Advertisement

Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ

03:12 PM Dec 27, 2024 | Team Udayavani |

ಉಡುಪಿ: ನಗರಕ್ಕೆ ವಾರಾಹಿ ನೀರು ತರುವ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದರೂ ಈವರೆಗೂ ನೀರು ಬಂದಿಲ್ಲ, ಅಲ್ಲಲ್ಲಿ ರಸ್ತೆ ಅಗೆಯುವುದು ನಿಂತಿಲ್ಲ. ರಸ್ತೆ ಅಗೆದಲ್ಲಿಯೇ ಪದೇ ಪದೇ ಅಗೆಯುತ್ತಿರುವುದರಿಂದ ಟ್ರಾಫಿಕ್‌ ಸಮಸ್ಯೆಯ ಜತೆಗೆ ಪಾದಚಾರಿಗಳಿಗೂ ಸಮಸ್ಯೆ ಉಂಟು ಮಾಡುತ್ತಿದ್ದಾರೆ.

Advertisement

2024ರ ಡಿಸೆಂಬರ್‌ ಅಂತ್ಯದೊಳಗೆ ಉಡುಪಿ ನಗರಕ್ಕೆ ವಾರಾಹಿ ನೀರು ತರುವುದು ಮತ್ತು ದಿನದ 24 ಗಂಟೆಯೂ ನಿರಂತರ ನೀರು ಪೂರೈಕೆಯ ಬಗ್ಗೆ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಗಡುವು ಮೀರುತ್ತಿದ್ದು, ಇದೀಗ 2025ರ ಮಾರ್ಚ್‌ ವೇಳೆಗೆ ಒಂದು ಹಂತದ ಕಾಮಗಾರಿ ಪೂರ್ಣಗೊಂಡು ಅನಂತರ ನೀರು ಪೂರೈಕೆ ಪ್ರಕ್ರಿಯೆ ಶುರುವಾಗಲಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ವರ್ಷದಿಂದ ಮಣಿಪಾಲದ ಸುತ್ತಲಿನ ಪ್ರದೇಶದಲ್ಲಿ ಪೈಪ್‌ಲೈನ್‌ ಅಳವಡಿಸಲು ಅಗೆಯಲಾಗಿತ್ತು. ಅದನ್ನು ಅರ್ಧಂಬರ್ಧ ಮುಚ್ಚಿದ್ದು, ಈಗಲೂ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಮಣಿಪಾಲದ ಉದಯವಾಣಿ ರಸ್ತೆ, ನಗರಸಭೆ ಉಪ ಕಚೇರಿ ಮುಂಭಾಗ ಮೊದಲಾದ ಕಡೆಗಳಲ್ಲಿ ಎರೆಡು ಭಾರಿ ಅಗೆದರೂ ಕಾರ್ಯ ಇನ್ನೂ ಮುಗಿದಿಲ್ಲ. ಇದೀಗ ಪುನಃ ಅಗೆಯುವ ಪ್ರಕ್ರಿಯೆ ವಾರದ ಹಿಂದೆಯೇ ಆರಂಭಿಸಿದ್ದಾರೆ.

ಇನ್ನೂ ಕಡಿಯಾಳಿಯಿಂದ ಕಲ್ಸಂಕ ಮಾರ್ಗವಾಗಿ ಅಮ್ಮುಂಜೆ ಪೆಟ್ರೊಲ್‌ ಪಂಪ್‌ ಎದುರಿನ ರಸ್ತೆ ಹೀಗೆ ಎಲ್ಲೆಡೆ ಅಗೆಯಲಾಗಿದೆ. ಮುಖ್ಯ ರಸ್ತೆಯಲ್ಲಿ ಸಿಟಿ ಬಸ್‌ ನಿಲ್ದಾಣದಿಂದ ಕರಾವಳಿ ಬೈಪಾಸ್‌ವರೆಗೂ ಅಗೆಯಲಾಗುತ್ತಿದೆ. ಈ ಪ್ರಕ್ರಿಯೆ ನಗರದ ವಿವಿಧ ಕಡೆಗಳಲ್ಲಿಯೂ ಮುಂದುವರಿಯಲಿದೆ. ಆದರೆ ಅಗದೆ ಕಡೆಗಳಲ್ಲಿ ಸರಿಯಾಗಿ ತೇಪೆ ಹೆಚ್ಚುವ ಕಾರ್ಯ ಆಗುತ್ತಿಲ್ಲ. ಇಂಟರ್‌ಲಾಕರ್‌ಗಳನ್ನು ತೆಗೆದು ಸರಿಯಾಗಿ ಜೋಡಿಸದಿರುವುದರಿಂದ ನಿತ್ಯವೂ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಎದುರಾಗುತ್ತಿವೆ.

ಸಂಪರ್ಕ ಕಾರ್ಯ
ನಗರದ ಒಳಗೆ ಪೈಪ್‌ಲೈನ್‌ ಮುಖ್ಯ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಇದೀಗ ಓವರ್‌ಹೆಡ್‌ ಟ್ಯಾಂಕ್‌ ಮತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಅಲ್ಲಲ್ಲಿ ಅಗೆಯುವುದು ಅನಿವಾರ್ಯವೂ ಆಗಿದೆ. ಮಾರ್ಚ್‌ ಅಂತ್ಯದೊಳಗೆ ಈ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮೊದಲ ಹಂತದಲ್ಲಿ 20 ಎಂಎಲ್‌ಡಿ
ಈಗಾಗಲೇ ಬಹುತೇಕ ಮನೆ, ಕಟ್ಟಡಗಳಿಗೆ ನೀರಿನ ಹೊಸ ಮೀಟರ್‌ ಅಳವಡಿಕೆ ಮಾಡಲಾಗಿದೆ. ಎಂಜಿಎಂ ಕಾಲೇಜು ಎದುರು, ಕುಂಜಿಬೆಟ್ಟು, ಕಡಿಯಾಳಿ, ಕಲ್ಸಂಕ ಭಾಗದಲ್ಲಿ ಈಗ ಕಾಮಗಾರಿ ನಡೆಯುತ್ತಿದೆ. ಕಿನ್ನಿಮೂಲ್ಕಿಯಲ್ಲೂ ಇದೇ ಕಾಮಗಾರಿ ಮುಂದುವರಿದಿದೆ. ಈ ಮಧ್ಯೆ ಜನವರಿ ಮೊದಲ ವಾರದಲ್ಲಿ ನಗರಕ್ಕೆ ಸುಮಾರು 20 ಎಂಎಲ್‌ಡಿ ವಾರಾಹಿ ನೀರು ಹರಿಸಲು ಎಂಜಿನಿಯರ್‌ಗಳು ಸಜ್ಜಾಗಿದ್ದಾರೆ.

ಕಿರಿಕಿರಿ ತಪ್ಪಿಸಿ
ವಾರಾಹಿ ಕಾಮಗಾರಿ ನಗರದಲ್ಲಿ ವರ್ಷದಿಂದ ಆಗುತ್ತಿದೆ. ಒಂದು ಪ್ರದೇಶದಲ್ಲಿ ಕಾಮಗಾರಿ ಆಗುತ್ತಿದ್ದಂತೆ ಅದನ್ನು ಪೂರ್ಣ ಪ್ರಮಾಣದಲ್ಲಿ ಸರಿಪಡಿಸಿ ಅನಂತರ ಮುಂದುವರಿಸಬೇಕು. ಆದರೆ, ಈ ಕಾಮಗಾರಿಯಲ್ಲಿ ಹಾಗಾಗುತ್ತಿಲ್ಲ. ಅಲ್ಲಲ್ಲಿ ಅಗೆದು ಸ್ಥಳೀಯರಿಗೆ ಸಮಸ್ಯೆ ನೀಡಲಾಗುತ್ತಿದೆ. ಸರಿಯಾಗಿ ಮುಚ್ಚುವುದೂ ಇಲ್ಲ. ರಸ್ತೆ ಮಧ್ಯದಲ್ಲಿ ಹೊಂಡ ಬಿದ್ದಿರುತ್ತದೆ. ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗವನ್ನು ಪೂರ್ಣ ಅಗೆದು ಅರ್ಧಂಬರ್ದ ಮುಚ್ಚುತ್ತಾರೆ. ಮುಖ್ಯರಸ್ತೆ ಹಾಗೂ ಒಳರಸ್ತೆಗಳಲ್ಲೂ ಈ ಸಮಸ್ಯೆಯಿದೆ. ಇದು ಸ್ಥಳೀಯರಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಅಲ್ಲಲ್ಲಿ ಸಂಪರ್ಕ
ವಾರಾಹಿ ಯೋಜನೆಯಡಿ ಜನವರಿ ಮೊದಲ ವಾರದಲ್ಲಿ ನಗರಕ್ಕೆ 20 ಎಂಎಲ್‌ಡಿ ನೀರು ಪೂರೈಕೆ ಮಾಡ ಲಿದ್ದೇವೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವ ಉದ್ದೇಶದಿಂದ ಅಲ್ಲಲ್ಲಿ ಸಂಪರ್ಕ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ.
-ಅರ್ಕೇಶ್‌ ಗೌಡ, ಎಇಇ, ವಾರಾಹಿ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next