ಹುಣಸೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಯಿ ಹಾಗೂ ಶಿಶುವಿನ ಮರಣ ಪ್ರಮಾಣ ತಡೆಗಟ್ಟಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಿಸುವ ಮೂಲಕ ಸವಲತ್ತು ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ.ರಾಜೇಶ್ವರಿ ಮನವಿ ಮಾಡಿದರು.
ತಾಲೂಕಿನ ಹೊಸೂರು ಕೊಡಗು ಕಾಲೋನಿಯ ಡೇರಿ ಆವರಣದಲ್ಲಿ ಸುತ್ತಮುತ್ತಲಿನ ಸಹಕಾರ ಸಂಘಗಳು, ಯುವ ಸಂಘಗಳು ಆಯೋಜಿಸಿದ್ದ ಆರೋಗ್ಯ ಇಲಾಖೆಯ ಯೋಜನೆಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಾಗೃತಿ: ಇದೀಗ ಬೇಸಿಗೆ ಕಾಲವಾಗಿದ್ದು, ಹಳ್ಳಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾಂಕ್ರಾಮಿಕ ರೋಗ ತಡೆಗಟ್ಟಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಹುಮುಖ್ಯವಾಗಿ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಬಳಕೆ, ಶೌಚಗೃಹಗಳ ಬಳಕೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡಿದ್ದಲ್ಲಿ ಮಾರಣಾಂತಿಕ ರೋಗಗಳಿಂದ ದೂರ ಇರಬಹುದು ಎಂದು ಸಲಹೆ ನೀಡಿದರು.
ಪ್ರತಿ ಬುಧವಾರ ತಪಾಸಣೆ: ಮಕ್ಕಳಿಗೆ ಜಂತುಹುಳು ನಿವಾರಣೆಗೆ ಐರನ್ ಪೊಲಿಕ್ ಆಸಿಡ್ ಮಾತ್ರೆಗಳ ವಿತರಣೆ, ಅಂಧತ್ವ ನಿವಾರಣೆ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ನೇಹ ಕ್ಲಿನಿಕ್ ಯೋಜನೆಯಡಿ ಪ್ರತಿ ಬುಧವಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಹದಿಹರೆಯದ ಮಕ್ಕಳಿಗೆ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕಾ ಕಾರ್ಯಕ್ರಮ ಯೋಜನೆಯಡಿ ಮಕ್ಕಳಿಗೆ ಒಂಭತ್ತು ಮಾರಣಾಂತಿಕ ರೋಗಗಳಿಂದ ರಕ್ಷಣೆ ಪಡೆಯಲು ಲಸಿಕೆ ನೀಡಲಾಗುತ್ತಿದೆ ಎಂದರು.
ಜ್ವರ, ನಿರಂತಕ ಕೆಮ್ಮು, ದೇಹದ ತೂಕ ಕಡಿಮೆಯಾಗುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು. ಡೇರಿ ಅಧ್ಯಕ್ಷ ಕೆ.ವಿ.ರಾಮೇಗೌಡ ಮಾತನಾಡಿ, ಸಂಘದ ಸದಸ್ಯರು ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಮಕ್ಕಳ ವಿದ್ಯಾಭ್ಯಾಸ, ಉನ್ನತ ಶಿಕ್ಷಣಕ್ಕೆ ಮೈಮುಲ್ ನೆರವಾಗುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕೆಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಾಜೇಶ್, ಉಪಾಧ್ಯಕ್ಷ ವಿ.ಟಿ.ಮಣಿ, ಕಾರ್ಯದರ್ಶಿ ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎನ್.ರಾಮೇಗೌಡ, ಯ.ಮಂಜೇಗೌಡ, ಆರೋಗ್ಯ ನಿರೀಕ್ಷಕ ಕುಮಾರ್ ಸೇರಿದಂತೆ ಯುವಕ ಸಂಘ ಹಾಗೂ ಡೇರಿ ಸದಸ್ಯರು ಹಾಜರಿದ್ದರು.