Advertisement

ನದಿ ಅಭಿಮುಖದಲ್ಲಿ 235 ಕೋ.ರೂ. ಅಭಿವೃದ್ಧಿ ಯೋಜನೆ: ಖಾದರ್

10:00 AM Nov 02, 2018 | |

ಮಹಾನಗರ : ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಜೆಪ್ಪುವಿನಿಂದ ಸುಜೀರ್ಕಾರ್‌ ಟೈಲ್ಸ್‌ ಫ್ಯಾಕ್ಟರಿ ಸಮೀಪದವರೆಗೆ ನದಿ ಅಭಿಮುಖ ಪ್ರದೇಶದಲ್ಲಿ 235 ಕೋ.ರೂ. ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ನಗರದ ನೆಹರೂ ಮೈದಾನದಲ್ಲಿ ಗುರುವಾರ ಜರಗಿದ ಜಿಲ್ಲಾಮಟ್ಟದ 63ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಸಂದೇಶ ನೀಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ರಚನೆಗಾಗಿ 12.36 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಯಲ್ಲಿರುತ್ತದೆ. ಕಂಕನಾಡಿ ಮಾರುಕಟ್ಟೆ ಅಭಿವೃದ್ಧಿಗಾಗಿ 42.50 ಕೋ. ರೂ. ಪ್ರಸ್ತಾವನೆ ಮಂಜೂರಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಳಕೆ ಮಾರುಕಟ್ಟೆ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಈಗಾಗಲೇ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯದಲ್ಲೇ ಇದರ ಉದ್ಘಾಟನೆ ನೆರವೇರಲಿದೆ ಎಂದರು.

ನಗರೋತ್ಥಾನದಲ್ಲಿ 200 ಕೋ.ರೂ.
ಮನಪಾಕ್ಕೆ ರಾಜ್ಯ ಸರಕಾರದಿಂದ ನಗರೋತ್ಥಾನ 2 ಹಾಗೂ 3ನೇ ಹಂತದಲ್ಲಿ 200 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 254 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 226 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕೆ 157.84 ಕೋ. ರೂ. ವಿನಿಯೋಗಿಸಲಾಗಿದೆ ಎಂದರು. ಮನಪಾ ವ್ಯಾಪ್ತಿಯ ಸುರತ್ಕಲ್‌ ಪ್ರದೇಶಕ್ಕೆ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ಈಗಾಗಲೇ 50 ಕೋ.ರೂ. ಮಂಜೂರಾಗಿದೆ. ಇದರಲ್ಲಿ 15 ಕೋ. ರೂ. ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಒಳಚರಂಡಿ ವ್ಯವಸ್ಥೆಗೆ ಕ್ರಮ
ಪಟ್ಟಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ. 65.11 ಕೋ.ರೂ. ವೆಚ್ಚದ ಉಳ್ಳಾಲ ನಗರದ ಒಳಚರಂಡಿ ಯೋಜನೆ ಕಾಮಗಾರಿಯು ಪ್ರಗತಿಯಲ್ಲಿದೆ. ಉಳ್ಳಾಲ ನಗರಸಭೆ, ಕೋಟೆಕಾರ್‌ ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ನೀರು ಸರಬರಾಜು ಯೋಜನೆಗಳಿಗೆ ಪ್ರಸ್ತಾವನೆ ಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ಭಾಸ್ಕರ್‌ ಕೆ., ಉಪ ಮೇಯರ್‌ ಮಹಮ್ಮದ್‌, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್‌., ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ , ಎಸ್‌. ಪಿ. ಡಾ| ರವಿಕಾಂತೆ ಗೌಡ, ಅಪರ ಜಿಲ್ಲಾಧಿಕಾರಿ ಕುಮಾರ್‌, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

Advertisement

ಮೆರವಣಿಗೆ, ಆಕರ್ಷಕ ಪಥಸಂಚಲನ
ಕಾರ್ಯಕ್ರಮಕ್ಕೆ ಮುನ್ನ ನಗರದ ಅಂಬೇಡ್ಕರ್‌ ವೃತ್ತದಿಂದ ನೆಹರೂ ಮೈದಾನದ ವರೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಿತು. ಆರೂರು ಲಕ್ಷ್ಮೀ ರಾವ್‌ ಮೆರವಣಿಗೆ ಉದ್ಘಾಟಿಸಿದರು. ನಾಗೇಶ್‌ ಬಪ್ಪನಾಡು ಉಪಸ್ಥಿತರಿದ್ದರು. ಪೊಲೀಸ್‌, ಗೃಹರಕ್ಷಕ ದಳ, ಅಗ್ನಿ ಶಾಮಕ ಮತ್ತು ತುರ್ತುಸೇವೆ, ಅರಣ್ಯ ಇಲಾಖೆ, ಎನ್‌ಸಿಸಿ, ಭಾರತ್‌ ಸೇವಾದಳ, ಆರ್‌ಎಸ್‌ಪಿ ವಿದ್ಯಾರ್ಥಿನಿಯರ ತಂಡ, ಸ್ಕೌಟ್ಸ್‌ , ಗೈಡ್ಸ್‌ , ಪೊಲೀಸ್‌ ವಾದ್ಯ ತಂಡದಿಂದ ಆಕರ್ಷಕ ಪಥಸಂಚಲನ ಜರಗಿತು. ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Advertisement

Udayavani is now on Telegram. Click here to join our channel and stay updated with the latest news.

Next