Advertisement

Mangaluru: ನೊಂದವರ ಹಸಿವು ತಣಿಸುವ ಸೇವೆ

02:56 PM Jan 01, 2025 | Team Udayavani |

ಮಹಾನಗರ: ವೆನ್ಲಾಕ್‌ನಂಥ ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೇನೋ ಅಲ್ಲಿ ಆಹಾರ ಕೊಡುತ್ತಾರೆ. ಆದರೆ, ಅವರ ಜತೆಗಿರುವವರು ಹೊತ್ತಿನ ಊಟಕ್ಕೆ ಪರಿತಪಿಸುವುದನ್ನು ಗಮನಿಸಿ ಎರಡು ಸಂಸ್ಥೆಗಳು ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುವ ಮೂಲಕ ಮಾನವೀಯ ಸೇವೆ ಮಾಡುತ್ತಿವೆ.

Advertisement

ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್‌ ಟ್ರಸ್ಟ್‌ 9 ವರ್ಷದಿಂದ ಮತ್ತು ಎಂ. ಪ್ರಂಡ್ಸ್‌ ಕಾರುಣ್ಯ ಸಂಸ್ಥೆ 7 ವರ್ಷದಿಂದ ಪ್ರತಿ ದಿನವೂ ಈ ಸೇವೆ ನೀಡುತ್ತಿವೆ. ಇವರಿಗೆ ಹಲವು ದಾನಿಗಳು ಬೆಂಬಲವಾಗಿ ನಿಂತಿದ್ದಾರೆ. ದಿನವೊಂದಕ್ಕೆ ಕನಿಷ್ಠ 500 ಮಂದಿ ಎಂದು ಲೆಕ್ಕ ಹಾಕಿದರೆ ತಿಂಗಳಿಗೆ 15 ಸಾವಿರ ಮಂದಿ ಇದರ ಲಾಭ ಪಡೆಯುತ್ತಾರೆ. ಅಂದರೆ ವರ್ಷಕ್ಕೆ 1.80 ಲಕ್ಷ ಮಂದಿ !

ವೆನ್ಲಾಕ್‌ ಜಿಲ್ಲಾಸ್ಪತ್ರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಬಡರೋಗಿಗಳಲ್ಲದೇ ಕೊಡಗು, ಚಿಕ್ಕಮಗಳೂರು, ಹಾಸನ, ಬಿಜಾಪುರ, ರಾಯಚೂರು, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ ಮುಂತಾದ ಕಡೆಗಳಿಂದಲೂ ಅಶಕ್ತ ರೋಗಿಗಳು ಬಂದು ದಾಖಲಾಗುತ್ತಾರೆ. ಆಸ್ಪತ್ರೆಯಲ್ಲಿ ಬಡವರು, ಅಶಕ್ತರು, ಅನಾಥರು, ವೃದ್ಧರು ದಾಖಲಾಗಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವುದೂ ಇದೆ. ಅವರ ಜೊತೆ ಪರಿಚಾರಕರು ಕೂಡ ಇರುತ್ತಾರೆ. ಅವರ ಹಸಿವು ಇಂಗಿಸುವ ಕೆಲಸ ಇಲ್ಲಿ ನಡೆಯುತ್ತಿದೆ.

ಮಧ್ಯಾಹ್ನ ಅನ್ನ ಸಾಂಬಾರು
ಮಧ್ಯಾಹ್ನದ ಊಟವನ್ನು ಸ್ನೇಹಾ ಲಯ ಚಾರಿಟೇಬಲ್‌ ಟ್ರಸ್ಟ್‌ ನೀಡು ತ್ತಿದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ನೀಡುವ ಊಟದಲ್ಲಿ ಅನ್ನ, ಸಾಂಬಾರು, ಉಪ್ಪಿನಕಾಯಿ ಇರುತ್ತದೆ. ಹೆಚ್ಚಾ ಕಡಿಮೆ 1 ದಿನಕ್ಕೆ ಸ್ನೇಹಾಲಯವು 21 ಸಾವಿರ ರೂ.ಗಳನ್ನು ಇದಕ್ಕಾಗಿ ವಿನಿಯೋಗಿಸುತ್ತಿದೆ. ದಾನಿಗಳ ಸಹಕಾರವೇ ನಮಗೆ ಆಧಾರ ಎನ್ನುತ್ತಾರೆ ಸ್ನೇಹಾಲಯ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಕ ಜೋಸೆಫ್‌ ಕ್ರಾಸ್ತಾ.

Advertisement

ಸಂಜೆ ಚಪಾತಿ ಗಸಿ, ಇಡ್ಲಿ
ರಾತ್ರಿಯ ಊಟೋಪಚಾರದ ವ್ಯವಸ್ಥೆಯನ್ನು ಎಂ-ಫ್ರೆಂಡ್ಸ್‌ ಸಂಸ್ಥೆ ಕೈಗೆತ್ತಿಕೊಂಡಿದೆ. ವಾರದ 5 ದಿನ ಚಪಾತಿ, ಗಸಿ ಹಾಗೂ 2 ದಿನ ಇಡ್ಲಿ, ತೋವೆ ನೀಡಲಾಗುತ್ತದೆ. 1 ದಿನಕ್ಕೆ 7,500 ರೂ. ವಿನಿಯೋಗಿಸಲಾ ಗುತ್ತಿದೆ. ವಿಶೇಷ ದಿನಗಳಲ್ಲಿ ವಿಶೇಷ ಊಟವಿರುತ್ತದೆ. ಜತೆಗೆ ರೋಗಿಗಳಿಗೆ ಬೇಕಾದ ಇತರ ಸೇವೆಯನ್ನೂ ನೀಡುತ್ತದೆ ಎನ್ನುತ್ತಾರೆ ಎಂ
-ಫ್ರೆಂಡ್ಸ್‌ ಚಯರ್‌ಮ್ಯಾನ್‌ ಝಕಾರಿಯಾ ಜೋಕಟ್ಟೆ.

ಮೊಮ್ಮಗನವರೆಗೂ ಅನ್ನದಾನ
ಹೊಸದಿಲ್ಲಿಯಲ್ಲಿ ಉದ್ಯಮಿಯಾಗಿರುವ ಸಾಸ್ತಾನದ ಜೋಸೆಫ್‌ ಮಿನೇಜಸ್‌ ಅವರು ಸ್ನೇಹಾಲಯ ಸಂಸ್ಥೆಗೆ ನೆರವು ನೀಡುತ್ತಿದ್ದಾರೆ. 15 ಸಾವಿರ ರೂ.ಗಳಿಂದ ಆರಂಭವಾದ ದೇಣಿಗೆ ಈಗ ತಿಂಗಳಿಗೆ 3ಲಕ್ಷಕ್ಕೆ ತಲುಪಿದೆ. ನಾನು ಮಾತ್ರವಲ್ಲ, ನನ್ನ ಮಗ, ಮೊಮ್ಮಗನ ಕಾಲದಲ್ಲೂ ಈ ಸೇವೆ ಮುಂದುವರಿಯುತ್ತದೆ ಎಂದು ಸ್ನೇಹಾಲಯಕ್ಕೆ ತಿಳಿಸಿದ್ದಾರೆ. ಕಳೆದ ಹಲವು ವರ್ಷ ದಿಂದ 2 ಸಂಘಟನೆ ಯವರು ಲಕ್ಷಾಂತರ ನೊಂದ ಮನಸುಗಳನ್ನು ಅರಳಿಸುವ ಕಾರ್ಯ ನಡೆಸಿದ್ದಾರೆ. ಹೊಸ ವರ್ಷದ ಘಳಿಗೆಯಲ್ಲಿ ಇಂತಹ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ
– ಡಾ|ಶಿವಪ್ರಕಾಶ್‌ ಡಿ.ಎಸ್‌. ಅಧೀಕ್ಷಕರು, ವೆನ್ಲಾಕ್‌

Advertisement

Udayavani is now on Telegram. Click here to join our channel and stay updated with the latest news.

Next