Advertisement

Mangaluru: ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್‌ ಅಳವಡಿಸಿ: ಕ್ಯಾ| ಚೌಟ

11:26 PM Dec 31, 2024 | Team Udayavani |

ಮಂಗಳೂರು: ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್‌ ಅಳವಡಿಸಿದರೆ ಕೇಂದ್ರ ಸರಕಾರದಿಂದ ಗ್ರಾಹಕರಿಗೆ ಸಬ್ಸಿಡಿ ದೊರಕುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸುವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಸೂಚಿಸಿದರು.

Advertisement

ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯ ಕಾರ್ಯಾಗಾರದ ಸಿದ್ಧತೆಗಳ ಕುರಿತು ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಂತೆ ಸಾರ್ವಜನಿಕರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್‌ ಸಿಸ್ಟಮ್‌ ಅಳವಡಿಸಿದರೆ ಸರಕಾರದಿಂದ ಸಬ್ಸಿಡಿ ದೊರಕಲಿದೆ. 1 ಕಿಲೋ ವ್ಯಾಟ್‌ಗೆ 30,000 ರೂ., 2 ಕಿಲೋ ವ್ಯಾಟ್‌ 60,000 ರೂ., 3 ಕಿಲೋ ವ್ಯಾಟ್‌ ಮೇಲ್ಪಟ್ಟ ಸೋಲಾರ್‌ಗಳಿಗೆ 78,000 ರೂ.ವರೆಗೆ ಸಬ್ಸಿಡಿ ದೊರಕಲಿದೆ ಎಂದವರು ತಿಳಿಸಿದರು.

ಈ ಸೋಲಾರ್‌ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್‌ ಅನ್ನು ತಮ್ಮ ಮನೆಯ ಬಳಕೆಗೆ ಉಪಯೋಗಿಸಬಹುದು ಹಾಗೂ ಹೆಚ್ಚುವರಿ ವಿದ್ಯುತ್‌ ಅನ್ನು ಮೆಸ್ಕಾಂಗೆ ಮಾರಾಟ ಮಾಡಬಹುದು ಎಂದು ಸಂಸದರು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಮಾತನಾಡಿ, ಸೋಲಾರ್‌ ಉಪಕರಣಗಳ ಖರೀದಿಗೆ ಬ್ಯಾಂಕ್‌ ಸಾಲ ನೀಡಲು ಬ್ಯಾಂಕುಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಶಾಸಕರಾದ ಡಾ| ವೈ. ಭರತ್‌ ಶೆಟ್ಟಿ, ವೇದವ್ಯಾಸ್‌ ಕಾಮತ್‌ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ| ಆನಂದ್‌ ಕೆ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್‌. ಆನಂದ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಮತ್ತಿತರರು ಉಪಸ್ಥಿತರಿದ್ದರು.

Advertisement

ಜ. 2ರಂದು ಕೇಂದ್ರ ಸಚಿವರು ಜಿಲ್ಲೆಗೆ
ಕೇಂದ್ರ ನವೀಕರಿಸಬಹುದಾದ ಇಂಧನಗಳ ಸಚಿವ ಪ್ರಹ್ಲಾದ ಜೋಶಿ ಅವರು ಜ. 2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಸೂರ್ಯ-ಘರ್‌ ಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಯೋಜನೆಯ ಅನುಷ್ಠಾನದ ಪ್ರಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಈಗಾಗಲೇ ಸೋಲಾರ್‌ ಯೋಜನೆ ಅಳವಡಿಸಿರುವ ಗ್ರಾಹಕರ ಅನುಭವವನ್ನು ತಿಳಿದುಕೊಳ್ಳಲಿದ್ದಾರೆ ಎಂದು ಸಂಸದರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

270 ಡೀಲರ್‌ಗಳ ಗುರುತು
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 675 ಮಂದಿ ಸೋಲಾರ್‌ ಯೋಜನೆ ಅಳವಡಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಸೂರ್ಯ ಘರ್‌ ಯೋಜನೆಯಡಿಯಲ್ಲಿ ಸೋಲಾರ್‌ ಉಪಕರಣಗಳ ಮಾರಾಟಕ್ಕೆ 270 ಡೀಲರ್‌ಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ಅರ್ಜಿಯನ್ನು ನೋಂದಾಯಿ ಸಲು  //www.pmsuryaghar.gov.in ಆನ್‌ಲೈನ್‌ ಪೋರ್ಟಲ್‌ಗೆ ಭೇಟಿ ನೀಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next