Advertisement

Pachanady: ಜನ, ಜಾನುವಾರು, ಬೆಳೆಗಳ ಅಧ್ಯಯನ; ಉಪಲೋಕಾಯುಕ್ತರ ಸೂಚನೆ

12:47 PM Dec 02, 2024 | Team Udayavani |

ಪಚ್ಚನಾಡಿ: ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕ ವ್ಯಾಪ್ತಿಯ ಸುತ್ತಲಿನ 5-6 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರು, ತರಕಾರಿ ಬೆಳೆಗಳು, ಜಾನುವಾರುಗಳಿಂದ ದೊರೆಯುವ ಹಾಲು ಮೊದಲಾದವುಗಳನ್ನು ಪರೀಕ್ಷೆಗೆ ಒಳಪಡಿಸಿ ವಿಷಕಾರಿ ಅಂಶಗಳಿವೆಯೇ ಎಂದು ಪತ್ತೆ ಹಚ್ಚುವುದು ಅತೀ ಅಗತ್ಯವಾಗಿದೆ. ಜತೆಗೆ ಸಣ್ಣ ಮಕ್ಕಳನ್ನೂ ಸಂಪೂರ್ಣ ಪರೀಕ್ಷೆಗೆ ಒಳಪಡಿಸಿ ಆರೋಗ್ಯ ಮೇಲೆ ಏನಾದರೂ ಪರಿಣಾಮವಿದೆಯೇ ತಿಳಿಯಬೇಕು ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾಯ ಮೂರ್ತಿ ಬಿ. ವೀರಪ್ಪ ಅವರು ಜಿಲ್ಲಾಡಳಿತ, ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ.

Advertisement

ಮೂರು ದಿನಗಳ ಭೇಟಿಗೆ ಮಂಗಳೂ ರಿಗೆ ಆಗಮಿಸಿರುವ ಅವರು ರವಿವಾರ ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಹಳೆ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದ ಅವರು ಅಲ್ಲಿ ಹಸಿ ಕಸ ವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿ, ಘಟಕದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಅಲ್ಲಿಯೇ ಇದ್ದ ಕಾರ್ಮಿಕರೊಂದಿಗೆ ಮಾತನಾಡಿ, ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದರು. ಆರೋಗ್ಯ ತಪಾಸಣೆ, ಊಟದ ವ್ಯವಸ್ಥೆ, ವಾಸ್ತವ್ಯ ಇತ್ಯಾದಿಗಳ ಬಗ್ಗೆ ವಿಚಾರಿಸಿದ ಉಪಲೋಕಾಯುಕ್ತರು, ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಪ್ರಮುಖರಿಗೆ ಸೂಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಬಳಿಕ ತ್ಯಾಜ್ಯವನ್ನು ಉರುವಲು ಉಂಡೆಯಾಗಿ ಮಾಡುವ ಘಟಕದ ಪ್ರಕ್ರಿಯೆಯನ್ನೂ ಪರಿಶೀಲಿಸಿ ಮಾಹಿತಿ ಪಡೆದರು.

ತ್ಯಾಜ್ಯ ಸಂಸ್ಕರಣ ವ್ಯವಸ್ಥೆಗೆ ಶ್ಲಾಘನೆ
ಮನಪಾ ಅಧಿಕಾರಿಗಳಿಗೆ ಕಲಬುರಗಿ ಜಿಲ್ಲೆಯ ಉದಾಹರಣೆ ನೀಡಿದ ಉಪ ಲೋಕಾಯುಕ್ತರು, ಅಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಅವ್ಯವಸ್ಥೆಯ ಗೂಡಾಗಿದ್ದು, ನಾಯಿ, ಹಂದಿ, ಕಾಗೆಗಳು ತ್ಯಾಜ್ಯವನ್ನು ಕಿತ್ತು ತಿನ್ನುತ್ತಿವೆ. ಸ್ಥಳೀಯರಿಗೂ ಕಾಟ ಕೊಡುತ್ತಿವೆ. ಅಲ್ಲಿನ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇಲ್ಲಿಯ ವರೆಗೆ ಭೇಟಿ ನೀಡಿರುವ ಜಿಲ್ಲೆಗಳ ಪೈಕಿ ಮಂಗಳೂರಿನ ವ್ಯವಸ್ಥೆ ಅತ್ಯಂತ ಉತ್ತಮವಾಗಿದೆ ಎಂದರು.

Advertisement

ಎಲ್ಲ ಜಿಲ್ಲೆಗಳಿಗೂ ಭೇಟಿ, ಪರಿಶೀಲನೆ
ಈ ವೇಳೆ ಮಾಧ್ಯದವರ ಜತೆಗೆ ಮಾತನಾಡಿದ, ಉಪಲೋಕಾ ಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಲೋಕಾಯುಕ್ತ ದಿಂದ ತ್ಯಾಜ್ಯ ನಿರ್ವಹಣೆ, ಸರಕಾರಿ ಜಾಗಗಳ ಅತಿಕ್ರಮಣ, ಆಸ್ಪತ್ರೆ, ಜೈಲು, ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ಈಗಾಗಲೇ ಕಲಬುರಗಿ, ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಲೋಕಾಯುಕ್ತ ನ್ಯಾಯಮೂರ್ತಿಗಳು 15 ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಡೆಸಿದ ಸಂಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಲಾಗುವುದು ಎಂದರು.

ವಿದ್ಯುತ್‌ ಉತ್ಪಾದಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ
ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ನಿಟ್ಟಿನಲ್ಲಿಯೂ ಬೆಂಗಳೂರಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಗೈಲ್‌ ಸಂಸ್ಥೆಯವರು ಈ ನಿಟ್ಟನಲ್ಲಿ ಮುಂದೆ ಬಂದಿದ್ದಾರೆ. ಅವರನ್ನು ಇಲ್ಲಿಗೆ ಕರೆಸಿ, ಹಳೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು.

ಗೊಬ್ಬರದಿಂದ ತರಕಾರಿ ಬೆಳೆದು ಪರೀಕ್ಷಿಸಿ
ತಾಜ್ಯದಿಂದ ಗೊಬ್ಬರ ತಯಾರಿಸುವುದು ಉತ್ತಮ ಪರಿಕಲ್ಪನೆ. ಆದರೆ ಅದರಿಂದ ಬೆಳೆಯುವ ತರಕಾರಿಗಳ ಮೇಲೆ ಏನಾದರೂ ಈ ತ್ಯಾಜ್ಯದ ವಿಷಕಾರಿ ಅಂಶಗಳು ಸೇರುತ್ತವೆಯೇ ಎಂದು ಪರೀಕ್ಷಿಸುವ ಅಗತ್ಯವಿದೆ. ಆದ್ದರಿಂದ ಮೊದಲು ನಿಮ್ಮ ಮನೆಯಲ್ಲೇ ಈ ಗೊಬ್ಬರದಿಂದ ಬೆಳೆಸಿ ಪರೀಕ್ಷೆಗೆ ಒಳಪಡಿಸಿ ನೋಡಿ ಎಂದು ಅಪರ ಜಿಲ್ಲಾಧಿಕಾರಿ ಮತ್ತು ಮನಪಾ ಆಯುಕ್ತರಿಗೆ ಉಪಲೋಕಾಯುಕ್ತರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next