Advertisement

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

12:58 PM Jan 03, 2025 | Team Udayavani |

ಮಹಾನಗರ: ನಗರದ ಹಲವೆಡೆ ಮತ್ತೆ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳು ತಲೆಎತ್ತಿದ್ದು, ಸಾರ್ವಜನಿಕರು ಮತ್ತು ವಾಹನಿಗರಿಗೆ ಭಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿಂದೆ ಪ್ರತ್ಯೇಕ ತಂಡ ರಚನೆ ಮಾಡಿ ಕಾರ್ಯಾಚರಣೆಗಿಳಿದಿದ್ದ ಪಾಲಿಕೆ ಸದ್ಯ ತಣ್ಣಗಾಗಿದೆ. ಪಾಲಿಕೆಯ ಎದುರೇ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದರೂ, ಇದನ್ನು ತೆರವು ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ.

Advertisement

ನಿಯಮದ ಪ್ರಕಾರ ಕೇವಲ ಬಟ್ಟೆಯಿಂದ ಕೂಡಿದ ಬ್ಯಾನರ್‌ಗಳನ್ನು ಅಳವಡಿಸಲು ಮಾತ್ರ ಅವಕಾಶ. ಆದರೆ ನಗರದಲ್ಲಿ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ನಗರದ ಬಿಜೈ, ಲಾಲ್‌ಬಾಗ್‌, ಪಂಪ್‌ವೆಲ್‌, ಕೆಪಿಟಿ, ಬಲ್ಲಾಳ್‌ಬಾಗ್‌, ಹಂಪನಕಟ್ಟೆ, ಕ್ಲಾಕ್‌ಟವರ್‌ ಸಮೀಪ, ಪಿವಿಎಸ್‌, ನಂತೂರು, ಪಡೀಲ್‌, ಕುಲಶೇಖರ, ಉರ್ವ ಸ್ಟೋರ್‌, ಕೆ.ಎಸ್‌. ರಾವ್‌ ರಸ್ತೆ ಸಹಿತ ಹಲವು ಕಡೆಗಳಲ್ಲಿ ಪ್ಲಾಸ್ಟಿಕ್‌ನ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಗಳು ಕಾಣಸಿಗುತ್ತವೆ.

ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ತೆರವು ಮಾಡುವ ಉದ್ದೇಶದಿಂದ ಕೆಲವು ವಾರಗಳ ಹಿಂದೆ ಪಾಲಿಕೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಕಂದಾಯ ನಿರೀಕ್ಷಕರನ್ನು ಒಳಗೊಂಡ ಮೂರು ವಲಯಗಳಲ್ಲಿ ತಂಡ ರಚನೆ ಮಾಡಲಾಗಿತ್ತು. ಒಂದು ತಂಡದಲ್ಲಿ ಸುಮಾರು ಹತ್ತು ಮಂದಿ ಅಧಿಕಾರಿಗಳು ಇರಲಿದ್ದು, ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿದ್ದು ಕಂಡು ಬಂದರೆ ಅದನ್ನು ತೆರವು ಮಾಡುವುದು ಸೇರಿದಂತೆ ಸೂಕ್ತ ಕ್ರಮಕ್ಕೆ ಅವರು ಮುಂದಾಗಬೇಕು ಎಂಬ ಸೂಚನೆಯೂ ಇತ್ತು. ಆದರೆ, ಈ ತಂಡ ಸದ್ಯ ದೊಡ್ಡ ಮಟ್ಟದ ಕಾರ್ಯಾಚರಣೆಯಲ್ಲಿ ತೊಡಗುತ್ತಿಲ್ಲ.

ಬ್ಯಾನರ್‌ ಹಾಕಲು ನಿಯಮವೇನು?
ಪಾಲಿಕೆ ಅಧಿಕಾರಿಗಳು ಹೇಳುವ ಪ್ರಕಾರ ನಗರದಲ್ಲಿ ಬಟ್ಟೆಯಿಂದ ಕೂಡಿದ ಬ್ಯಾನರ್‌ಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಉಳಿದ ಬ್ಯಾನರ್‌ಗಳೆಲ್ಲ ಅನಧಿಕೃತ. ಸಾರ್ವಜನಿಕರು ಜಾಹೀರಾತು ಅಳವಡಿಸಬೇಕಾದರೆ ಪಾಲಿಕೆಯ ಕಂದಾಯ ವಿಭಾಗದಿಂದ ಅನುಮತಿ ಪಡೆದುಕೊಳ್ಳಬೇಕು. 6×5 ಅಳತೆಯ ಬಟ್ಟೆ ಬ್ಯಾನರ್‌ ಅನ್ನು 200 ರೂ.ನಂತೆ 15 ದಿನಗಳವರೆಗೆ ನಗರದಲ್ಲಿ ಅಳವಡಿಸಲು ಅವಕಾಶ ಇದೆ. ಬ್ಯಾನರ್‌ ಅನ್ನು ಪಾಲಿಕೆಗೆ ತಂದು ಅಲ್ಲಿ ಮುದ್ರೆ (ಸೀಲ್‌) ಹಾಕಿಸಿಕೊಳ್ಳಬೇಕು. ಯಾವುದೇ ಅಪಾಯಕಾರಿಯಲ್ಲದ ಪ್ರದೇಶದಲ್ಲಿ ಬ್ಯಾನರ್‌ ಅಳವಡಿಸಬೇಕು ಎಂಬ ನಿಯಮ ಪಾಲಿಸಬೇಕು. ಅವಧಿ ಮೀರಿದರೂ ತೆರವು ಮಾಡದ ಬ್ಯಾನರ್‌ಗಳು ಅನಧಿಕೃತವಾಗುತ್ತದೆ.

ಐಲ್ಯಾಂಡ್‌ಗಳೇ ಟಾರ್ಗೆಟ್‌
ನಗರವನ್ನು ಸುಂದರವನ್ನಾಗಿಸುವ ನಿಟ್ಟಿನಲ್ಲಿ ನಗರದ ಕೆಲವೊಂದು ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಐಲ್ಯಾಂಡ್‌ ನಿರ್ಮಾಣ ಮಾಡಲಾಗಿದೆ. ಈ ಐಲ್ಯಾಂಡ್‌ಗಳು ಸದ್ಯ ಬ್ಯಾನರ್‌ ಅಳವಡಿಸುವ ತಾಣವಾಗಿ ಮಾರ್ಪಾಡಾಗಿದೆ. ನಗರದ ಪಂಪ್‌ವೆಲ್‌, ಕೆ.ಎಸ್‌. ರಾವ್‌ ರಸ್ತೆ ಸಹಿತ ಹಲವು ಕಡೆಗಳಲ್ಲಿನ ಟ್ರಾಫಿಕ್‌ ಐಲ್ಯಾಂಡ್‌ಗಳಲ್ಲಿ ರಸ್ತೆ ಸೂಚಕ ಫಲಕ ಹೊರತುಪಡಿಸಿ ಬ್ಯಾನರ್‌ಗಳೇ ತುಂಬಿಕೊಂಡಿದೆ. ಇದು ವಾಹನ ಸವಾರರಿಗೂ ಕಿರಿ ಕಿರಿ ಉಂಟಾಗುತ್ತಿದೆ.

Advertisement

ಪಾಲಿಕೆ ಎದುರೇ ಫ್ಲೆಕ್ಸ್‌ !
ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ ಅಳವಡಿಸಿದರೆ ದುಬಾರಿ ದಂಡ ವಿಧಿಸುತ್ತಿರುವ ಪಾಲಿಕೆಯ ಎದುರಲ್ಲೇ ಬ್ಯಾನರ್‌ಗಳು ರಾರಾಜಿಸುತ್ತಿದೆ. ಅದರಲ್ಲೂ ಸಚಿವರು ಸಹಿತ ಸರಕಾರಿ ಕಾರ್ಯಕ್ರಮಗಳು ಬ್ಯಾನರ್‌ಗಳು ಇದ್ದು, ಇವುಗಳನ್ನು ಅಳವಡಿಸಲು ಅನುಮತಿ ನೀಡಿದ್ದು ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next