ಹೊಸದಿಲ್ಲಿ:ಹಿಂದುತ್ವ ಎಂಬುದು ಹಿಂದೂ ಧರ್ಮವನ್ನು ದೂಷಿಸುತ್ತಿರುವ ಕಾಯಿಲೆಯಾಗಿದ್ದು, ಅಲ್ಪಸಂಖ್ಯಾಕರನ್ನು ಅದರಲ್ಲೂ ಮುಸ್ಲಿಮರನ್ನು ಹ*ತ್ಯೆ ಮಾಡಲು ಮತ್ತು ಕಿರುಕುಳಕ್ಕೆ ಕಾರಣವಾಗುತ್ತದೆ, ಬಿಜೆಪಿ ತನ್ನ ಮತ ಬ್ಯಾಂಕ್ ಅನ್ನು ಬಲಪಡಿಸಲು ಇದನ್ನು ಬಳಸುತ್ತದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ರವಿವಾರ(ಡಿ8)ಹೇಳಿದ್ದಾರೆ.
ಬಿಜೆಪಿ ಆಕ್ರೋಶ ಹೊರ ಹಾಕಿದ್ದು, ಅವಹೇಳನಕಾರಿ ಹೇಳಿಕೆಗೆ ಇಲ್ತಿಜಾ ಕ್ಷಮೆ ಯಾಚಿಸಬೇಕೆಂದು ಎಂದು ಒತ್ತಾಯಿಸಿದೆ.
ಮುಸ್ಲಿಂ ಹುಡುಗರನ್ನು ಥಳಿಸುತ್ತಿರುವ ಘಟನೆಯ ವೀಡಿಯೊವನ್ನು ಎಕ್ಸ್ ನಲ್ಲಿ ಮರು ಪೋಸ್ಟ್ ಮಾಡಿರುವ ಇಲ್ತಿಜಾ “ರಾಮದೇವರು ನಾಚಿಕೆಯಿಂದ ತಲೆ ತಗ್ಗಿಸಬೇಕು. ಅಪ್ರಾಪ್ತ ಮುಸ್ಲಿಂ ಹುಡುಗರು ತಮ್ಮ ಹೆಸರನ್ನು ಹೇಳಲು ನಿರಾಕರಿಸಿದ ಕಾರಣ ಚಪ್ಪಲಿಗಳಿಂದ ಹೊಡೆಯುವುದನ್ನು ಅಸಹಾಯಕತೆಯಿಂದ ನೋಡಬೇಕಾಗಿದೆ. ಹಿಂದುತ್ವವು ಲಕ್ಷಾಂತರ ಭಾರತೀಯರನ್ನು ಬಾಧಿಸುತ್ತಿರುವ ಮತ್ತು ದೇವರ ಹೆಸರನ್ನು ಕೆಡಿಸುವ ಕಾಯಿಲೆಯಾಗಿದೆ, ”ಎಂದು ಬರೆದಿದ್ದಾರೆ.
ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಲ್ತಿಜಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ದೇಶದಲ್ಲಿ ಇಂತಹ ಪರಿಸ್ಥಿತಿ ಬರಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
“ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ಬಹಳ ವ್ಯತ್ಯಾಸವಿದೆ. ಹಿಂದುತ್ವವು ದ್ವೇಷದ ಭಾವನೆಯಾಗಿದೆ, ಇದು ವಿನಾಯಕ ದಾಮೋದರ್ ಸಾವರ್ಕರ್ 1940 ರ ದಶಕದಲ್ಲಿ ಹರಡಲು ಬಳಸುತ್ತಿದ್ದರು, ಇದು ಹಿಂದೂಗಳ ಪ್ರಾಬಲ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿತ್ತು’ ಎಂದಿದ್ದಾರೆ.
“ಹಿಂದೂ ಧರ್ಮವು ಇಸ್ಲಾಂ ಧರ್ಮದಂತೆ ಜಾತ್ಯತೀತತೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಧರ್ಮವಾಗಿದೆ, ಅದನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಬೇಡಿ. ನಾನು ಏನೇ ಹೇಳಿದರೂ ಅದನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ನಾನು ಹಿಂದುತ್ವವನ್ನು ಟೀಕಿಸಿದ್ದೇನೆ ಮತ್ತು ನನ್ನ ಹೇಳಿಕೆಗೆ ಬದ್ಧಳಾಗಿದ್ದೇನೆ. ಹಿಂದುತ್ವವು ಒಂದು ಕಾಯಿಲೆಯಾಗಿದ್ದು, ನಾವು ಈ ಸ್ಥಿತಿಗೆ ಚಿಕಿತ್ಸೆ ನೀಡಬೇಕಾಗಿದೆ” ಎಂದು ಇಲ್ತಿಜಾ ಪುನರುಚ್ಚರಿಸಿದ್ದಾರೆ.