Advertisement
ಮಲೇಷ್ಯಾದ ಪಿಕೋನ್ ಬಂದರಿನಿಂದ “ತೋರ್ ಇನ್ಫಿನಿಟ್’ ಹೆಸರಿನ ಸರಕು ಹಡಗು ಈ ಮರಳು ತುಂಬಿಕೊಂಡು ನ.27ರಂದು ಹೊರಟಿದ್ದು, ಒಖೀ ಚಂಡಮಾರುತದ ಭೀತಿಯ ನಡುವೆಯೂ 10 ದಿನಗಳಲ್ಲಿ ನವಮಂಗಳೂರು ಬಂದರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಹಡಗಿನಲ್ಲಿರುವ ಕೋಟ್ಯಂತರ ರೂ. ಮೌಲ್ಯದ, ಬೃಹತ್ ಪ್ರಮಾಣದ ಮರಳನ್ನು ಶುಕ್ರವಾರ ಬೆಳಗ್ಗಿನಿಂದ ಅನ್‌ಲೋಡ್ ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಈ ಕಾರ್ಯಾಚರಣೆಗೇ ಬರೋಬ್ಬರಿ ಮೂರು ದಿನ ಬೇಕಾಗಲಿದೆ.
Related Articles
ವಿದೇಶದಿಂದ ಮರಳು ತರಿಸಿಕೊಂಡು ರಾಜ್ಯದಲ್ಲಿ ಮಾರಾಟ ಮಾಡಲು ರಾಜ್ಯ ಸರ್ಕಾರದ ಪರವಾನಗಿಯಡಿ ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಗೆ ಮತ್ತು ಮುಕ್ತ ಪರವಾನಗಿಯಡಿ ಆಕಾರ್ ಕಂಪನಿಗೆ ಅನುಮತಿ ನೀಡಲಾಗಿದೆ. ಇದರಂತೆ ಎಂಎಸ್‌ಐಎಲ್ ಈಗಾಗಲೇ ಆರು ಕಂಪನಿಗಳಿಗೆ ಗುತ್ತಿಗೆ ನೀಡಿದ್ದು, ಆಮದು ಪ್ರಕ್ರಿಯೆ ಶುರುವಾಗಿಲ್ಲ. ಈ ನಡುವೆ, ಮುಕ್ತ ಸಾಮಾನ್ಯ ಪರವಾನಿಗೆಯಲ್ಲಿ ಆಕಾರ್ ಏಜೆನ್ಸಿ ಇದೀಗ ಮೊದಲ ಹಂತವಾಗಿ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲು ಶುರು ಮಾಡಿದೆ. ಈ ಕಂಪನಿಗೆ ಒಟ್ಟು 5 ಲಕ್ಷ ಮೆಟ್ರಿಕ್ ಟನ್ ಮರಳು ಆಮದು ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ.
Advertisement
ಸದ್ಯ ರಾಜ್ಯದಲ್ಲಿ ವಾರ್ಷಿಕ 90 ಲಕ್ಷ ಟನ್ ಮರಳು ಬಳಕೆಗೆ ಲಭ್ಯವಿದೆ. ಆದರೆ ವರ್ಷಕ್ಕೆ ಬೇಡಿಕೆ ಇರುವ ಮರಳು 3.5 ಕೋಟಿ ಮೆಟ್ರಿಕ್ ಟನ್. ಹೀಗಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಾಸವಿರುವುದರಿಂದ ರಾಜ್ಯ ಸರ್ಕಾರ ವಿದೇಶಿ ಮರಳಿನ ಮೊರೆ ಹೋಗಿದೆ. ಹಾಗಂತ ಈಗ ಮಂಗಳೂರಿನ ಬಂದರಿಗೆ ಮರಳು ಬಂದಿದೆ, ನಾಳೆಯೇ ಸಿಗು¤ತ್ತೆ ಎಂದು ಭಾವಿಸುವ ಹಾಗೂ ಇಲ್ಲ. ಇದಕ್ಕೆ ಕಾರಣ, ರಾಜ್ಯ ಸರ್ಕಾರ ಇಲ್ಲಿ ಮರಳಿನ ಮಾರಾಟ ಮತ್ತು ಸಾಗಾಟಕ್ಕೆ ಕೆಲವೊಂದು ನಿಯಮಗಳನ್ನು ವಿಧಿಸಿದೆ. ಈ ನಿಯಮಗಳನ್ನು ಪಾಲನೆ ಮಾಡಿದ ಮೇಲಷ್ಟೇ ಮರಳು ತುಂಬಿದ ಲಾರಿಗಳು ಬಂದರಿನಿಂದ ಹೊರಡಲಿವೆ.ಅಲ್ಲಿವರೆಗೆ ಇಲ್ಲೇ ದಾಸ್ತಾನು ಮಾಡಲಾಗುತ್ತದೆ. ಈಗಾಗಲೇ ಆಕಾರ್ ಕಂಪನಿ ಸಾಗಾಟ ಮತ್ತು ಮಾರಾಟ ಸಂಬಂಧ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಅನುಮತಿಯನ್ನು ಎದುರು ನೋಡುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಗಳೂರಿಗೇ ಏಕೆ?ಮಂಗಳೂರು ಬಂದರಿಗೆ ಹೋಲಿಸಿದರೆ ಮಲೇಷ್ಯಾಕ್ಕೆ ಚೆನ್ನೈ ಬಂದರು ಸರಕು ಸಾಗಣೆಯ ದೃಷ್ಟಿಯಿಂದ ತುಂಬಾ ಹತ್ತಿರವಿದೆ. ಪ್ರಯಾಣದ ಅವಧಿಯೂ ಮಂಗಳೂರು ಬಂದರಿಗೆ ಹೋಲಿಸಿದರೆ ಕಡಿಮೆ ಸಾಕು. ಆದರೆ ಚೆನ್ನೈ ಬಂದರಿನಲ್ಲಿ ಬಂದರು ಶುಲ್ಕ ಹಾಗೂ ನಿರ್ವಹಣಾ ಶುಲ್ಕ ಅಧಿಕ. ಒಟ್ಟಾರೆ ಸಾಗಾಟ ವೆಚ್ಚದ ದೃಷ್ಟಿಯಿಂದ, ಚೆನ್ನೈಗೆ ಹೋಲಿಸಿದರೆ ಮಂಗಳೂರಿಗೆ ಮರಳು ಸಾಗಣೆ ಅನುಕೂಲಕರ ಮಿತವ್ಯಯಿ ಎಂಬ ದೃಷ್ಟಿಯಿಂದ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ. ಕರ್ನಾಟಕದ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಸ್ಥೆಯು ನವಮಂಗಳೂರು ಬಂದರು ಮೂಲಕ ಮರಳು ಆಮದು ಮಾಡಿಕೊಂಡಿದೆ. – ಕೇಶವ ಕುಂದರ್