ರ ನಾಯಕ್ ಹೋರಾಟ ನಡೆಸುತ್ತಿದ್ದಾರೆ.
ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳಿಂದ ಗನ್ ಮ್ಯಾನ್ ಸೌಲಭ್ಯ ಒದಗಿಸಲಾಗಿದೆ. ಬುಧವಾರ ಗನ್ ಮ್ಯಾನ್ ಬರುವುದಕ್ಕೆ ಮೊದಲೇ ಅವರು ಮನೆಯಿಂದ ಹೊರಟಿದ್ದರು. ಹಾಗಾಗಿ ಗನ್ ಮ್ಯಾನ್ ಜತೆಗಿರಲಿಲ್ಲ.
ಪ್ರೊ| ನರೇಂದ್ರ ನಾಯಕ್ ಅವರು ಸಲ್ಲಿಸಿರುವ ದೂರನ್ನು ಉರ್ವ ಪೊಲೀಸರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್ ದಾಖಲಾಗಬೇಕಿದೆ.
ತನಿಖೆ ನಡೆಯುತ್ತಿದೆ:
ಕಮಿಷನರ್
ಪ್ರೊ| ನರೇಂದ್ರ ನಾಯಕ್ ಅವರು ಬುಧವಾರದ ಘಟನೆಯ ಬಗ್ಗೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅವರಿಗೆ ಕಳೆದ ಐದಾರು ತಿಂಗಳಿಂದ ಹಗಲು ಹೊತ್ತು ಗನ್ ಮ್ಯಾನ್ ಸೌಲಭ್ಯ ನೀಡಲಾಗಿದ್ದು, ಇದೀಗ ಅವರ ಭದ್ರತೆಗಾಗಿ ರಾತ್ರಿ ವೇಳೆಗೆ ಇನ್ನೋರ್ವ ಗನ್ ಮ್ಯಾನ್ ಸೌಲಭ್ಯ ಒದಗಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.