ಬೆಂಗಳೂರು: ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಮಂಡ್ಯ ಜೆಡಿಎಸ್‌ನಲ್ಲಿ ಅತೃಪ್ತಿ ಉಂಟಾಗಿದ್ದು, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಎಲ್.ಆರ್.ಶಿವರಾಮೇಗೌಡ ಹಾಗೂ ಲಕ್ಷ್ಮಿ
ಅಶ್ವಿನಿಗೌಡ ಅವರು ಎರಡು ವರ್ಷಗಳ ಹಿಂದೆಯಷ್ಟೇ ಪಕ್ಷಕ್ಕೆ ಬಂದಿದ್ದು ಅವರಿಗೆ ಟಿಕೆಟ್ ನೀಡಬಾರದು ಎಂದು ಸ್ಥಳೀಯ ನಾಯಕರು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಹೀಗಾಗಿ, ಜೆಡಿಎಸ್ ಮಂಡ್ಯ ಅಭ್ಯರ್ಥಿ ಆಯ್ಕೆ ವಿಚಾರ ಸ್ವಲ್ಪ ಮಟ್ಟಿಗೆ ಕಗ್ಗಂಟಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಜಿಲ್ಲಾ ಮುಖಂಡರ ಜತೆ ಸಭೆ ನಡೆಸುವ ಸಾಧ್ಯತೆಯಿದೆ. ಗುರುವಾರ ರಾತ್ರಿ
ಎಚ್.ಡಿ.ದೇವೇಗೌಡರು ಅಭ್ಯರ್ಥಿ ಆಯ್ಕೆ ಬಗ್ಗೆ ಮಂಡ್ಯದ ಸಚಿವರು ಹಾಗೂ ಶಾಸಕರ ಜತೆ ಸಮಾಲೋಚನೆ
ನಡೆಸಿದರು. ಸಚಿವರಾದ ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಅವರಿಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ.
ಅವರು ಶಿಫಾರಸು ಮಾಡುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಲಾಗಿದೆ. ಪಕ್ಷಕ್ಕೆ 20 ವರ್ಷಗಳಿಂದ ದುಡಿಯುತ್ತಿದ್ದು, ನನಗೆ ಟಿಕೆಟ್ ನೀಡಬೇಕು ಎಂದು ಮುಖಂಡರಾದ ನೆಲ್ಲಿಗೆರೆ ಬಾಲು ಬಹಿರಂಗವಾಗಿಯೇ ಒತ್ತಾಯಿಸಿದ್ದಾರೆ.
ಅನಿಶ್ಚಿತತೆ: ಈ ಮಧ್ಯೆ, ಶಿವಮೊಗ್ಗ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲಾಗುವುದು ಎಂದು ದೇವೇಗೌಡರು ಹೇಳಿದ್ದು, ಮಧು ಬಂಗಾರಪ್ಪ ವಿದೇಶದಲ್ಲಿದ್ದಾರೆ. ಹೀಗಾಗಿ, ಆ ಕ್ಷೇತ್ರದ ಬಗ್ಗೆಯೂ ಅನಿಶ್ಚಿತತೆ ಉಂಟಾಗಿದೆ. ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟು ಕೊಡಲಾಗಿದೆ ಎಂದು ಹೇಳಿದ್ದರೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿರುವುದು ಕುತೂಹಲ ಮೂಡಿಸಿದೆ.