Advertisement
ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೆ ತಡ, ಸೋಮವಾರ ಮದ್ಯದಂಗಡಿಗಳಿಗೆ ಧಾವಿಸಿದ ಜನ, ಕೋವಿಡ್ 19, ಲಾಕ್‌ಡೌನ್, ನಿಷೇಧಾಜ್ಞೆ ಎಲ್ಲವನ್ನು ಮರೆತವರಂತೆ ವರ್ತಿಸಿದ್ದು ಕಂಡುಬಂದಿತು. ಕೆಲವೊಂದು ಕಡೆಯಂತೂ ಪೊಲೀಸರೇ ಅಸಹಾಯಕರಂತೆ ನಿಲ್ಲಬೇಕಾಗಿತ್ತು. ಅಷ್ಟೇ ಅಲ್ಲ ಮದ್ಯದ ಅಂಗಡಿಗಳಿಗೂ ರಕ್ಷಣೆ, ಕಾವಲು ಕಾಯುವ ಸ್ಥಿತಿ ಅವರದ್ದಾಗಿತ್ತು. ಮೂರನೇ ಹಂತದ ಲಾಕ್‌ಡೌನ್ ಆರಂಭವಾಗಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ಒಂದಿಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಲಾಕ್‌ಡೌನ್‌ನಲ್ಲಿ ಕೊಂಚ ಸಡಿಲಿಕೆ ನೀಡಲಾಗಿದೆ ಎನ್ನುವ ನೆಪದಲ್ಲೇ ಜನರು ಬೇಕಾಬಿಟ್ಟಿಯಾಗಿ ರಸ್ತೆಗಿಳಿಯುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ, ಕಚೇರಿಗೆ ತೆರಳುವುದು ಇಂತಹ ನೆಪ ಹೇಳಿಕೊಂಡು ದ್ವಿಚಕ್ರ ವಾಹನ ಹಾಗೂ ಕಾರುಗಳ ಸಂಚಾರ ಜೋರಾಗಿತ್ತು. ಬಹುತೇಕ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿದ್ದವು. ಸೋಮವಾರದ ವಾಹನ ದಟ್ಟಣೆ ಸಾಮಾನ್ಯ ದಿನಗಳ ಸಂಚಾರವನ್ನು ನೆನಪಿಸುವಂತಿತ್ತು. ಸಮೂಹ ಸಾರಿಗೆ ಹೊರತುಪಡಿಸಿದರೆ ಮೂರನೇ ಲಾಕ್‌ಡೌನ್ ಮೊದಲ ದಿನ ಅಕ್ಷರಶಃ ನಿಯಮಗಳು ಮೂಲೆಗುಂಪಾದಂತಿತ್ತು.
Related Articles
Advertisement
ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈ ಚೆಕ್‌ಪೋಸ್ಟ್‌ಗಳ ಕಾರ್ಯದಲ್ಲಿ ಸಡಿಲಿಕೆಯಿತ್ತು. ಚೆಕ್‌ಪೋಸ್ಟ್ ಮುಂಭಾಗದಲ್ಲಿ ಬ್ಯಾರಿಕೇಡ್ ಮೂಲಕ ಒಳ ಮತ್ತು ಹೊರ ಹೋಗುವ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ನಗರದಲ್ಲಿ ಆರು ಸೋಂಕಿತ ಪ್ರಕರಣಗಳು ಇರುವ ಕಾರಣದಿಂದ ಕನಿಷ್ಠ ಚೆಕ್‌ಪೋಸ್ಟ್ ಗಳಲ್ಲಾದರೂ ಬೇಕಾಬಿಟ್ಟಿ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು ಎನ್ನುವ ಮಾತುಗಳು ಕೇಳಿ ಬಂದವು.
ಆರಂಭವಾದ ಸಿಗ್ನಲ್: ಸುಮಾರು ನಲವತ್ತು ದಿನಗಳಿಂದ ಸ್ಥಗಿತಗೊಂಡಿದ್ದ ಟ್ರಾಫಿಕ್ ಸಿಗ್ನಲ್ ಗಳು ಇಂದು ಪುನರಾರಂಭವಾಗಿದ್ದವು. ಚೆಕ್‌ಪೋಸ್ಟ್ ಗಳಲ್ಲಿದ್ದು ವಿನಾಕಾರಣ ಓಡಾಡುತ್ತಿರುವ ನಿಗಾ ವಹಿಸುತ್ತಿದ್ದ ಸಂಚಾರಿ ಪೊಲೀಸರು ವೃತ್ತ ಹಾಗೂ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜನರನ್ನು ನಿಯಂತ್ರಿಸಲು ಪರದಾಡುತ್ತಿದ್ದ ಪೊಲೀಸರು, ವಾಹನಗಳ ದಟ್ಟಣೆ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು.
ಬೇಕಾಬಿಟ್ಟಿ ಓಡಾಟಕ್ಕೆ ಬೇಕಿದೆ ಬ್ರೇಕ್ : ವಾಣಿಜ್ಯ ನಗರದಲ್ಲಿ ಇನ್ನೂ ನಾಲ್ಕು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪಿ-589 ಸೋಂಕಿತ ನಗರದ ವಿವಿಧ ಭಾಗಗಳಲ್ಲಿ ಸಂಚಾರ ಮಾಡಿರುವ ಟ್ರಾವಲ್ ಹಿಸ್ಟರಿ, ಅವರೊಂದಿಗಿನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಸಂಖ್ಯೆ ಬಹು ದೊಡ್ಡದಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಲಾಕ್‌ಡೌನ್ ನಿಯಮಗಳು ಬಿಗಿಗೊಳ್ಳಬೇಕು. ಸರಕಾರದ ಮಾರ್ಗಸೂಚಿಯ ಪ್ರಕಾರ ಅವರ ಸಂಚಾರದ ತಪಾಸಣೆ ನಡೆಯಬೇಕು. ಇರುವ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು. ಲಾಕ್‌ಡೌನ್ ಸಡಿಲಿಕೆಯಿಂದ ಪೊಲೀಸರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಹೀಗಾಗಿ ಸೋಂಕಿತರ ಪ್ರಮಾಣ ಕಡಿಮೆಯಾಗುವವರೆಗೂ ಲಾಕ್‌ಡೌನ್ ನಿಮಯಗಳನ್ನು ಬಿಗಿಗೊಳಿಸಿ ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್ ಹಾಕಬೇಕಿದೆ. ಹಸಿರುವ ವಲಯಕ್ಕೆ ಹೋಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ವಿನಃ ರೆಡ್‌ಝೋನ್‌ತ್ತ ಹೋಗದಂತೆ ಎಚ್ಚರವಹಿಸಬೇಕು ಎನ್ನುವುದು ಜನರ ಒತ್ತಾಯ.
–ಹೇಮರಡ್ಡಿ ಸೈದಾಪುರ