Advertisement

Mangaluru: ಕೊಕ್ಕಡದ ʼಸಾಂತಾ ಕ್ಲಾಸ್‌ʼ ವಿನ್ಸೆಂಟ್‌ ಕ್ರಿಸ್ಮಸ್‌ ತಿರುಗಾಟಕ್ಕೆ 25 ವರ್ಷ!

12:40 PM Dec 20, 2024 | Team Udayavani |

ಮಂಗಳೂರು: ಕ್ರಿಸ್ಮಸ್‌ ಹಬ್ಬಕ್ಕೆ ನಾಡು ಸಜ್ಜಾಗಿದೆ. ಪ್ರತಿ ವರ್ಷವೂ ಸಾಂತಾ ಕ್ಲಾಸ್‌ ವೇಷ ಧರಿಸಿ, ಅಲಂಕೃತ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಕ್ರಿಸ್ತ ಜನನದ ಶುಭವಾರ್ತೆ ಪಸರಿಸುವ ಜತೆಗೆ ಪರಿಸರ ಜಾಗೃತಿ ಮೂಡಿಸುವ ಕೊಕ್ಕಡ ನಿವಾಸಿ ವಿನ್ಸೆಂಟ್‌ ಮಿನೇಜಸ್‌ ಅವರೂ ತಿರುಗಾಟ ಆರಂಭಿಸಿದ್ದಾರೆ. ಅವರ ತಿರುಗಾಟಕ್ಕೆ ಈ ಬಾರಿ 25ನೇ ವರ್ಷ!

Advertisement

ಕಳೆದ ಗುರುವಾರ ತನ್ನ ಊರು ಕೊಕ್ಕಡದಿಂದ ಹೊರಟ ಅವರು, ಉಪ್ಪಿನಂಗಡಿ, ಬಂಟ್ವಾಳ ಪರಿಸರದಲ್ಲಿ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ನಗರದಲ್ಲಿ ಶಾಲೆ, ಕಾಲೇಜುಗಳಿಗೆ ಹೋಗಿ ಮನೋರಂಜನೆ ಯೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಿದ್ದಾರೆ. ಜತೆಗೆ ಕೆಲವೆಡೆ ಕ್ರಿಸ್ಮಸ್‌ ಕೇಕ್‌ ಕೂಡಾ ವಿತರಿಸುತ್ತಿದ್ದಾರೆ.

ಧರ್ಮಗುರುಗಳಿಂದ ಪ್ರೇರಣೆ
ವಿನ್ಸೆಂಟ್‌ ಅವರು 1994ರಿಂದ ಕ್ರಿಸ್ಮಸ್‌ ಸಂದರ್ಭದಲ್ಲಿ ಚರ್ಚ್‌ನಲ್ಲಿ ಸಾಂತಕ್ಲಾಸ್‌ ವೇಷ ಧರಿಸಿ ಸಂದೇಶ ನೀಡುತ್ತಿದ್ದರು. ಕೊಕ್ಕಡ
ಚರ್ಚ್‌ನ ಧರ್ಮಗುರುಗಳಾಗಿದ್ದ ವಂ| ವಲೇರಿಯನ್‌ ಲೂವಿಸ್‌ ಅವರು ಸಾರ್ವಜನಿಕ ವಾಗಿ ಈ ಕೆಲಸ ಮಾಡುವಂತೆ ಸಲಹೆ ನೀಡಿದ ಬಳಿಕ 2000ದಲ್ಲಿ ಅವರ ಸಂಚಾರ ಶುರುವಾಗಿದೆ. ಮೊದಲ ಬಾರಿಗೆ ಕೊಕ್ಕಡದಿಂದ ಶಿರಾಡಿವರೆಗೆ ದ್ವಿಚಕ್ರ ವಾಹನದ ಮೂಲಕ ತೆರಳಿದ ಅವರ ವ್ಯಾಪ್ತಿ ಈಗ ವಿಸ್ತಾರಗೊಂಡಿದೆ.

ಪರಿಸರ, ಡ್ರಗ್ಸ್‌ ಜಾಗೃತಿ ಪ್ರಯತ್ನ
ನಿರಂತರ ಸಾಂತಾ ಕ್ಲಾಸ್‌ ವೇಷ ಧರಿಸುತ್ತಿರುವ ವಿನ್ಸೆಂಟ್‌ ಈ ಬಾರಿ ಇನ್ನಷ್ಟು ವಿಭಿನ್ನತೆ ತೋರಿದ್ದಾರೆ. ತಮ್ಮ ದ್ವಿಚಕ್ರ ವಾಹನವನ್ನು ಬಲೂನ್‌ಗಳಿಂದ ಅಲಂಕರಿಸಿರುವ ಅವರು, ‘ಪ್ಲಾಸ್ಟಿಕ್‌ ಮುಕ್ತಗೊಳಿಸಿ ಪರಿಸರ ಉಳಿಸಿ’, ‘ಡ್ರಗ್ಸ್‌ ಮುಕ್ತ ಜೀವನ ನಡೆಸಿ’, ‘ಸ್ವತ್ಛ ಭಾರತಕ್ಕೆ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ’ ಎಂಬ ಘೋಷಣೆಗಳನ್ನು ವಾಹನಕ್ಕೆ ಅಳವಡಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.

ಶಾಲೆ,  ಆಶ್ರಮ, ತಂಗುದಾಣಗಳಲ್ಲಿ ಓಡಾಟ
-ಕೊಕ್ಕಡದಿಂದ ಹೊರಟ ವಿನ್ಸೆಂಟ್‌ ದಾರಿ ಮಧ್ಯೆ ಅಲ್ಲಿಪಾದೆಗೆ ತೆರಳಿದ್ದಾರೆ. ದಾರಿಯುದ್ದಕ್ಕೂ ಸಿಗುವ ಸರಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾರೆ.
-ವಾಹನದಲ್ಲಿರುವ ಧ್ವನಿ ವರ್ಧಕದ ಮೂಲಕ ಜಾಗೃತಿ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಪಾಠ ಮಾಡಿದ್ದಾರೆ.
-ಮಂಗಳೂರಿಗೆ ಬಂದ ಬಳಿಕ ಆಯ್ದ ಆಶ್ರಮಗಳಿಗೆ ಅವರು ಭೇಟಿ ಕೊಟ್ಟು ಅಲ್ಲಿ ಕೇಕ್‌ ವಿತರಿಸಿದ್ದಾರೆ.
-ಬಸ್‌ ರಿಕ್ಷಾ ನಿಲ್ದಾಣಗಳಲ್ಲಿ ತಮ್ಮ ವಾಹನ ನಿಲ್ಲಿಸಿ ಜನರನ್ನು ಸೆಳೆದು ಪ್ಲಾಸ್ಟಿಕ್‌ ಹಾಗೂ ಪರಿಸರ ಜಾಗೃತಿಯ ಸಂದೇಶ ವಿವರಿಸಿದ್ದಾರೆ.
– ಮಂಗಳೂರಿನ ಬೋಂದೇಲ್‌, ಕಾವೂರು ಸೇರಿದಂತೆ ಹಲವು ಜಾಗಗಳಿಗೆ ಭೇಟಿ ನೀಡಿ ಸಂಭ್ರಮದ ವಾತಾವರಣ ಸೃಷ್ಟಿಸಿದ್ದಾರೆ.

Advertisement

ಸೌಹಾರ್ದ ಕ್ರಿಸ್ಮಸ್‌ ಆಚರಣೆಗೆ ಪ್ರೇರಣೆ
ಕಳೆದ 25 ವರ್ಷಗಳಿಂದ ಸಾಂತಾ ಕ್ಲಾಸ್‌ ವೇಷ ಧರಿಸುವ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ನನಗೆ ಅತೀವ ಸಂತೋಷ ಸಿಗುತ್ತದೆ. ಸೌಹಾರ್ದಯುತವಾಗಿ ಕ್ರಿಸ್ಮಸ್‌ ಆಚರಣೆಗೆ ಪ್ರೇರಣೆಯಾಗುತ್ತಿದೆ. ಸಾರ್ವಜನಿಕರ ಸಹಕಾರ ಅತ್ಯುತ್ತಮವಾಗಿದೆ.
– ವಿನ್ಸೆಂಟ್‌ ಮಿನೇಜಸ್‌, ಸಾಂತಾ ಕ್ಲಾಸ್‌ ವೇಷಧಾರಿ

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next