Advertisement

ಕಟ್ಟಡ ತಂತ್ರಜ್ಞಾನದಲ್ಲಿ  ಮಾಹೆ ವಿ.ವಿ.- ಕೆಇಎಫ್ ಮಹತ್ವದ ಹೆಜ್ಜೆ

11:01 AM Dec 16, 2018 | Harsha Rao |

ಉಡುಪಿ: ಮಣಿಪಾಲದ ಮಾಹೆ ವಿಶ್ವ ವಿದ್ಯಾನಿಲಯ ಮತ್ತು ದುಬಾೖ ಮೂಲದ ಕೆಇಎಫ್ ಹೋಲ್ಡಿಂಗ್ಸ್‌ನ ಫೈಜಲ್‌ ಶಬಾನ ಫೌಂಡೇಶನ್‌ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಎಂಐಟಿ-ಕೆಇಎಫ್ ಆರ್‌ ಆ್ಯಂಡ್‌ ಡಿ ಕೇಂದ್ರದ ಪ್ರಥಮ ಹಂತವನ್ನು ಕೆಇಎಫ್ ಅಧ್ಯಕ್ಷ, ಎಂಐಟಿ ಪ್ರಾಕ್ತನ ವಿದ್ಯಾರ್ಥಿ, ಕೇಂದ್ರದ ಮೂಲಪ್ರೇರಕ ಫೈಜಲ್‌ ಇ. ಕೊಟ್ಟಿಕೊಲನ್‌ ಶನಿವಾರ ಎಂಐಟಿ ಆವರಣದಲ್ಲಿ ಉದ್ಘಾಟಿಸಿದರು.  

Advertisement

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಇದು ಮಹತ್ವಪೂರ್ಣವಾಗಿದೆ. ಸಿವಿಲ್‌ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ವಿಭಾಗದ ವಿದ್ಯಾರ್ಥಿಗಳು ಕ್ಷಿಪ್ರ ಸಮಯದಲ್ಲಿ ಕಟ್ಟಡ ನಿರ್ಮಿಸುವ ತಂತ್ರಜ್ಞಾನದಲ್ಲಿ ಜ್ಞಾನ ಗಳಿಸಬೇಕು. ಇದಕ್ಕಾಗಿ ವಿವಿಧ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರ ತಂಡದಿಂದ ಬೆಂಗಳೂರಿನಲ್ಲಿ ಮಾರ್ಗದರ್ಶನ ನೀಡಲಾಗುವುದು. ಕಟ್ಟಡಗಳ ಉತ್ಪಾದನೆ ಈಗ ಹೊಸ ಉಪಕ್ರಮವಾಗಿದೆ. ಅಮೆರಿಕದ ತಂತ್ರಜ್ಞಾನವನ್ನು
ಭಾರತಕ್ಕೆ ಕೊಂಡೊಯ್ಯುವ ಬದಲು ಭಾರತದ ಜ್ಞಾನವನ್ನು ಅಮೆರಿಕಕ್ಕೆ ಕೊಂಡೊಯ್ಯುವಂತಾ ಗಬೇಕು. ಇಲ್ಲಿನ ಪ್ರಾಧ್ಯಾಪಕರಿಗೆ ತರಬೇತಿ ಕೊಟ್ಟು ಬಳಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂದು ಫೈಜಲ್‌ ಆಶಯ ವ್ಯಕ್ತಪಡಿಸಿದರು.

ಕೆಇಎಫ್ ಸಿಇಒ ರಿಚರ್ಡ್‌ ಪಾಟಲ್‌, ಸ್ಟ್ರಕ್ಚರಲ್‌ ಎಂಜಿನಿಯರ್‌ ಸ್ಪಿರೋಜ್‌ ಅವರು ಕಟ್ಟಡ ನಿರ್ಮಾಣ ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳ ಮಾಹಿತಿ ನೀಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ಟಿ. ವಸಂತಿ ಪೈ, ಬೆಂಗಳೂರು ಎಂಇಎಂಜಿ ಆಡಳಿತ ನಿರ್ದೇಶಕ ಡಾ| ರಂಜನ್‌ ಪೈ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಡಾ| ಎಚ್‌. ವಿನೋದ ಭಟ್‌, ಎಂಐಟಿ ನಿರ್ದೇಶಕ ಡಾ| ಶ್ರೀಕಾಂತ ರಾವ್‌, ಶಾಬಾನ, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಕೇಂದ್ರಕ್ಕೆ 16 ಕೋ.ರೂ. ವೆಚ್ಚ
ಕೇಂದ್ರದ ಒಟ್ಟು ಯೋಜನೆ 16 ಕೋ.ರೂ.ಗಳದ್ದು. ಇದರಲ್ಲಿ ಮಾಹೆ ಮತ್ತು ಕೆಇಎಫ್ ತಲಾ 8 ಕೋ.ರೂ. ವೆಚ್ಚ ಮಾಡುತ್ತಿದೆ. ಈಗ ಮೊದಲ ಹಂತದ ಉದ್ಘಾಟನೆಗೊಂಡಿದೆ. ಎರಡನೇ ಹಂತದಲ್ಲಿ ವಸ್ತುಸಂಗ್ರಹಾಲಯ, ಮೂರನೇ ಹಂತದಲ್ಲಿ ಶೋಕೇಸ್‌ ನಿರ್ಮಾಣಗೊಳ್ಳಲಿದೆ. ಈ ಕಟ್ಟಡದ ಪ್ರತಿಯೊಂದು ಬಿಡಿ ಭಾಗಗಳನ್ನು (ಆರ್‌ಸಿಸಿ ಪಾನೆಲ್‌) ಬೆಂಗಳೂರು ಸಮೀಪದ ಕೃಷ್ಣಗಿರಿಯಲ್ಲಿ ನಿರ್ಮಿಸಿ ಲಾರಿಯಲ್ಲಿ ತಂದು ಕ್ರೇನ್‌ ಮೂಲಕ ಜೋಡಿಸಲಾಗಿದೆ. ಪದವಿ, ಸ್ನಾತಕೋತ್ತರ, ಸಂಶೋಧನ ವಿದ್ಯಾರ್ಥಿಗಳಿಗೆ ಈ ತಂತ್ರಜ್ಞಾನವನ್ನು (ಪ್ರಿಕಾಸ್ಟ್‌ ಟೆಕ್ನಾಲಜಿ) ಪರಿಚಯಿಸಲಾಗುತ್ತಿದೆ. ಇದರ ಬಗ್ಗೆ ಪಠ್ಯಕ್ರಮವನ್ನು ಅಳವಡಿಸುವ ಚಿಂತನೆಯೂ ಇದೆ.  ಕಟ್ಟಡಗಳ ಉತ್ಪಾದನೆಯ ಕಲ್ಪನೆಯನ್ನು ಕೆಇಎಫ್ 2014ರಲ್ಲಿ ಭಾರತದಲ್ಲಿ ಜಾರಿಗೊಳಿಸಿತು. ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿ ಹಲವು ಕಟ್ಟಡಗಳ ವಿನ್ಯಾಸವನ್ನು ರೂಪಿಸಲಾಗುತ್ತಿದೆ. ಕರ್ನಾಟಕದ ಎಲ್ಲ ಇಂದಿರಾ ಕ್ಯಾಂಟೀನ್‌ಗಳೂ ಕೆಇಎಫ್ನಿಂದ ವಿನ್ಯಾಸಗೊಂಡು ರಚನೆಯಾಗಿದೆ. 

ಕಾರ್ಖಾನೆಯ ಪರಿಸರದಲ್ಲಿ ವಿನ್ಯಾಸ ರೂಪಿಸಿ ವಿವಿಧ ಭಾಗಗಳನ್ನು ಉತ್ಪಾದಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ನಾವು ರೊಬೋಟಿಕ್ಸ್‌ಗಳನ್ನು ಪರಿಚಯಿಸಿದ್ದೇವೆ. ನಮ್ಮ ತಂಡ ಮತ್ತು ನಿಮ್ಮ ಪ್ರಾಧ್ಯಾಪಕರು ಜತೆ ಸೇರಿ ಈ ಕಲ್ಪನೆಯನ್ನು ಜಾರಿಗೊಳಿಸಲು ಸಂತೋಷಿಸುತ್ತಿದ್ದೇನೆ. ನಾವು ವಿಮಾನ, ಕಾರುಗಳನ್ನು ಉತ್ಪಾದಿಸುವುದಾದರೆ ಕಟ್ಟಡ ಗಳನ್ನು ಏಕೆ ಉತ್ಪಾದಿಸಬಾರದು ಎಂದು ಪ್ರಶ್ನಿಸಿದರು. 50,000 ಚದರಡಿ ವಿಸ್ತೀರ್ಣದ ಈ ಕಟ್ಟಡವನ್ನು ಕೇವಲ ಎರಡು ತಿಂಗಳಲ್ಲಿ ನಿರ್ಮಿಸಲಾಗಿದೆ. ಕೇಂದ್ರವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಬೇಕಾಗಿದೆ ಎಂದರು.

Advertisement

ಗ್ರೀನ್ಸ್‌ನಲ್ಲಿ ನಡೆದ ಮಾಹೆ ವಿ.ವಿ.ಯ 3ನೇ ಜಾಗತಿಕ ಪ್ರಾಕ್ತನ ವಿದ್ಯಾರ್ಥಿಗಳ ಎರಡು ದಿನಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಫೈಜಲ್‌ ಮತ್ತು ಶಾಬಾನ ಅವರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next