Advertisement

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

12:52 PM Dec 20, 2024 | Team Udayavani |

ಕಿನ್ನಿಗೋಳಿ: ಮೂಲ್ಕಿ ತಾಲೂಕು ವ್ಯಾಪ್ತಿಯ ಬಳ್ಕುಂಜೆ, ಕರ್ನಿರೆ ಮೂಲಕ ಉಡುಪಿ ಜಿಲ್ಲೆಯ ಪಲಿಮಾರನ್ನು ಸಂಪರ್ಕಿಸುವ ಶಾಂಭವಿ ನದಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ಈ ಭಾಗದ ಕಾರ್ಮಿಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಸೇತುವೆ ಶಿಥಿಲವಾಗಿದೆ ಎಂಬ ಎಂಜಿನಿಯರ್‌ ವರದಿಯಂತೆ ಸೇತುವೆ ಮೇಲೆ ಯಾವುದೇ ಘನ ವಾಹನ ಸಾಗದಂತೆ 7 ಅಡಿ ಎತ್ತರದ ಕಮಾನು ಹಾಕಲಾಗಿದೆ. ಕರ್ನಿರೆ ಬಳ್ಕುಂಜೆ ಭಾಗದಿಂದ ಹಲವಾರು ಮಂದಿ ಉದ್ಯೋಗ, ವಿದ್ಯಾಭ್ಯಾಸ ನಿಮಿತ್ತ ಪಲಿಮಾರು ಭಾಗಕ್ಕೆ ತೆರಳುತ್ತಾರೆ. ಅವರೆಲ್ಲರೂ ಬಳಸುವ ಮಾರ್ಗ ಇದಾಗಿದೆ. ಪಲಿಮಾರು ಭಾಗದಿಂದಲೂ ಸಾಕಷ್ಟು ಮಂದಿ ಬಳ್ಕುಂಜೆ ಕಡೆಗೆ ಬರುತ್ತಾರೆ. ಅವರೆಲ್ಲರಿಗೆ ಈಗ ಬಸ್‌ ಸಂಚಾರ ಇಲ್ಲದೆ ಸಮಸ್ಯೆಯಾಗಿದೆ.

ಬಸ್ಸನ್ನೇ ನಂಬಿ ಶಾಲೆ, ಕಾಲೇಜು, ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದವರು ಈಗ ರಿಕ್ಷಾ ಮತ್ತಿತರ ವಾಹನಗಳನ್ನು ಅವಲಂಬಿಸಲಾಗಿದೆ. ದಿನನಿತ್ಯವೂ ರಿಕ್ಷಾಕ್ಕೆ ಹೆಚ್ಚಿನ ವೆಚ್ಚ ಭರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಅಚ್ಚರಿ ಎಂದರೆ ಇದರಲ್ಲಿ ಬಸ್‌, ಲಾರಿ ಬಿಟ್ಟರೆ ಉಳಿದೆಲ್ಲ ವಾಹನಗಳು ಎಗ್ಗಿಲ್ಲದೆ ಚಲಿಸುತ್ತವೆ. ಕೆಲವೊಮ್ಮೆ ಮಿನಿ ಲಾರಿಗಳು ಅತಿ ಭಾರವನ್ನು ಹೊತ್ತುಕೊಂಡು ಸಾಗುತ್ತಿರುವುದು ಕಂಡುಬರುತ್ತಿದೆ. ಆದರೆ, ಅವುಗಳ ಗಾತ್ರ ಸಣ್ಣದಾಗಿರುವುದರಿಂದ ಕಮಾನು ದಾಟಿ ಹೋಗಲು ಯಾವುದೇ ಅಡೆತಡೆ ಇಲ್ಲ!

ಬಸ್‌ಗಳ 13 ಟ್ರಿಪ್‌ ಕಟ್‌
ಕಿನ್ನಿಗೋಳಿಯಿಂದ ಬಳ್ಕುಂಜೆ, ಕರ್ನಿರೆ ಮಾರ್ಗವಾಗಿ ಆಗಿ ಪಲಿಮಾರು, ಪಡುಬಿದ್ರಿಗೆ ಅದೇ ರೀತಿ ಪಡುಬಿದ್ರಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುವ ಬಸ್‌ಗಳ ಸಂಚಾರವೇ ಈಗ ನಿಂತಿದೆ. ಈಗ ಈ ಬಸ್‌ಗಳು ಕೆಲವೊಮ್ಮೆ ಕಿನ್ನಿಗೋಳಿಯಿಂದಲೇ ಟ್ರಿಪ್‌ ಕಟ್‌ ಮಾಡುತ್ತಿದ್ದು, ದಿನನಿತ್ಯ ಕೆಲಸದ ನಿಮಿತ್ತ ಸಂಚರಿಸುವವರು ರಿಕ್ಷಾದಲ್ಲೇ ಹೋಗಬೇಕಾದ ಅನಿವಾರ್ಯತೆ ಒದಗಿದೆ. ಈ ಭಾಗದಲ್ಲಿ ಬಸ್‌ಗಳ 13 ಟ್ರಿಪ್‌ ಕಡಿತಗೊಳಿಸಲಾಗಿದೆ.

ಇನ್ನೆಷ್ಟು ದಿನ ಎನ್ನುವುದು ಗೊತ್ತಿಲ್ಲ
ಈ ಸೇತುವೆ ಶಿಥಿಲವಾಗಿದೆ ಎಂಬ ಕಾರಣಕ್ಕೆ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ಅದನ್ನು ರಿಪೇರಿ ಮಾಡುವ, ಇಲ್ಲವೇ ಹೊಸ ಸೇತುವೆ ನಿರ್ಮಾಣದ ಯಾವುದೇ ಕೆಲಸಗಳು ಇಲ್ಲಿ ನಡೆಯುತ್ತಿಲ್ಲ. ಹೀಗಿರುವಾಗ ಈ ನಿರ್ಬಂಧ ಎಷ್ಟು ದಿನ ಎನ್ನುವ ಬಗ್ಗೆ ಯಾವುದೇ ಖಾತ್ರಿ ಇಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಈ ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ
ಅಡ್ವೆ- ನಂದಿಕೂರು ಪಲಿಮಾರಿನಿಂದ ಕಿನ್ನಿಗೋಳಿ ಪೊಂಪೈ ಕಾಲೇಜು, ಕಟೀಲು ದೇಗುಲ ಕಾಲೇಜು ಮತ್ತು ಆಳ್ವಾಸ್‌ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳು ಇದೇ ಮಾರ್ಗವನ್ನು ಬಳಸುತ್ತಿದ್ದಾರೆ. ಬಸ್‌ಗಳು ಸೇತುವೆ ದಾಟಿ ಬರದೆ ಇರುವುದರಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ತುಂಬಾ ಕಷ್ಟ ಪಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಪಲಿಮಾರಿನಿಂದ ರಿಕ್ಷಾದಲ್ಲಿ ಬಳ್ಕುಂಜೆಗೆ ಬಂದು ಮತ್ತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೆ, ಕೆಲವು ವಿದ್ಯಾರ್ಥಿಗಳು ಪಡುಬಿದ್ರೆ, ಮೂಲ್ಕಿ ಮೂಲಕ ಕಿನ್ನಿಗೋಳಿಗೆ ಬಂದು ಪೊಂಪೈ, ಕಟೀಲು ಕಾಲೇಜಿಗೆ ಹೋಗುತ್ತಿದ್ದಾರೆ.

ಅರ್ಧದವರೆಗೆ ಬಸ್‌ ಓಡಾಟದಿಂದ ನಷ್ಟ
ಬಳ್ಕುಂಜೆಯಂತಹ ಗ್ರಾಮೀಣ ಪ್ರದೇಶಕ್ಕೆ ಬಸ್‌ ಸಂಚಾರ ಕಷ್ಟದಾಯಕವಾಗಿದೆ. ಕೇವಲ ಸ್ವಲ್ಪ ದೂರಕ್ಕೆ ಬಸ್‌ ಓಡಿಸಿದರೆ ಡೀಸೆಲ್‌ ಇನ್ನಿತರ ಖರ್ಚು ವೆಚ್ಚ ನೋಡಿದರೆ ನಷ್ಟವಾಗುತ್ತಿದೆ. ಈಗ ಸೇತುವೆಯಲ್ಲಿ ಸಂಚಾರ ನಿಲ್ಲಿಸಿವುದರಿಂದ ಬಳ್ಕುಂಜೆ ಬಸ್‌ ಒಡಾಟ ಕಷ್ಟವಾಗುತ್ತಿದೆ. ಸೇತುವೆಯಲ್ಲಿ ಸಣ್ಣ ಟಿಪ್ಪರ್‌ ವಾಹನ ಸಂಚಾರವಿದೆ. ಆದರೆ, ಜನರು ಹೋಗುವ ಬಸ್‌ ಸಂಚಾರ ಮಾತ್ರ ಇಲ್ಲ. ಇದು ಯಾವ ನ್ಯಾಯ? ಇದಕ್ಕೆ ಶಾಶ್ವತ ಪರಿಹಾರ ಬೇಕಾಗಿದೆ.
-ಸುಕುಮಾರ್‌ ಶೆಟ್ಟಿ, ಅಧ್ಯಕ್ಷ ಬಸ್‌ ಮಾಲಕರ ಸಂಘ ಕಿನ್ನಿಗೋಳಿ

3 ಬಾರಿ ತರಕಾರಿ ಬರುತ್ತಿತ್ತು
ಈ ಮೊದಲು ತರಕಾರಿ, ಸಾಮಗ್ರಿಗಳನ್ನು ಹೊತ್ತ ಲಾರಿಗಳು ಕರ್ನಿರೆ, ಬಳ್ಕುಂಜೆಗೆ ವಾರಕ್ಕೆ ಮೂರು ಸಲ ಬರುತ್ತಿದ್ದವು. ಸೇತುವೆಗೆ ಕಮಾನು ಹಾಕಿದ ಬಳಿಕ ವಾರಕ್ಕೆ ಒಂದು ಸಲ ಬರುವುದು ಕಷ್ಟವಾಗಿದೆ. ಉಡುಪಿ – ದಕ್ಷಿಣ ಕನ್ನಡವನ್ನು ಜೋಡಿಸುವ ಕೊಂಡಿ ರಸ್ತೆಯ ಸೇತುವೆಯಲ್ಲಿ ಸಂಚಾರವನ್ನು ನಿರ್ಬಂಧಿಸಿರುವುದು ದೊಡ್ಡ ದುರಂತ.
– ರವೀಂದ್ರ ಪೂಜಾರಿ, ಬಳ್ಕುಂಜೆ

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next