Advertisement

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

03:01 PM Dec 19, 2024 | Team Udayavani |

ಮಹಾನಗರ: ನಿತ್ಯ ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರ ನಿದ್ದೆ ಕೆಡಿಸಿದ್ದ ನಂತೂರು ಜಂಕ್ಷನ್‌ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ. ನಂತೂರಿನಲ್ಲಿ ವಾಹನಗಳ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ನಡೆಯುತ್ತಿದ್ದು, ನಂತೂರು ವೃತ್ತದ ಆಸು ಪಾಸಿನಲ್ಲಿದ್ದ ಜಾಗ ಅಗಲೀಕರಣ ನಡೆಸಿದ್ದರಿಂದ ಸಂಚಾರ ಸುಗಮಗೊಂಡಿದೆ.

Advertisement

ರಸ್ತೆ ವಿಸ್ತರಣೆಯೊಂದಿಗೆ, ನಂತೂರು ವಾಹನ ಕೆಳಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಪೂರ್ವಭಾವಿ ಕಾಮಗಾರಿಗಳು ನಡೆಯುತ್ತಿದೆ. ವಿದ್ಯುತ್‌ ಕಂಬಗಳನ್ನು ತೆರವುಗೊಳಿಸುವ ಕೆಲಸ ಬಹುಪಾಲು ಪೂರ್ಣ ಗೊಂಡಿದೆ. ಆರಂಭದ ವೇಗ ಈಗ ಇಲ್ಲದಿದ್ದರೂ ನಂತೂರಿನಲ್ಲಿ ವಾಹನ ಸವಾರರು ಅಲ್ಪ ಪ್ರಮಾಣದಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ರಸ್ತೆ ಬದಿ ಭೂ ಸ್ವಾಧೀನ ಮಾಡಲಾಗಿರುವ ಸ್ಥಳವನ್ನು ಸಮತಟ್ಟು ಮಾಡಿರುವ ಕಾರಣದಿಂದಾಗಿ ವಾಹನಗಳು ನಿರಾಯಾಸವಾಗಿ ತೆರಳಲು ಸಾಧ್ಯವಾಗಿದೆ.

ಫ್ರೀ ಲೆಫ್ಟ್‌ ಬಳಕೆ
ಹಿಂದೆ ಕೆಪಿಟಿಯಿಂದ ಆಗಮಿಸುವ ವಾಹನ ಗಳಿಗೆ ಬಿಕರ್ನಕಟ್ಟೆ ಕಡೆ ಫ್ರೀಲೆಫ್ಟ್‌ ಪಡೆಯುವುದು ಕಷ್ಟ ಸಾಧ್ಯವಾಗಿತ್ತು. ವಾಹನಗಳ ಸಾಲಿನಿಂದಾಗಿ ಪೊಲೀಸರಿಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ರಸ್ತೆ ವಿಸ್ತರಣೆ ನಡೆಸಿರುವ ಕಾರಣದಿಂದಾಗಿ ಫ್ರೀ ಲೆಫ್ಟ್‌ ಪಡೆಯುವವರಿಗೆ ಅನುಕೂಲ ವಾಗಿದೆ. ಮತ್ತೂಂದೆಡೆ ಬಿಕರ್ನಕಟ್ಟೆಯಿಂದ ಪಂಪ್‌ವೆಲ್‌ನತ್ತ ಹೋಗುವುದೂ ಈಗ ಸರಾಗವಾಗಿದೆ. ಮಲ್ಲಿಕಟ್ಟೆ ಯಿಂದ ಕೆಪಿಟಿ ಕಡೆಗೆ ಹೋಗುವ ರಸ್ತೆಯೂ ನಿರಾಳವಾಗಿದೆ. ಬಿಕರ್ನಕಟ್ಟೆಯಿಂದ ನಗರಕ್ಕೆ ಬರುವಾಗಿನ ಒತ್ತಡವೂ ಕಡಿಮೆಯಾಗಿದೆ.

ಸುಗಮ ಸಂಚಾರಕ್ಕೆ ಸರ್ವಿಸ್‌ ರಸ್ತೆ
ರಾ.ಹೆ. 66ರಲ್ಲಿ ನಂತೂರು ಪದವು ಕಡೆಯಿಂದ ನಂತೂರು ಜಂಕ್ಷನ್‌ ಮೂಲಕ ಪಂಪ್‌ವೆಲ್‌ ಕಡೆಗೆ ಸರ್ವಿಸ್‌ ರಸ್ತೆ ಕಾಮಗಾರಿ ನಡೆಯುತ್ತಿದೆ. ರಾ.ಹೆ.73ರಲ್ಲಿ ಬಿಕರ್ನಕಟ್ಟೆ ಕಡೆಯಿಂದ ಮಂಗಳೂರು ನಗರ ಪ್ರವೇಶಿಸುವ (ಮಲ್ಲಿಕಟ್ಟೆ ಕಡೆಗೆ) ವರೆಗೆ ಕಾಮಗಾರಿಗಳು ನಡೆಯಲಿವೆ. ಎರಡೂ ಬದಿಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವುದು ಈ ಕಾಮಗಾರಿಯ ಉದ್ದೇಶ.

ಮುಖ್ಯ ಕಾಮಗಾರಿ ವೇಳೆ ಸಮಸ್ಯೆ ಸಾಧ್ಯತೆ!
ಪ್ರಸ್ತುತ ಆರಂಭಿಕ ಹಂತದ ಕಾಮಗಾರಿಯಷ್ಟೇ ನಡೆದಿದೆ. ಮುಂದಿನ ದಿನಗಳಲ್ಲಿ ಈಗಿರುವ ರಸ್ತೆಯನ್ನು ಅಗೆದು ಕಾಮಗಾರಿ ನಡೆಯಲಿದ್ದು ಆ ಸಂದರ್ಭದಲ್ಲಿ ವಾಹನ ಸವಾರರಿಗೆ ಮತ್ತೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಮುಖ್ಯ ಕಾಮಗಾರಿ ಆರಂಭಿಸುವ ಮೊದಲು ಸೂಕ್ತವಾಗಿ ಸರ್ವಿಸ್‌ ರಸ್ತೆಗಳಿಗೆ ಡಾಮರು ಹಾಕಿ ವ್ಯವಸ್ಥಿತವಾಗಿ ಮಾಡಿದ್ದಲ್ಲಿ ಹೆಚ್ಚಿನ ಸಮಸ್ಯೆ ಪರಿಹಾರವಾಗಬಹುದು.

Advertisement

40 ಮೀ. ಅಗಲದ ಓವರ್‌ಪಾಸ್‌
ನಂತೂರಿನಲ್ಲಿ ಸುಮಾರು 40 ಮೀ. ಅಗಲದ ಚತುಷ್ಪಥ ಓವರ್‌ಪಾಸ್‌ ನಿರ್ಮಾಣವಾಗಲಿದೆ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶವಾಗಿದ್ದು, ಆರು ತಿಂಗಳುಗಳಲ್ಲಿ ನಿರೀಕ್ಷಿತ ಕಾಮಗಾರಿ ನಡೆದಿಲ್ಲ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಕಿರಿದಾಗಿದೆ ನಂತೂರು ವೃತ್ತ
ನಂತೂರು ವೃತ್ತದಲ್ಲಿ ಕೆಲವು ವರ್ಷಗಳ ಹಿಂದೆ ಬೃಹತ್‌ ಗಾತ್ರದ ವೃತ್ತ ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಬಳಿಕ ಅದರ ಗಾತ್ರವನ್ನು ಕಿರಿದಾಗಿಸಲಾಗಿದೆ. ಇದೀಗ ಸಣ್ಣ ವೃತ್ತವಿರುವ ಕಾರಣ ವಾಹನಗಳಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ.

ನಂತೂರು ಜಂಕ್ಷನ್‌ ಬಳಿ ರಸ್ತೆ ವಿಸ್ತರಣೆಯಾಗುತ್ತಿದೆ. ಒಂದು ಹಂತದಲ್ಲಿ ಇದು ಅನುಕೂಲ ವಾಗಲಿದೆ. ಜಂಕ್ಷನ್‌ನಲ್ಲಿ ರಸ್ತೆ ವಿಸ್ತರಣೆಯಾಗಿ ಅದರ ಮುಂದಿನ ರಸ್ತೆ ಕಿರಿದಾಗಿದ್ದರೆ ಟ್ರಾಫಿಕ್‌ ಸಮಸ್ಯೆ ನಿಯಂತ್ರಿಸುವುದು ಕಷ್ಟ. ಮುಂದೆ ಸರ್ವಿಸ್‌ ರಸ್ತೆಯನ್ನು ಯಾವ ರೀತಿಯಲ್ಲಿ ವಿನಿಯೋಗಿಸಬಹುದು ಎಂಬುವುದನ್ನು ಪರಾಮರ್ಶಿಸುತ್ತೇವೆ.
-ನಝ್ಮಾ ಫರೂಕಿ, ಎಸಿಪಿ ಸಂಚಾರ ವಿಭಾಗ

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next