Advertisement

Madikeri: ಮೂರು ಕಳ್ಳತನ ಪ್ರಕರಣದ ಆರೋಪಿ ಬಂಧನ

01:58 PM Jan 04, 2025 | Team Udayavani |

ಮಡಿಕೇರಿ: ನಗರದಲ್ಲಿ ನಡೆದ ಮೂರು ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಳಗಿ ಗ್ರಾಮದ ನಿವಾಸಿ ನಾಗರಾಜು (37) ಬಂಧಿತ ಆರೋಪಿ. ಈತನ ಬಳಿಯಿಂದ ರೂ.50 ಸಾವಿರ ನಗದು, 87 ಗ್ರಾಂ ಚಿನ್ನಾಭರಣ ಮತ್ತು 2 ಬೆಳ್ಳಿ ಚೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ನಿವಾಸಿ ರಜಿನಿ ಹರೀಶ್ ಎಂಬವರು 2024ರ ಡಿ.5 ರಂದು ಪುತ್ರಿಯ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲೆಂದು ತೆರಳಿದ್ದು, ರಾತ್ರಿ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಕಂಡು ಬಂದಿದೆ. ಬೀರುವಿನಲ್ಲಿದ್ದ ಸುಮಾರು 87 ಗ್ರಾಂ. ಚಿನ್ನಾಭರಣಗಳನ್ನು ಕಳ್ಳರು ದೋಚಿರುವ ಕುರಿತು ರಜಿನಿ ಹರೀಶ್ ನೀಡಿದ ದೂರನ್ನು ಆಧರಿಸಿ ಮಡಿಕೇರಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿ ನಾಗರಾಜುವನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತ ಇನ್ನೂ ಎರಡು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

2024 ಮೇ 5 ರಂದು ನಗರದ ಶಾಂತಿನಿಕೇತನದಲ್ಲಿರುವ ವೆಲೆರಿಯನ್ ಲೋಬೋ ಎಂಬವರಿಗೆ ಸೇರಿದ ದಿನಸಿ ಅಂಗಡಿಯಿಂದ ಲಕ್ಷಾಂತರ ರೂ. ದೋಚಿರುವುದು ಮತ್ತು 2024 ಜು.28 ರಂದು ಚಾಮುಂಡೇಶ್ವರಿ ನಗರದ ನಿವಾಸಿ ರಾಜಮ್ಮ ಮಹದೇವರ ಎಂಬವರ ಮನೆಯಲ್ಲಿ ಅಂದಾಜು 12 ಗ್ರಾಂ. ತೂಕದ ಚಿನ್ನಾಭಾರಣ, 3 ಜೊತೆ ಬೆಳ್ಳಿ ಚೈನ್ ಮತ್ತು ರೂ.10 ಸಾವಿರ ನಗದನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

Advertisement

ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ಸಿಪಿಐ ರಾಜು ಪಿ.ಕೆ, ಪಿಎಸ್‌ಐಗಳಾದ ಲೋಕೇಶ, ರಾಧ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂರು ಕಳ್ಳತನ ಪ್ರಕರಣಗಳ ಆರೋಪಿಯನ್ನು ಪತ್ತೆ ಹಚ್ಚಿ ಸಂಪೂರ್ಣ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next