Advertisement

Katpadi ಬಳಿ ಬಾಯಿ ತೆರೆದ ಹೆದ್ದಾರಿ; ಅಪಘಾತಕ್ಕೆ ದಾರಿ; ಜನರ ಆರೋಪ

03:20 PM Dec 06, 2024 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಲ್ಲಿ ಕೆಲವೇ ತಿಂಗಳ ಹಿಂದೆ ಸಂಚಾರ ನಿರ್ಬಂಧಿಸಿ ನಿರ್ಮಿಸಿದ ಹೊಸ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Advertisement

ಕಟಪಾಡಿಯಿಂದ ಉಡುಪಿಯತ್ತ ತೆರಳುವ (ಪಶ್ಚಿಮ ಪಾರ್ಶ್ವ) ರಾ.ಹೆ.ಯಲ್ಲಿ ಡಾಮರು ಕಿತ್ತು ಬಂದು ಅಪಾಯಕಾರಿ ರೀತಿಯಲ್ಲಿ ಗುಂಡಿ ಕಂಡು ಬರುತ್ತಿದ್ದು, ದ್ವಿಚಕ್ರ, ರಿಕ್ಷಾ ಸಹಿತ ಲಘು ವಾಹನಗಳ ಸಂಚಾರಕ್ಕೆ ಇದರಿಂದ ಸಮಸ್ಯೆಯಾಗಿದೆ. ಕೆಲವು ದಿನಗಳಿಂದ ಈ ಸಮಸ್ಯೆ ಎದುರಾಗಿದ್ದರೂ ಹೆದ್ದಾರಿ ಇಲಾಖೆ ಅದರ ಬಗ್ಗೆ ಗಮನ ಹರಿಸಿಲ್ಲ.

ಈಗಾಗಲೇ ಕೆಲ ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್‌ ಘನ ವಾಹನಗಳು ಬಾರದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯ ಸಂಭವಿಸದೆ ಪಾರಾಗಿದ್ದಾರೆ. ಕಟಪಾಡಿ ಜಂಕ್ಷನ್‌ನಿಂದ ಪೊಲೀಸರು ವಾಹನಗಳನ್ನು ಸರತಿ ಸಾಲಿನಲ್ಲಿ ಬಿಟ್ಟ ಕೂಡಲೇ ಬಹಳಷ್ಟು ವಾಹನ ದಟ್ಟಣೆ, ಅತೀ ವೇಗದಿಂದ ವಾಹನ ಸಂಚರಿಸುವ ಇಳಿಜಾರಿನಿಂದ ಕೂಡಿದ ಪ್ರದೇಶ ಇದಾಗಿದೆ. ದ್ವಿಚಕ್ರ, ರಿಕ್ಷಾ ಸಹಿತ ಲಘು ವಾಹನಗಳ ಸವಾರರಿಗೆ ಒಮ್ಮಿಂದೊಮ್ಮೆಲೇ ಇಷ್ಟೊಂದು ದೊಡ್ಡ ಗುಂಡಿ ಗೋಚರಿಸುವ ಸಂದರ್ಭ ಹೊಂಡ ತಪ್ಪಿಸುವ ಭರದಲ್ಲಿ ಹಠಾತ್ತನೇ ಬ್ರೇಕ್‌ ಹಾಕಿ ಎಡಕ್ಕೋ, ಬಲಕ್ಕೋ ತಿರುಗಿಸಿದಾಗ ಮತ್ತಷ್ಟು ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಜನರು.

ಅವ್ಯವಸ್ಥೆ ಸರಿಪಡಿಸಲಿ
ಕೆಲವೇ ತಿಂಗಳ ಹಿಂದೆ ನಡೆದ ಹೆದ್ದಾರಿ ಕಾಮಗಾರಿ ಇಷ್ಟು ಬೇಗನೆ ಹಾಳಾಗಿದೆ. ವಾಹನ ಸಂಚಾರಿಗಳ ಬದುಕಿನ ಕಡೆಗೂ ಗಮನ ಹರಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತು ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಲಿ.
-ಅಶೋಕ್‌ ಶೆಟ್ಟಿ, ಮೂಡಬೆಟ್ಟು, ಕಟಪಾಡಿ

ಪ್ರಾಣಾತಂಕ
ಕಟಪಾಡಿ ಜಂಕ್ಷನ್‌ನಿಂದ ಬಿಟ್ಟ ಕೂಡಲೇ ವೇಗವಾಗಿ ಉಡುಪಿಯತ್ತ ವಾಹನ ದಟ್ಟಣೆಯಲ್ಲಿ ಸಾಗುವಾಗ ಸಣ್ಣ ವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ಪ್ರಾಣಾತಂಕವನ್ನು ಮೈಮೇಲೆ ಎಳೆದಂತಾಗುತ್ತಿದೆ.
-ಜಯಕರ ಕುಂದರ್‌, ರಿಕ್ಷಾ ಚಾಲಕರು, ಪೇಟೆಬೆಟ್ಟು ಕಟಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next