ಮಣಿಪಾಲ: ಮಾಹೆ ವಿ.ವಿ.ಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು(ಎಂಐವಿ) ಬಯೋ ಮೆಡಿಕಲ್ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ನೀಡಿದ ಗಣನೀಯ ಸಾಧನೆಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಯಿಂದ(ಐಸಿಎಂಆರ್) ಐಸಿಎಂಆರ್ ಸಹಯೋಗದ ಕೇಂದ್ರ (ಐಸಿಎಂಆರ್-ಸಿಸಿಒಇ) ಎಂದು ಗುರುತಿಸಲಾಗಿದೆ.
ಈ ಪ್ರತಿಷ್ಠಿತ ಪದನಾಮವು ವೈರಾಲಜಿ ಸಂಶೋಧನೆಯಲ್ಲಿ ಎಂಐವಿಯ ನಾಯಕತ್ವವನ್ನು ಶ್ಲಾಘಿಸುತ್ತದೆ ಮತ್ತು ಅದರ ಮುಂದುವರಿದ ರೋಗನಿರ್ಣಯದ ಸಾಮರ್ಥ್ಯಗಳು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತರಶಿಸ್ತೀಯ ಸಹಯೋಗಗಳನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಭಾರತದ ಬಯೋಮೆಡಿಕಲ್ ಸಂಶೋಧನ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರಾಷ್ಟ್ರದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಪರಿಹರಿಸಲು ನಿರ್ಣಾಯಕ ಕೊಡುಗೆಯಾಗಿ ಎಂಐವಿ ಮುಂಚೂಣಿಯಲ್ಲಿ ನಿಲ್ಲಲಿದೆ.
ಐಸಿಎಂಆರ್-ಸಿಸಿಒಇ ಆಗಿ ಗುರುತಿ ಸಿಕೊಳ್ಳುವುದು ವೈರಾಲಜಿ ಕ್ಷೇತ್ರಕ್ಕೆ ವಿಶೇಷ ವಾಗಿ ಹೊಸ ಸಾಂಕ್ರಾಮಿಕ ರೋಗಗಳು, ವೈರಲ್ ರೋಗನಿರ್ಣಯ ಮತ್ತು ಲಸಿಕೆ ಅಭಿವೃದ್ಧಿಯ ಅಧ್ಯಯನದಲ್ಲಿ ಎಂಐವಿಯ ಕೊಡುಗೆಗೆ ಸಾಕ್ಷಿ. ಎಂಐವಿ ನಿರ್ದೇಶಕ ಡಾ| ಚಿರಂಜಯ್ ಮುಖೋಪಾಧ್ಯಾಯ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಂಸ್ಥೆಯು ಸಂಶೋಧನೆ, ರೋಗನಿರ್ಣಯ ಮತ್ತು ಸಹಯೋಗದಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ.
ಮಾಹೆ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್ ಮಾತನಾಡಿ, ಮಣಿಪಾಲದ ವೈರಾಲಜಿ ಸಂಸ್ಥೆಯು ಐಸಿಎಂಆರ್ ಸಹಯೋಗದ ಶ್ರೇಷ್ಠತೆಯ ಕೇಂದ್ರವಾಗಿ ಗುರುತಿಸಲ್ಪಟ್ಟಿರುವುದು ಬಯೋಮೆಡಿಕಲ್ ಸಂಶೋಧನೆ ಮತ್ತು ಪ್ರಗತಿಯಲ್ಲಿನ ನಮ್ಮ ಬದ್ಧತೆಗೆ ಸಾಕ್ಷಿಯನ್ನು ಒತ್ತಿ ಹೇಳುವ ಮಹತ್ವದ ಸಾಧನೆಯಾಗಿದೆ. ಇದು ನಮ್ಮ ಕಠಿನ ಪರಿಶ್ರಮ, ಸಮರ್ಪಣೆ ಮತ್ತು ನಾವೀನ್ಯವನ್ನು ಪ್ರತಿಬಿಂಬಿಸುತ್ತದೆ.
ವೈದ್ಯಕೀಯ ಸಂಶೋಧನೆ ಮತ್ತು ಆರೋಗ್ಯ ಪರಿಹಾರಗಳ ಭವಿಷ್ಯವನ್ನು ರೂಪಿಸುವಲ್ಲಿ ಮಣಿಪಾಲ ಅಕಾಡೆಮಿಯ ನಾಯಕತ್ವವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಆರೋಗ್ಯ ಪ್ರಗತಿಗೆ ಕೊಡುಗೆ ನೀಡಲು ಹೆಮ್ಮೆಪಡುತ್ತೇವೆ. ಸಮಾಜದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುವ ಸಹಯೋಗಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹಾರೈಸಿದರು.