ಮುಂಬೈ:ರಾಯಗಢ ಜಿಲ್ಲೆಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಬುಧವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಘಟನೆ ನಡೆದು 36 ಗಂಟೆಗಳ ಬಳಿಕವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಪೊಲೀಸರು ಆರ್ ಸಿಸಿ ರೂಫ್ ಕನ್ಸಲ್ ಟೆಂಟ್ ಬಾಹುಬಲಿ ಧಾಮ್ನೆಯನ್ನು ನವಿ ಮುಂಬೈ ಪ್ರದೇಶದಲ್ಲಿ ಬಂಧಿಸಿದ್ದಾರೆ. ದಾಮ್ನೆಯನ್ನು ಕೋರ್ಟ್ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕಟ್ಟಡ ಕುಸಿದ ಪ್ರಕರಣದಲ್ಲಿ ಐದು ಮಂದಿ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 25ರಂದು 4 ವರ್ಷದ ಮಗು ಹಾಗೂ 64 ವರ್ಷದ ಮಹಿಳೆ ಸೇರಿದಂತೆ 25 ಮಂದಿಯನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿತ್ತು. ಸ್ಥಳೀಯ ಆಡಳಿತ, ರಕ್ಷಣಾ ತಂಡ ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿಗಳು, ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ. ಘಟನಾ ಸ್ಥಳದಲ್ಲಿ ಎನ್ ಡಿಆರ್ ಎಫ್ ಮತ್ತು ಸ್ಥಳೀಯ ಅಧಿಕಾರಿಗಳು ಸಾಧ್ಯವಾದ ಎಲ್ಲಾ ನೆರವು ನೀಡಲಿ ಎಂದು ತಿಳಿಸಿದ್ದಾರೆ.
ಶೀಘ್ರವೇ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜಿಲ್ಲಾ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದರು. ಘಟನೆಯಲ್ಲಿ ಸಾವನ್ನಪ್ಪಿದ್ದ ಪ್ರತಿಯೊಂದು ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಚಿವ ವಿಜಯ್ ವಾಡೆಟ್ಟಿವಾರ್ ಘೋಷಿಸಿದ್ದಾರೆ.
ಈ ಕಟ್ಟಡವನ್ನು ಸುಮಾರು 5-6 ವರ್ಷಗಳ ಹಿಂದೆ ಕಟ್ಟಲಾಗಿದ್ದು, ಇದರಲ್ಲಿ ಸುಮಾರು 40-50 ಫ್ಲ್ಯಾಟ್ ಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಮುಂಬೈನಿಂದ 170 ಕಿಲೋ ಮೀಟರ್ ದೂರದಲ್ಲಿರುವ ಮಹಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.