Advertisement

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

08:42 PM Sep 29, 2020 | mahesh |

ಕುಂದಾಪುರ: ತಾಲೂಕಿನ ವಿವಿಧೆಡೆ ಜಾನುವಾರುಗಳು ಲುಂಪಿಸ್ಕಿನ್‌ ಎನ್ನುವ ರೋಗದಿಂದ ಬಳಲುತ್ತಿವೆ. ಒಂದೆಡೆ ಚೀನಾದ ಕೊರೊನಾ ಜನರನ್ನು ಕಾಡುತ್ತಿದ್ದರೆ ಇನ್ನೊಂದೆಡೆ ಆಫ್ರಿಕಾದ ಲುಂಪಿ ಸ್ಕಿನ್‌ ಜಾನುವಾರುಗಳನ್ನು ಕಾಡುತ್ತಿದೆ.

Advertisement

ಹರಡುವ ರೋಗ
ಆದಾಯವಿಲ್ಲದೆ ರೈತರು ಸಂಕಷ್ಟ ಪಡುತ್ತಿರು ವಾಗಲೇ ಜಾನುವಾರು ಗಳಿಗೆ ಕಾಯಿಲೆ ಶರವೇಗದಲ್ಲಿ ಹಬ್ಬುತ್ತಿರುವುದು ಚಿಂತೆಗೀಡು ಮಾಡಿದೆ. ಈ ಸಾಂಕ್ರಾಮಿಕ ರೋಗ ತಾಲೂಕಿನಾದ್ಯಂತ ದನಕರುಗಳಿಗೆ ಬಾಧಿಸುತ್ತಿದೆ. ಇದಕ್ಕೆ ನಿರ್ದಿಷ್ಟ ಔಷಧ ಇಲ್ಲದ ಕಾರಣ ಕಾಯಿಲೆಗೆ ತುತ್ತಾಗುವ ದನ ಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ನೀಡಲಾಗುತ್ತಿದೆ. ರೋಗಗ್ರಸ್ತ ಜಾನುವಾರನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಇಡಬೇಕಾಗುತ್ತದೆ. ದುರ್ಬಲ ಜಾನುವಾರುಗಳಿಗೆ 3-4 ದಿನದಲ್ಲಿ ಜ್ವರ ಬರುವ ಸಾಧ್ಯತೆಯಿದ್ದು ಆಗ ಪಶುವೈದ್ಯರ ಮೂಲಕ ಚಿಕಿತ್ಸೆ ಅನಿವಾರ್ಯ. ಮೈಮೇಲೆ ಕಜ್ಜಿಗಳು ಬೀಳುವ ಕಾರಣ ಅದರ ಶಮನಕ್ಕೆ ಔಷಧ ಹಚ್ಚಬೇಕಾಗುತ್ತದೆ.

ಹೀಗಿದೆ ಲಕ್ಷಣ
ಕಾಯಿಲೆಗೊಳಗಾದ ಜಾನುವಾರುಗಳು ಮೇವು ತಿನ್ನುವುದಿಲ್ಲ, ಚರ್ಮದ ಒಳಭಾಗದಲ್ಲಿ ವರ್ತುಲಾಕಾರದ ಗುಳ್ಳೆ, ಹಾಲಿನ ಇಳುವರಿ ಕಡಿಮೆ, 3-4 ದಿನದಲ್ಲಿ ತೀವ್ರ ಜ್ವರದಿಂದ ಬಳಲುತ್ತವೆ. ಕೆಲವು ಜಾನುವಾರುಗಳಿಗೆ ಕಾಲು ಬಾವು ಬರುತ್ತದೆ. ಮೇಲೆ ಎದ್ದೇಳಲೂ ಆಗುವುದಿಲ್ಲ.

ಶುಚಿಯಾಗಿಡಬೇಕು
ಉಣ್ಣಿ, ಸೊಳ್ಳೆ, ನೊಣಗಳಿಂದಾಗಿ ಈ ಕಾಯಿಲೆ ಹರಡುತ್ತದೆ. ದನದ ಕೊಟ್ಟಿಗೆಯಲ್ಲಿ ಹೊಗೆ ಹಾಕಿ ನೊಣಗಳು ಬಾರದಂತೆ ನೋಡಿಕೊಳ್ಳಬೇಕು. ಹಟ್ಟಿಯನ್ನು ಫಿನಾಯಿಲ್‌ ಹಾಕಿ ಶುಚಿಯಾಗಿಡಬೇಕು. ರೋಗಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು. ಕೃತಕ ಗರ್ಭಧಾರಣೆಗೆ ರೋಗಪೀಡಿತ ಹೋರಿಗಳ ವೀರ್ಯ ಉಪಯೋಗಿಸಬಾರದು. ಅಕಸ್ಮಾತ್‌ ಮರಣ ಹೊಂದಿದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಹೊಂಡದಲ್ಲಿ ವೈಜ್ಞಾನಿಕವಾಗಿ ಹೂಳಬೇಕು.

15 ದಿನ ಅವಶ್ಯ
ಸದ್ಯಕ್ಕೆ ಇದಕ್ಕೆ ಲಸಿಕೆ ಇಲ್ಲ, ನಿರ್ದಿಷ್ಟ ಲಸಿಕೆ ಲಭ್ಯವಾದರೂ ಕಾಯಿಲೆ ಹತೋಟಿಗೆ ಬರಲು 40 ದಿನ ಬೇಕು. ಗುಳ್ಳೆಗಳಾಗಿ ಒಡೆದರೆ ಅದಕ್ಕೆ ಅರಶಿನ, ಬೇವಿನ ಸೊಪ್ಪನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಹಚ್ಚಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಕ್ರಮ ಕೆಲವೆಡೆ ಮಾಡಲಾಗುತ್ತಿದೆ. ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತದೆ. ಗುಳ್ಳೆ ವಾಸಿಯಾಗಲು 15 ದಿನಗಳ ಅವಧಿ ಬೇಕಾಗುತ್ತದೆ.

Advertisement

126 ಪ್ರಕರಣ
ಕೇವಲ 25 ದಿನಗಳಲ್ಲಿ ಕುಂದಾಪುರ ತಾಲೂಕಿನಲ್ಲಿ 126 ಪ್ರಕರಣಗಳು ಪತ್ತೆಯಾಗಿವೆ. ಕೆದೂರು, ಹುಣಸೆಮಕ್ಕಿ, ಹಳ್ಳಾಡಿ, ಕಂಡೂÉರು ಭಾಗದಲ್ಲಿ ಅಧಿಕವಿದ್ದು ವಂಡ್ಸೆ ಸೇರಿದಂತೆ ಇತರೆಡೆಯೂ ಸಣ್ಣ ಪ್ರಮಾಣದಲ್ಲಿ ಇದೆ. ಬಹುತೇಕ ಪ್ರಕರಣಗಳಲ್ಲಿ ಜಾನುವಾರುಗಳು ಗುಣಮುಖವಾಗಿವೆ.

ಸಿಬಂದಿ ಕೊರತೆ
ತಾಲೂಕಿನ ಪಶು ಸಂಗೋಪನಾ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಕುಂದಾಪುರ ತಾಲೂಕಿನಲ್ಲಿ ಒಟ್ಟು 27 ಪಶುಪಾಲನಾ ಸಂಸ್ಥೆಗಳಿದ್ದು, ನಿಯೋಜಿಸಲಾದ 106 ಹುದ್ದೆಗಳಲ್ಲಿ ಕೇವಲ 29 ಹುದ್ದೆಯಷ್ಟೇ ಭರ್ತಿಯಾಗಿದೆ. ಈ ಪೈಕಿ 4 ಪಶು ವೈದ್ಯಾಧಿಕಾರಿ, 7 ಹಿರಿಯ ಪಶು ಪಾಲನಾ ಪರಿವೀಕ್ಷಕರ ಹುದ್ದೆಗಳು ಸೇರಿ 77 ಹುದ್ದೆಗಳು ಖಾಲಿಯಿವೆ. ಬಿ ದರ್ಜೆಯ ಹುದ್ದೆಯಲ್ಲಿ 11 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಕುಂದಾಪುರ ತಾಲೂಕು ಪಶು ಆಸ್ಪತ್ರೆಯಲ್ಲಿ 14 ಹುದ್ದೆಗಳಿದ್ದು, ಇದರಲ್ಲಿ 6 ಮಾತ್ರ ಭರ್ತಿಯಾಗಿದೆ. 8 ಹುದ್ದೆ ಖಾಲಿಯಿದೆ. ಬೈಂದೂರು ಹಾಗು ವಂಡ್ಸೆ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿಯಾಗಿದ್ದು, 3 ಹುದ್ದೆಗಳು ಖಾಲಿಯಿವೆ. ಶಂಕರನಾರಾಯಣದಲ್ಲಿ ವೈದ್ಯಾಧಿಕಾರಿ, ಸಹಾಯಕ ಹುದ್ದೆ ಭರ್ತಿಯಾಗಿದ್ದು, 2 ಹುದ್ದೆ ಖಾಲಿಯಿವೆ.

ಸೂಚನೆ
ಇಲಾಖಾ ಪಶು ವೈದ್ಯಾಧಿಕಾರಿಗಳು ಅಗತ್ಯವಿದ್ದಲ್ಲಿ ರೋಗ ಲಕ್ಷಣವಿರುವ ಜಾನುವಾರು ಮಾಲಕರ ಮನೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸ ಲಾಗಿದೆ. ಅವಶ್ಯಕತೆ ಇದ್ದಲ್ಲಿ ರೋಗ ಪತ್ತೆಗಾಗಿ ಮಾದರಿಗಳನ್ನು ಇಲಾಖಾ ಪಶು ವೈದ್ಯಾಧಿ ಕಾರಿಗಳ ಮೂಲಕ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಬೇಕು. ರೈತರಿಗೆ ಈ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಎಲ್ಲ ಗ್ರಾ ಪಂ.ವ್ಯಾಪ್ತಿಗಳಲ್ಲಿ, ಗ್ರಾಮ ಸಭೆಗಳಲ್ಲಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಗಳಲ್ಲಿ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

25 ದಿನದಲ್ಲಿ 126 ಪ್ರಕರಣ
45 ಕಾಯಿಲೆ ಹತೋಟಿಗೆ ಬರಲು ಬೇಕಾದ ದಿನಗಳು
126 ಕುಂದಾಪುರ ತಾ|ನಲ್ಲಿ ಪತ್ತೆ ಆದ ಪ್ರಕರಣಗಳು
27 ಕುಂದಾಪುರ ತಾ|ನಲ್ಲಿ ಇರುವ ಪಶುಪಾಲನ ಸಂಸ್ಥೆಗಳು

ಗುಣಮುಖವಾಗುತ್ತಿವೆ
ಕುಂದಾಪುರ ತಾಲೂಕಿನಲ್ಲಿ ಕಂಡು ಬಂದ ಪ್ರಕರಣಗಳಿಗೆ ಇಲಾಖಾಧಿಕಾರಿಗಳ ಸೂಚನೆಯಂತೆ ಸೂಕ್ತ ಚಿಕಿತ್ಸೆ, ಸಲಹೆ ನೀಡಲಾಗುತ್ತಿದ್ದು ಬಹುತೇಕ ಪ್ರಕರಣಗಳು ಗುಣಮುಖವಾಗಿವೆ.
– ಡಾ| ಸೂರ್ಯನಾರಾಯಣ ಉಪಾಧ್ಯ, ಸಹಾಯಕ ನಿರ್ದೇಶಕರು, ಪಶುಸಂಗೋಪನ ಇಲಾಖೆ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next