Advertisement
ಕನ್ನಡ ಪುಸ್ತಕಗಳಿಗೆ ಬೇಡಿಕೆಯೇ ಇಲ್ಲ, ಓದುಗರು, ಯುವಪೀಳಿಗೆಯವರು ಓದಿನಿಂದ ವಿಮುಖರಾಗುತ್ತಿದ್ದಾರೆ. ಪರಿಣಾಮವಾಗಿ ಕನ್ನಡ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಪುಸ್ತಕಗಳಿಗೆ ಬೇಡಿಕೆ ಕುಸಿಯುತ್ತಿದೆ ಎಂಬ ಮಾತುಗಳೇ ಕೇಳಿಬರುತ್ತಿರುವ ಈ ದಿನಗಳಲ್ಲಿ, ಕನ್ನಡದ ಓದುಗರನ್ನೆಲ್ಲಾ ಒಂದೆಡೆಗೆ ಒಟ್ಟುಸೇರಿಸುವ, ಆ ಮೂಲಕ ಅಪರಿಚಿತರನ್ನು ಚಿರಪರಿಚಿತರಾಗಿಸಿ, ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಹೆಚ್ಚಿಸುವ ಮಹತ್ವದ ಕಾರ್ಯವೊಂದು ರಾಜಧಾನಿ ಬೆಂಗಳೂರಿನಲ್ಲಿ ಹಬ್ಬದಂತೆ, ಉತ್ಸವದಂತೆ ನಡೆಯುತ್ತಿದೆ. “(ಅ)ಪರಿಚಿತ ಓದುಗರು’, “ಹೊತ್ತಿಗೆ ಮಿತ್ರರು’, “ಹಳೇ ಬಾಟ್ಲಿ ಹೊಸಾ ವೈನು’, “ಕೇಳು ಮನಸೇ’ ಎಂಬ ತಂಡಗಳು ಪುಸ್ತಕ ಪರಿಚಾರಿಕೆಯ ಕಾಯಕವನ್ನು ಒಂದು ವ್ರತದಂತೆ ಮಾಡುತ್ತಿವೆ.
Related Articles
Advertisement
2023 ಜುಲೈನಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಆರಂಭವಾಯಿತು. ಕೇವಲ 14 ಜನರಿಂದ ಆರಂಭವಾದ ಈ ಕಾರ್ಯಕ್ರಮ ಇಂದು ರಾಜ್ಯದ 20 ಜಿಲ್ಲೆಗಳಿಗೆ ವಿಸ್ತರಿಸಿದೆ. ತಿಂಗಳಿನಲ್ಲಿ ಒಂದು ಭಾನುವಾರವನ್ನು ಶುದ್ಧ ಓದಿಗೆ ಈ ತಂಡದ ಸದಸ್ಯರು ಮೀಸಲಿಡುತ್ತಾರೆ. ಬೆಂಗಳೂರಿನಲ್ಲಾದರೆ ಕಬ್ಬನ್ ಪಾರ್ಕ್ ನಲ್ಲಿ, ಉಳಿದ ಜಿಲ್ಲೆಗಳಲ್ಲಾದರೆ ಅಲ್ಲಿನ ಸದಸ್ಯರು ಗೊತ್ತುಪಡಿಸಿದ ಜಾಗದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಈ ಗುಂಪಿಗೆ ಸೇರಲು ಬಯಸುವವರಿಗೆ ಇರಬೇಕಾದ ಅರ್ಹತೆಯೆಂದರೆ, ನೀವು ಓದುಗರಾಗಿರಬೇಕು. ನಿಮ್ಮಿಷ್ಟದ ಸಾಹಿತ್ಯವನ್ನೇ ಓದುವ ಸ್ವಾತಂತ್ರ್ಯಇಲ್ಲಿದೆ. ಯಾವುದೇ ವಯಸ್ಸು, ಅರ್ಹತೆಗೆ ಕಟ್ಟುಬೀಳದೆ.
“ಬಾ ಗುರು ಬುಕ್ಸ್ ತಗೊ’ ಎಂಬ ಅಭಿಯಾನದಿಂದ ಹುಟ್ಟಿಕೊಂಡ ಪುಸ್ತಕ ಪ್ರೇಮಿಗಳ ತಂಡವೇ “ಹಳೇ ಬಾಟ್ಲಿ ಹೊಸ ವೈನು’. 2024 ಜನವರಿಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈಗಿನ ಪೀಳಿಗೆಯ ಬರಹಗಾರರೊಂದಿಗೆ ಹಿರಿಯ, ಅನುಭವಿ ಬರಹಗಾರರೊಂದಿಗಿನ ಸಂವಾದವೇ ಈ ಕಾರ್ಯಕ್ರಮದ ಮೂಲ ಉದ್ದೇಶ. ಹೊಸ ಬರಹಗಾರರು ತಮ್ಮ ಪುಸ್ತಕ, ಬರವಣಿಗೆ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲು ಇದೊಂದು ಅವಕಾಶ. ಸಾಹಿತಿಗಳಾದ ಸಂಧ್ಯಾರಾಣಿ, ಜಿ.ಎನ್. ಮೋಹನ್, ಎಂ.ಆರ್. ಕಮಲಾ, ವಿಕಾಸ ನೇಗಿಲೋಣಿ, ವಿಕ್ರಮ ವಿಸಾಜಿ, ವಸುಧೇಂದ್ರ ಅವರು ಈವರೆಗೆ ಕಾರ್ಯಕ್ರಮಕ್ಕೆ ಬಂದು ಸಂವಾದ ನಡೆಸಿಕೊಟ್ಟಿದ್ದಾರೆ.
90 ನಿಮಿಷದ ಈ ಕಾರ್ಯಕ್ರಮದಲ್ಲಿ ವಿವಿಧ ಪರಿಕಲ್ಪನೆ ಆಧಾರಿತ ಸಂವಾದ, ಚರ್ಚೆ ನಡೆಯುತ್ತದೆ. ಬೆಂಗಳೂರಿನ ಇಂದಿರಾನಗರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜನ ಸಾಮಾನ್ಯರಿಗೆ ಮುಕ್ತ ಅವಕಾಶ. ಜಯರಾಮಾಚಾರಿ, ವಿಕ್ರಮ್ ಬಿ.ಕೆ., ಸ್ಪೂರ್ತಿ ಚಂದ್ರಶೇಖರ್ ಮುಂತಾದ ಸಮಾನ ಮನಸ್ಕರು “ಹಳೇ ಬಾಟ್ಲಿ ಹೊಸ ವೈನು’ ಕಾರ್ಯಕ್ರಮದ ಆಯೋಜಕರು.
ಓದುಗರನ್ನಷ್ಟೇ ಸೆಳೆಯುವ ಕಾರ್ಯಕ್ರಮವಿದು. ಹೆಚ್ಚಿನ ವಿವರಗಳಿಗೆ (ಅ)ಪರಿಚಿತ ಓದುಗರ (https://bit.ly/3DyMD6z) ಇನ್ಸ್ಟಾಗ್ರಾಂ ಜಾಲತಾಣಕ್ಕೆ ಭೇಟಿ ನೀಡಬಹುದು.
ಹೊತ್ತಿಗೆ ಮಿತ್ರರು: ಸಾಹಿತ್ಯದ ಜೊತೆಗಿನ ನಂಟು ಹಲವು ಸಂಬಂಧಗಳಿಗೆ ನಾಂದಿ ಹಾಡುತ್ತದೆ ಎನ್ನುವುದಕ್ಕೆ (ಅ)ಪರಿಚಿತ ಓದುಗರಿಂದ ಆರಂಭವಾದ “ಹೊತ್ತಿಗೆ ಮಿತ್ರರು’ ಬಳಗವೇ ಸಾಕ್ಷಿ. ಈ ತಂಡದಲ್ಲಿ ಇರುವವರೆಲ್ಲಾ ಕಬ್ಬನ್ ಪಾರ್ಕ್ನಲ್ಲಿ (ಅ)ಪರಿಚಿತ ಓದುಗರ ಭೇಟಿಯಲ್ಲಿ ಸಿಕ್ಕ ಸಮಾನ ಮನಸ್ಕರು. 20 ಜನರಿಂದ ಆರಂಭವಾದ ಗುಂಪು ಇದು. ಸಾಹಿತ್ಯ, ಸಂಗೀತ ಹಾಗೂ ಸಂಚಾರ ವಿಷಯಗಳು ಇವರನ್ನು ಗಟ್ಟಿಯಾಗಿ ಬೆಸೆದಿದ್ದು, ಅಲ್ಲಲ್ಲಿ ಚಾರಣ, ಬೈಕ್ ರೈಡ್ ಹೋಗಿ, ಅಲ್ಲಿ ಚಿಕ್ಕ ಕಾರ್ಯಕ್ರಮ ಮಾಡುತ್ತಾರೆ. ಲೇಖಕರನ್ನು ಭೇಟಿ ಮಾಡುವುದು, ಅವರೊಂದಿಗೆ ಸಂವಾದ ನಡೆಸುವುದು ಎಂದರೆ “ಹೊತ್ತಿಗೆ ಮಿತ್ರರು’ ಬಳಗಕ್ಕೆ ಇನ್ನಿಲ್ಲದ ಸಂಭ್ರಮ.
ಈ ತಂಡದ ಸದಸ್ಯರಲ್ಲಿ ಕೆಲವರು ಪದಬಂಧ ರಚಿಸುತ್ತಾರೆ, ಕೆಲವರು ಹಾಡು ಹಾಡುತ್ತಾರೆ, ಕೆಲವರ ಪದ್ಯ ವಾಚನ, ಕಗ್ಗ ವಾಚನ, ರಸಪ್ರಶ್ನೆ ಹೀಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಇದರೊಂದಿಗೆ ಓದಿದ ಪುಸ್ತಕದ ಬಗ್ಗೆ ಸದಾ ಚರ್ಚೆ ವಾಟ್ಸಾಪ್ ಗುಂಪಿನಲ್ಲಿ ಆಗುತ್ತಿರುತ್ತದೆ. ಪುಸ್ತಕ ವಿಮರ್ಶೆ ಹಾಗೂ ತಿಂಗಳಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ ಒಬ್ಬ ಸದಸ್ಯರಿಗೆ ಓದುಗರೆಲ್ಲಾ ಸೇರಿ, ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಾರೆ. “ತಿಂಗಳಲ್ಲಿ 20-25 ಪುಸ್ತಕಗಳನ್ನು ಓದಿದಂಥವರೂ ನಮ್ಮ ಗುಂಪಿನಲ್ಲಿ ಇದ್ದಾರೆ. ಆಗಾಗ ಗುಂಪಿನ ಸದಸ್ಯರೊಡನೆ ಪುಸ್ತಕ ವಿನಿಮಯಗಳೂ ಆಗುತ್ತವೆ. ಆದರೆ, ಬಹುತೇಕರ ಕನಸು ಚಿಕ್ಕ ಮನೆ ಗ್ರಂಥಾಲಯ ಆಗಿರುವುದರಿಂದ, ಎಲ್ಲರದ್ದೂ ಅವರವರ ಪುಸ್ತಕ ಸಂಗ್ರಹವಿದೆ’ ಎಂದು ಸಂತಸದಿಂದ ಹೇಳುತ್ತಾರೆ ತಂಡದ ಸದಸ್ಯರು.
ಓದುಗರು ಕಡಿಮೆಯಾಗುತ್ತಿದ್ದಾರೆ ಎಂದು ಹೇಳುವ ಬದಲು, ಹೊಸ ಮಾದರಿಯಲ್ಲಿ ಓದುಗರನ್ನು ಒಂದೆಡೆಗೆ ಕರೆತರುವ ಈ ಬಗೆಯ ಪ್ರಯತ್ನಗಳು ಸ್ವಾಗತಾರ್ಹ. ನೀವು ಪುಸ್ತಕ ಪ್ರೇಮಿಗಳಾಗಿದ್ದರೆ, ಇಲ್ಲೊಮ್ಮೆ ಭೇಟಿ ನೀಡಲು ಮರೆಯದಿರಿ. ಕೇಳು ಮನಸೇ… 2022ರಲ್ಲಿ ಆರಂಭವಾದ “ಕೇಳು ಮನಸೇ’ ತಂಡ, ಕಥೆ ಹಾಗೂ ಕವನ ವಾಚನವನ್ನು ಒಂದು ಕಲಾ ಪ್ರದರ್ಶನದ ರೂಪದಲ್ಲಿ ನಡೆಸುತ್ತದೆ. ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿರುವ “ನಾಣಿ ಅಂಗಳ’ದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ 150 ರೂ.ಗಳ ಪ್ರವೇಶ ಶುಲ್ಕ ನೀಡಿ ಬರಬೇಕು. 90 ನಿಮಿಷಗಳ ಅವಧಿಯ ಕಾರ್ಯಕ್ರಮದಲ್ಲಿ ಮೊದಲೇ ನಿಶ್ಚಯಿಸಿದ ಆರು ಜನ ಕಾರ್ಯಕ್ರಮ ನೀಡುತ್ತಾರೆ. ಅದರಲ್ಲಿ ಮೂರು ಜನ ಕವಿತೆ ವಾಚಿಸಿದರೆ, ಉಳಿದ ಮೂವರು ಕಥೆ ಹೇಳುತ್ತಾರೆ. ಹೇಳುವ ಕಥೆ, ಕವನಗಳನ್ನು ಮೊದಲೇ ನಿಶ್ಚಯಿಸಲಾಗುತ್ತದೆ. ಸಾಹಿತಿಗಳು, ಪತ್ರಕರ್ತರು, ರಂಗಭೂಮಿ, ಸಿನಿಮಾ ಕಲಾವಿದರು, ಸಾಮಾಜಿಕ ಜಾಲತಾಣದಲ್ಲಿ ಖ್ಯಾತರಾದವರು,ಇಲ್ಲಿ ಪ್ರದರ್ಶನ ನೀಡಿದ್ದಾರೆ.
-ಸುಚೇತಾ ಹೆಗಡೆ