Advertisement

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

06:10 AM Jan 09, 2025 | Team Udayavani |

ಬೆಂಗಳೂರು (ಪೀಣ್ಯ ದಾಸರಹಳ್ಳಿ): ಮಚ್ಚಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಜಾಲಹಳ್ಳಿ ಕ್ರಾಸ್‌ ಬಳಿ ಬುಧವಾರ ನಡೆದಿದೆ.

Advertisement

ಪತ್ನಿ ಭಾಗ್ಯಮ್ಮ (38), ಪುತ್ರಿ ನವ್ಯಾ (19) ಮತ್ತು ಪತ್ನಿಯ ಅಕ್ಕನ ಮಗಳಾದ ಹೇಮಾವತಿ (22) ಎಂಬ ಮೂವರನ್ನು ಆರೋಪಿ ಗಂಗರಾಜು ಕೊಲೆ ಮಾಡಿ, ಪೀಣ್ಯ ಠಾಣೆ ಪೊಲೀಸರಿಗೆ ಬಂದು ಶರಣಾಗಿದ್ದಾನೆ. ಮನೆಯಲ್ಲಿ ಕಳೆದ 3 ದಿನಗಳ ಹಿಂದೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಪೀಣ್ಯ ಪೊಲೀಸ್‌ ಠಾಣೆಗೆ ಭಾಗ್ಯಮ್ಮ ಅವರು ಗಲಾಟೆ ಸಂಬಂಧ ದೂರು ನೀಡಿದ್ದರು. ಗಲಾಟೆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದೇ ಮೂವರ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.

ನೆಲಮಂಗಲದ ಆರೋಪಿ ಗಂಗರಾಜು ಹೆಬ್ಬಗೋಡಿಯಲ್ಲಿ ಹೋಂಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಕಳೆದ ಆರು ವರ್ಷಗಳಿಂದ ಜಾಲಹಳ್ಳಿ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಬುಧವಾರ ಸಂಜೆ ಮನೆಯಲ್ಲಿ ಗಲಾಟೆಯಾದ ಬಳಿಕ ಆರೋಪಿ ಮೂವರನ್ನು ಕೊಲೆ ಮಾಡಿದ್ದಾನೆ. ಮಾರಕಾಸ್ತ್ರಗಳಿಂದ ತಲೆ ಹಾಗೂ ಕೈ ಕಾಲುಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಮಚ್ಚಿನಿಂದ ಹೊಡೆದ ರಭಸಕ್ಕೆ ರುಂಡಗಳು ಬೇರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾಗ್ಯ ಅವರ ಅಕ್ಕನ ಮಗಳು ತುಮಕೂರಿನ ಹೇಮಾವತಿ ಅವರು ಕೆಲವು ತಿಂಗಳಿಂದ ಚಿಕ್ಕಮ್ಮನಾದ ಭಾಗ್ಯಮ್ಮ ಅವರ ಮನೆಯಲ್ಲೇ ವಾಸವಿದ್ದರು ಹಾಗೂ ಗಲಾಟೆ ಮಾಡುವಾಗ ಗಲಾಟೆ ಬಿಡಿಸಲು ಹೋದಾಗ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸದರು ತಿಳಿಸಿದ್ದಾರೆ.

ಪತ್ನಿ ನಾನು ಹೇಳಿದ ಮಾತನ್ನು ಕೇಳುತ್ತಿರಲಿಲ್ಲ, ಮಾತಿಗೆ ಮಾತು ಎದುರುತ್ತರ ನೀಡುತ್ತಿದ್ದಳು ಹಾಗೂ ಇಬ್ಬರು ಮಕ್ಕಳು ಸಹ ನನ್ನ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ, ನಾನು ಏನೇ ಹೇಳಿದರೂ ಕೇಳುತ್ತಿರಲಿಲ್ಲ. ನಾನು ನಿತ್ಯ ಕೆಲಸಕ್ಕೆ ಹೋದ ನಂತರ ನನ್ನ ಪತ್ನಿ ಬೇರೆ ಯಾರೋಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಅನುಮಾನ ಬಂದು ವಿಚಾರಿಸಿದಾಗ ಸರಿಯಾಗಿ ಉತ್ತರ ನೀಡದೆ ನಿಂದಿಸುತ್ತಿದ್ದಳು. ಹೀಗಾಗಿ ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರ ತಂದು ಒಪ್ಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೃತದೇಹಗಳನ್ನು ಆಸ್ಪತೆಯ ಶವಾಗಾರದಲ್ಲಿ ಇಡಲಾಗಿದ್ದು, ಕುಟುಂಬದವರಿಗೂ ಮಾಹಿತಿ ನೀಡಲಾಗಿದೆ, ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅವರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಕಮಿಷನರ್‌ ವಿಕಾಸ್‌ ಕುಮಾರ್‌ ಹಾಗೂ ಉತ್ತರ ವಿಭಾಗದ ಡಿಜಿಪಿ ಸೈದುಲ್‌ ಅದಾವಾತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ ಸಂಜೆ 5 ಗಂಟೆ ನಂತರ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದ್ದು, ಆರೋಪಿಯ ವಿಚಾರಣೆ ಮುಂದುವರಿದೆ. ಒಂದೇ ಕೋಣೆಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ.

ಏನಿದು ಘಟನೆ?
-ಜಾಲಹಳ್ಳಿಯಲ್ಲಿ ಕುಟುಂಬದ ಜತೆಗೆ ವಾಸವಿದ್ದ ಪತಿ
-ಹೆಬ್ಬಗೋಡಿಯಲ್ಲಿ ಹೋಮ್‌ಗಾರ್ಡ್‌ ಆಗಿದ್ದ ಆರೋಪಿ
-ದಂಪತಿ ನಡುವೆ ಗಲಾಟೆ ಬಗ್ಗೆ ಠಾಣೆಗೆ ದೂರು ನೀಡಿದ್ದ ಪತ್ನಿ
-ಇದರಿಂದ ಸಿಟ್ಟಿಗೆದ್ದು ಮನೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿ
-ಒಂದೇ ಮನೆಯಲ್ಲಿ ರಕ್ತಸಿಕ್ತ ಮೂರು ಮೃತದೇಹಗಳು ಪತ್ತೆ
-ರುಂಡ ಮುಂಡ ಬೇರ್ಪಡಿಸುವಂತೆ ಬರ್ಬರವಾಗಿ ಹತ್ಯೆ
-ಬಳಿಕ ಪೊಲೀಸ್‌ ಠಾಣೆಗೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿ

Advertisement

Udayavani is now on Telegram. Click here to join our channel and stay updated with the latest news.

Next