ಪುಣೆ: ಹರಿಯಾಣ ಸ್ಟೀಲರ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು 2024ನೇ ಸಾಲಿನ ಪ್ರೊ ಕಬಡ್ಡಿ ಪ್ರಶಸ್ತಿಗಾಗಿ ಸೆಣಸಲಿವೆ. ರವಿವಾರ ಫೈನಲ್ ಹಣಾಹಣಿ ನಡೆಯಲಿದೆ.
ಶುಕ್ರವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಹರಿಯಾಣ ಸ್ಟೀಲರ್ 28-25 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಹಾಕಿತು. ಹರಿಯಾಣ ಅಗ್ರಸ್ಥಾನದೊಂದಿಗೆ ಲೀಗ್ ಹಂತವನ್ನು ಮುಗಿಸಿತ್ತು. ಯೋಧಾಸ್ ತೃತೀಯ ಸ್ಥಾನಿಯಾಗಿತ್ತು. ಹರಿಯಾಣ ಕಳೆದ ಫೈನಲ್‌ನಲ್ಲಿ ಪುಣೇರಿಗೆ ಶರಣಾಗಿತ್ತು.
ಹರಿಯಾಣ ಪರ ರೈಡರ್‌ಗಳಾದ ಶಿವಂ ಪಟಾರೆ 7, ವಿನಯ್ 6 ಮತ್ತು ಡಿಫೆಂಡರ್ ರಾಹುಲ್ 5 ಅಂಕ ತಂದಿತ್ತರು. ಯೋಧಾಸ್ ತಂಡದ ರೈಡರ್ ಗಗನ್ ಗೌಡ ಪಂದ್ಯದಲ್ಲೇ ಸರ್ವಾಧಿಕ 10 ಅಂಕ ಗಳಿಸಿದರು. ರೈಡರ್ ಭವಾನಿ ರಜಪೂತ್ ಮತ್ತು ಡಿಫೆಂಡರ್ ಹಿತೇಶ್ ತಲಾ 5 ಅಂಕ ತಂದಿತ್ತರು.
ಪಾಟ್ನಾಕ್ಕೆ ರೋಚಕ ಜಯ:
ಜಿದ್ದಾಜಿದ್ದಿಯಿಂದ ಕೂಡಿದ ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಟ್ನಾ ಪೈರೇಟ್ಸ್ 32-28 ಅಂಕಗಳಿಂದ ದಬಾಂಗ್ ಡೆಲ್ಲಿಯನ್ನು ಕೆಡವಿತು. 3 ಬಾರಿಯ ಚಾಂಪಿಯನ್ ಪಾಟ್ನಾಗೆ ಇದು 5ನೇ ಫೈನಲ್.
ರೈಡರ್‌ಗಳಾದ ದೇವಾಂಕ್ ಮತ್ತು ಅಯಾನ್ ತಲಾ 8 ಅಂಕ ಗಳಿಸಿ ಪಾಟ್ನಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.