ಮಂಗಳೂರು: ಶುಕ್ರವಾರ ನಿಧನ ಹೊಂದಿದ ನಗರದ ಕೆಎಂಸಿ ಮೂತ್ರಾಂಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ, ಯುರಾಲಜಿಕಲ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಡಾ| ಗುರುಪುರ ಗುಣಿ ಲಕ್ಷ್ಮಣ ಪ್ರಭು ಅವರ ಅಂತಿಮ ಸಂಸ್ಕಾರ ಬೋಳೂರು ರುದ್ರಭೂಮಿಯಲ್ಲಿ ಅಪಾರ ಅಭಿಮಾನಿಗಳ ಸಮ್ಮುಖ ನೆರವೇರಿತು.
ಡಾ| ಲಕ್ಷ್ಮಣ ಪ್ರಭು ಅವರ ಅಗಲುವಿಕೆ ಸಮಾಜ, ಸಂಸ್ಥೆ, ರೋಗಿಗಳಿಗೆ ಅಪಾರ ನಷ್ಟವನ್ನು ಉಂಟು ಮಾಡಿದೆ. ವೈದ್ಯವಿಜ್ಞಾನದಂತೆ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಜ್ಞಾನ ಹೊಂದಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಅವರ ಹೃದಯ ವೈಶಾಲ್ಯ, ಮಾನವೀಯ ಗುಣ ವರ್ಣಿಸಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಗಳು ಸಿಗುವುದು ಬಹಳ ವಿರಳ ಎಂದು ಸಹೋದ್ಯೋಗಿ ಡಾ| ಕೊಚ್ಚಿಕಾರ್ ಮುರಳೀಧರ ಪೈ ನುಡಿನಮನದಲ್ಲಿ ತಿಳಿಸಿದರು.
ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಸತೀಶ್ ಪ್ರಭು ಅವರು ಡಾ| ಲಕ್ಷ್ಮಣ ಪ್ರಭು ಅವರ ಅಗಲುವಿಕೆಯ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು. ಜನಪ್ರತಿನಿಧಿಗಳು, ಗಣ್ಯರು, ಮಾಹೆ, ಕೆಎಂಸಿ ಹಿರಿಯ ಅಧಿಕಾರಿಗಳು, ವೈದ್ಯರು, ಸಿಬಂದಿ, ಬಂಧುಮಿತ್ರರು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಆಸ್ಪತ್ರೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯ ನಿರ್ವಹಣ ಅಧಿಕಾರಿ ಸಗೀರ್ ಸಿದ್ದಿಕಿ, ಸಹೋದ್ಯೋಗಿಗಳಾದ ಡಾ| ವಿದ್ಯಾಶ್ರೀ, ಡಾ| ಸನ್ಮಾನ್, ಕೆಎಂಸಿಯಲ್ಲಿ ನಡೆದ ಸಭೆಯಲ್ಲಿ ಡೀನ್ ಡಾ| ಉಣ್ಣಿಕೃಷ್ಣನ್, ಡಾ| ಸಿ.ಕೆ. ಬಲ್ಲಾಳ್ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು.