Advertisement

ಮತದಾನದ ಅರಿವು ಮೂಡಿಸಿ

04:24 PM Jan 15, 2018 | |

ಮೈಸೂರು: ಸಾರ್ವತ್ರಿಕ ಚುನಾವಣೆ – 2018ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಹಮ್ಮಿಕೊಂಡು, ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶಿವಶಂಕರ್‌ ತಿಳಿಸಿದರು.

Advertisement

ಸಾರ್ವತ್ರಿಕ ಚುನಾವಣೆ-2018ರ ಅಂಗವಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಸ್ವೀಪ್‌ ಸಮಿತಿ ಅಧ್ಯಕ್ಷರಾಗಿರುವ ಅವರು, ಮತದಾರರ ಪಟ್ಟಿ ಪರಿಷ್ಕರಣೆಗೆ ಜನವರಿ 22 ರವರೆಗೂ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ಗೂ ಸ್ನಾತಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು. 

ಕಾರ್ಯಕ್ರಮ ರೂಪಿಸಿ: ಪ್ರತಿ ತಾಲೂಕಿಗೂ ಒಂದು ಸಮಿತಿ ರಚನೆಯಾಗಬೇಕು. ನಗರ ಪ್ರದೇಶದಲ್ಲೂ ಒಂದು ಸಮಿತಿ ರಚನೆಯಾಗಬೇಕು. ಚುನಾವಣಾ ಆಯೋಗ ನಿಗದಿಪಡಿಸಿರುವ ಮಾನದಂಡಗಳ ಮೇಲೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ: ಜಿಲ್ಲಾದ್ಯಂತ ಎಲ್ಲಾ ಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ ರಚಿಸಿ, ಸ್ಪರ್ಧೆಗಳನ್ನು ಆಯೋಜಿಸ ಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ವಿಜೇತ ರಾದವರಿಗೆ ಜನವರಿ 17 ರಂದು ಮೈಸೂರು
ನಗರದ ಅವಿಲಾ ಕಾನ್ವೆಂಟ್‌ನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಬಂಧ ಸ್ಪರ್ಧೆ, ಪೋಸ್ಟರ್‌ ರಚನೆ ಹಾಗೂ ಕೊಲಾಜ್‌ ರಚನೆ ಸ್ಪರ್ಧೆಗಳಿರುತ್ತವೆ. ವಿಜೇತರಿಗೆ ಜನವರಿ 25 ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.

ಮತದಾರರ ಪ್ರಮಾಣ ಹೆಚ್ಚಿಸಿ: ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಮತದಾನದ ಪ್ರಮಾಣ ಶೇ. 72.05 ಇದೆ. ಈ ಪೈಕಿ ಪುರುಷರ ಮತದಾನ ಪ್ರಮಾಣ ಶೇ. 73.71 ಹಾಗೂ ಮಹಿಳಾ ಮತದಾನದ ಪ್ರಮಾಣ ಶೇ.70.35 ಇದೆ. ಈ ಪ್ರಮಾಣ ವನ್ನು ಇನ್ನೂ ಹೆಚ್ಚಿಸಬೇಕು. ಇದಕ್ಕಾಗಿ ವ್ಯಾಪಕವಾದ ಜಾಗೃತಿ ಕಾರ್ಯಕ್ರಮ ಆಗಬೇಕು ಎಂದರು.

Advertisement

ಜಾಗೃತಿ ಮೂಡಿಸಿ: ಮತದಾನದಲ್ಲಿ ಲಿಂಗಾನುಪಾತದಲ್ಲಿ ಇರುವ ವ್ಯತ್ಯಾಸ ಸರಿಪಡಿಸಬೇಕು. ಮಹಿಳೆಯರು ಹಾಗೂ
ನಿರ್ಲಕ್ಷಕ್ಕೆ ಒಳಗಾಗಿರುವ ವರ್ಗದವರು ಹೆಚ್ಚು ಸಂಖ್ಯೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

 ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲೋಕನಾಥ್‌, ಜಿಪಂ ಯೋಜನಾ ನಿರ್ದೇಶಕಿ ರಾಣಿ, ಡಿಡಿಪಿಐ ಮಂಜುಳಾ, ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಜವರೇಗೌಡ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್‌. ರಾಜು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next