ಯಲಹಂಕ: ಇಲ್ಲಿನ ಮಹೇಶ್ವರಮ್ಮ ದೇವಿ ಕಗರ ಮಹೋತ್ಸವ, ಮಲ್ಲಿಗೆ ಪರಿಮಳ, ಗೋವಿಂದ ನಾಮ ಸ್ಮರಣೆ, ಜಯಘೋಷಗಳೊಂದಿಗೆ ಸಂಭ್ರಮದಿಂದ ನೆರವೇರಿತು.
ಮಲ್ಲಿಗೆ ಹೂವಿನ ಕರಗವನ್ನು ಹೊತ್ತ ಪೂಜಾರಿ ಮುನಿರಾಜು, ದೇವಾಲಯದ ಗರ್ಭಗುಡಿಯಿಂದ ಬರುವುದನ್ನು ಕಾತರದಿಂದ ಕಾಯುತ್ತಿದ್ದ ಜನ, ಕರಗದ ಸೊಬಗನ್ನು ಕಣ್ತುಂಬಿಕೊಂಡರು. ವೀರಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ, ಖಡ್ಗಗಳನ್ನು ಝಳಪಿಸುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿದರು.
ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ, ವೀರಕುಮಾರರ ಅಲಗು ಸೇವೆ, ಶಂಖನಾದ, ಗುಡಿಯ ಗಂಟೆ ಸದ್ದು, ತಮಟೆ ವಾದ್ಯ ಮತ್ತು ಮಂಗಳ ವಾದ್ಯಘೋಷಗಳು ಕರಗದ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿದವು. ಕರಗ ಸಾಗುವ ಮಾರ್ಗಗಳಲ್ಲಿ ಭಕ್ತರು ಮಲ್ಲಿಗೆ ಹೂಮಳೆಗೈದರು.
ಉತ್ಸವದ ಪ್ರಯುಕ್ತ ದೇವಾಲಯದ ಸುತ್ತಮುತ್ತ ಗ್ರಾಮೀಣ ಜಾತ್ರೆ ವೈಭವ ಕಂಡುಬಂತು. ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿ ಸುತ್ತಮುತ್ತಲ ವಿವಿಧ ತಾಲೂಲು, ಗ್ರಾಮಗಳ ಭಕ್ತರು ಕರಗ ವೀಕ್ಷಿಸಲು ಆಗಮಿಸಿದ್ದರು.
ಹಳೇ ಯಲಹಂಕದ ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮ ದೇವಾಲಯದಿಂದ ಬುಧವಾರ ರಾತ್ರಿ 12 ಗಂಟೆಗೆ ಹೊರಟ ಕರಗ, ವೆಂಕಟಾಲತೋಟ, ಮಾರುತಿನಗರ, ಯಲಹಂಕದ ಗಾಂಧಿಬಜಾರ್ ಸೇರಿ ವಿವಿಧ ಮಾರ್ಗಗಳಲ್ಲಿ ಇಡೀ ರಾತ್ರಿ ಸಂಚರಿಸಿ,
-ಗುರುವಾರ ಬೆಳಗ್ಗೆ 7 ಗಂಟೆಗೆ ಮತ್ತೆ ದೇಗುಲ ಪ್ರವೇಶಿಸುವುದರೊಂದಿಗೆ ಉತ್ಸವ ಪೂರ್ಣಗೊಂಡಿತು. ಕರಗದ ಅಂಗವಾಗಿ ನಗರದ ನಾನಾ ಭಾಗಗಳ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ 25ಕ್ಕೂ ಹೆಚ್ಚು ಪಲ್ಲಕ್ಕಿಗಳ ಉತ್ಸವ ನಡೆಯಿತು.