Advertisement

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

09:34 AM Nov 24, 2024 | Team Udayavani |

ಪ್ರತೀ ವರ್ಷ ನವೆಂಬರ್‌ ತಿಂಗಳಿನ ತೃತೀಯ ಬುಧವಾರವನ್ನು ವಿಶ್ವ ಸಿಒಪಿಡಿ ದಿನವೆಂಬುದಾಗಿ ಆಚರಿಸಲಾಗುತ್ತದೆ. ಪ್ರಸ್ತುತ ವರ್ಷ ಇತ್ತೀಚೆಗಷ್ಟೇ ಈ ದಿನವನ್ನು ಆಚರಿಸಿದ್ದೇವೆ. ಜಾಗತಿಕವಾಗಿ ಅತೀ ಹೆಚ್ಚು ಮರಣಗಳಿಗೆ ಕಾರಣವಾಗುವ ಅನಾರೋಗ್ಯಗಳಲ್ಲಿ ಸಿಒಪಿಡಿಯು ಮೂರನೇ ಸ್ಥಾನದಲ್ಲಿದೆ. ಸಾಂಪ್ರದಾಯಿಕವಾಗಿ ನಂಬುವಂತೆ ಸಿಒಪಿಡಿಗೆ ಧೂಮಪಾನವು ಪ್ರಧಾನ ಕಾರಣವಾಗಿದೆ. ಆದರೆ ಅವಧಿಪೂರ್ವ ಜನನ, ಅಸ್ತಮಾ, ಅಲರ್ಜಿಗಳು, ಪೌಷ್ಟಿಕಾಂಶ ಕೊರತೆ, ಮಾಲಿನ್ಯ, ಸೋಂಕುಗಳು ಮತ್ತಿತರ ಹಿಂದೆಯೇ ಬೇರುಬಿಟ್ಟ ಇತರ ಅನೇಕ ಅಂಶಗಳಂತಹವು ಕೂಡ ಧೂಮಪಾನಕ್ಕಿಂತ ಹೊರತಾಗಿ ಸಿಒಪಿಡಿ ಉಂಟಾಗುವುದಕ್ಕೆ ಕಾರಣವಾಗಬಹುದು ಎಂಬುದನ್ನು ಇತ್ತೀಚೆಗೆ ನಡೆಸಲಾದ ಅಧ್ಯಯನಗಳು ಸಾಬೀತುಪಡಿಸಿವೆ.

Advertisement

ಹೀಗೆ ಲಭ್ಯವಾಗಿರುವ ಈ “ಶೀಘ್ರ’ ಸಿಒಪಿಡಿಯ ಪರಿಕಲ್ಪನೆಯು ಪರಿಶೀಲನೆಯಲ್ಲಿದೆ. ಮನೆಯಲ್ಲಿ ಕಟ್ಟಿಗೆ, ಉರುವಲು ಉರಿಸುವಿಕೆ, ಔದ್ಯೋಗಿಕ ಮತ್ತು ಪಾರಿಸರಿಕ ಮೂಲಗಳಿಂದ ಉತ್ಪಾದನೆಯಾಗಿ ಗಾಳಿಯಲ್ಲಿರುವ ಮಾಲಿನ್ಯಕಾರಕಗಳನ್ನು ಉಸಿರಾಡುವುದು ಧೂಮಪಾನಿಗಳಲ್ಲದವರಲ್ಲಿ ಸಿಒಪಿಡಿ ಉಂಟಾಗುವುದಕ್ಕೆ ಕಾರಣವಾಗಬಲ್ಲ ಅಂಶಗಳಾಗಿ ಪರಿಗಣಿಸಬಹುದಾಗಿದೆ. ದೀರ್ಘ‌ಕಾಲೀನವಾದ ಉಸಿರಾಟಕ್ಕೆ ಕಷ್ಟ, ಕೆಮ್ಮು, ಕಫ‌ ಉತ್ಪಾದನೆಯಂತಹ ಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ) ಇರಬಹುದು ಎಂದು ಶಂಕಿಸಬಹುದಾಗಿದೆ.

ಸಿಒಪಿಡಿ ದಿನಾಚರಣೆಯ ಈ ವರ್ಷದ ಧ್ಯೇಯವಾಕ್ಯವು “ನಿಮ್ಮ ಶ್ವಾಸಕೋಶಗಳ ಕಾರ್ಯವಿಧಾನವನ್ನು ತಿಳಿಯಿರಿ’ ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ) ಎಂಬುದಾಗಿದೆ. ಸಿಒಪಿಡಿ ರೋಗಪತ್ತೆ ಮತ್ತು ನಿರ್ವಹಣೆಯಲ್ಲಿ ಸ್ಪೈರೊಮೆಟ್ರಿಯ ಪ್ರಾಮುಖ್ಯವನ್ನು ಇದು ಎತ್ತಿಹಿಡಿಯುತ್ತದೆ. ಸ್ಪೈರೊಮೆಟ್ರಿ ಎಂಬುದು ಒಂದು ಕೈಯಲ್ಲಿ ಹಿಡಿಯಬಹುದಾದಂತಹ ಉಪಕರಣವಾಗಿದ್ದು, 1846ರಲ್ಲಿ ಜಾನ್‌ ಹಚಿನ್ಸನ್‌ ಎಂಬವರು ಈ ಉಪಕರಣವನ್ನು, “ರೋಗವನ್ನು ನಿಖರವಾಗಿ ಮತ್ತು ಸುಲಭವಾಗಿ ಪತ್ತೆಹಚ್ಚುವ ವಿಧಾನವನ್ನು ಸ್ಥಾಪಿಸುವ ಉದ್ದೇಶ’ದಿಂದ ಆವಿಷ್ಕರಿಸಿದರು. ಸಿಒಪಿಡಿಯನ್ನು ಪತ್ತೆಹಚ್ಚುವುದಕ್ಕೆ ಸ್ಪೈರೊಮೆಟ್ರಿಯು ಉತ್ಕೃಷ್ಟ ದರ್ಜೆಯ ಉಪಕರಣವಾಗಿದ್ದು, ಮೊದಲ ಒಂದು ಸೆಕೆಂಡ್‌ನ‌ಲ್ಲಿ ಬಲವಾದ ಉಸಿರಾಟದ ಮೂಲಕ ಒಳಕ್ಕೆಳೆದುಕೊಳ್ಳುವ ಶೇಕಡಾವಾರು ವಾಯುವಿ ಪ್ರಮಾಣ ಮತ್ತು ಇಂತಹದೇ ದರ್ಜೆಯಲ್ಲಿ ಬ್ರೊಂಕೊಡಯಲೇಟರ್‌ ಗಳ ಪರಿಣಾಮವನ್ನು ಇದು ತೋರಿಸುತ್ತದೆ.

ಆದರೆ ರೋಗಿಗಳ ಆರಂಭಿಕ ತಪಾಸಣೆಯಲ್ಲಿ ಸ್ಪೈರೊಮೆಟ್ರಿಯಯನ್ನು ಗಮನಾರ್ಹವಾಗಿ ಕಡಿಮೆ ಪ್ರಮಾಣದಲ್ಲಿ ಬಳಸುತ್ತಿರುವುದನ್ನು ವಿವಿಧ ದೇಶಗಳಲ್ಲಿ ನಡೆಸಲಾಗಿರುವ ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಇದರಿಂದಾಗಿ ಸಿಒಪಿಡಿ ರೋಗಪತ್ತೆಯಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿಂದ್ದು, ಸಿಒಪಿಡಿ ಆರೈಕೆಯಲ್ಲಿಯೂ ಏರುಪೇರು ಉಂಟಾಗಬಲ್ಲುದಾಗಿದೆ.

Advertisement

ಸಿಒಪಿಡಿಯ ಕಡಿಮೆ ರೋಗಪತ್ತೆ ಮತ್ತು ತಪ್ಪು ರೋಗಪತ್ತೆ ಎರಡೂ ಈ ರೋಗ ಎಷ್ಟು ಪ್ರಮಾಣದಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅಡ್ಡಿಗಳಾಗಿವೆ.

-ಮುಂದಿನ ವಾರಕ್ಕೆ

-ಡಾ| ಉದಯ ಸುರೇಶ್‌ಕುಮಾರ್‌

ಕನ್ಸಲ್ಟಂಟ್‌ ಪಲ್ಮನಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಲ್ಮನಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next