ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 400 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಹೊರಟಿರುವ ರಾಷ್ಟ್ರೀಯ ಬಿಜೆಪಿಗೆ ಕರ್ನಾಟಕದಿಂದಲೂ ದೊಡ್ಡ ಕೊಡುಗೆ ನೀಡಬೇಕೆಂಬ ಅಭಿಪ್ರಾಯಗಳು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ವ್ಯಕ್ತವಾಗಿದೆ.
ಎಲ್ಲ ರಾಜ್ಯಗಳೂ ಗುರಿ ಇಟ್ಟುಕೊಂಡು ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಪ್ರೇರಣಾ ಭಾಷಣ ಮಾಡಿದ್ದು, ರಾಜ್ಯದಲ್ಲಿ ಹೆಚ್ಚಿನ ಪರಿಶ್ರಮ ಹಾಕುವ ಮೂಲಕ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಸಂಕಲ್ಪ ತೊಟ್ಟಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲ ಸ್ಥಾನಗಳನ್ನೂ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದರೂ ಪಕ್ಷದ ಸಮೀಕ್ಷೆಗಳು 20 ಸ್ಥಾನಗಳಿಗೆ ಸೀಮಿತವಾಗಿ ನಿಲ್ಲುತ್ತಿದೆ. ಕ್ಲಿಷ್ಟ ಕ್ಷೇತ್ರಗಳ ಪಟ್ಟಿ ಮಾಡಿ, ಯಾವ ರೀತಿಯ ರಣತಂತ್ರ ರೂಪಿಸಬೇಕೆಂಬ ಮಾರ್ಗದರ್ಶನ ದೊರೆತಿದೆ. ಮುಂದಿನ 100 ದಿನಗಳು ಅತ್ಯಂತ ಮಹತ್ವದ್ದು ಎಂಬ ಪಿಎಂ ಮೋದಿ ಮಾತನ್ನು ಟಾಸ್ಕ್ ರೀತಿಯಲ್ಲಿ ತೆಗೆದುಕೊಳ್ಳಬೇಕೆಂಬ ಚಿಂತನ-ಮಂಥನ ನಡೆದಿದೆ. ಇದಕ್ಕೆ ಪೂರಕವಾಗಿ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ 520ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಪ್ರಮುಖರು, ಎರಡು ದಿನಗಳ ಕಾರ್ಯಕಾರಿಣಿಯಿಂದ ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಸ್ಫೂರ್ತಿ ದೊರೆತಿದ್ದು, ರಾಜ್ಯದಲ್ಲಿ ಅಷ್ಟೂ ಸ್ಥಾನಗಳನ್ನು ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಪಥ ಮಾಡಿದ್ದಾರೆ.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಇದು ನನ್ನ ರಾಜಕೀಯ ಜೀವನದಲ್ಲಿ ಕಂಡ ಐತಿಹಾಸಿಕ ಅಧಿವೇಶನ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಎಲ್ಲ ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೆ ಪೂರ್ಣ ಸಮಯ ಕೊಡಬೇಕು, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಸ್ಫೂರ್ತಿ, ಪ್ರೇರಣೆ ಕೊಟ್ಟಿವೆ. 10 ವರ್ಷದಲ್ಲಿ ಸಂಘಟನೆ ಯಾವ ರೀತಿ ಅಭಿವೃದ್ಧಿ ಆಯಿತು, ಚುನಾವಣೆಗಳಲ್ಲಿ ಬಿಜೆಪಿ ಗೆದ್ದುಬಂತು, ಜನಸಾಮಾನ್ಯರು, ರೈತರು, ಮಹಿಳೆಯರು, ಯುವಕರಿಗೆ ಏನೇನು ಕೆಲಸ ಮಾಡಿದೆ ಎಂಬುದನ್ನು ಸಾಮಾನ್ಯ ಕಾರ್ಯಕರ್ತರ ಹೃದಯ ಮುಟ್ಟುವಂತೆ ಹೇಳಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಮೈತ್ರಿ ಗೆಲ್ಲಲು ಆಶಾವಾದ ವ್ಯಕ್ತವಾಗಿದೆ. 28 ಸ್ಥಾನ ಗೆದ್ದು ಬಿಜೆಪಿಗೆ ದೊಡ್ಡ ಕೊಡುಗೆ ಕೊಡುತ್ತೇವೆ ಎಂದು ವಿಶ್ವಾಸದಿಂದ ಹೇಳಿದರು.
ಸಂಸದ ಡಿ.ಕೆ.ಸುರೇಶ್ ಮಾತಿಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಖಂಡನೆ
ಪ್ರತ್ಯೇಕ ರಾಷ್ಟ್ರದ ಧ್ವನಿ ಎತ್ತಿದ್ದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪರೋಕ್ಷ ವಾಗ್ಧಾಳಿ ನಡೆದಿದ್ದು, ಅಲ್ಲಲ್ಲಿ ಕೆಲವರು ದೇಶ ಒಡೆಯುವ ಮಾತುಗಳನ್ನಾಡುತ್ತಿದ್ದಾರೆ. ಅಂಥವರ ಧ್ವನಿ ಅಡಗಿಸಬೇಕು. ಜನರನ್ನು ಜಾಗೃತರನ್ನಾಗಿ ಮಾಡಬೇಕೆಂಬ ಚರ್ಚೆ ಆಗಿದ್ದು, ಕೇಂದ್ರ ಸರಕಾರ ಕಳೆದ 10 ವರ್ಷಗಳಲ್ಲಿ ಪ್ರತಿ ರಾಜ್ಯಗಳಿಗೆ ಏನೇನು ಕೊಟ್ಟಿದೆ ಎಂಬುದನ್ನು ಹಿಂದಿನ ಯುಪಿಎ ಸರಕಾರದೊಂದಿಗೆ ತುಲನೆ ಮಾಡಿ ಅರಿವು ಮೂಡಿಸಬೇಕು ಎಂಬ ಧ್ವನಿ ವ್ಯಕ್ತವಾಯಿತು.
ಮನೆ ಖಾಲಿ ಮಾಡುತ್ತಿದ್ದಾರೆ
ಕಾಂಗ್ರೆಸಿನವರು ಸೋಲಿನ ಭೀತಿಯಲ್ಲಿದ್ದಾರೆ. ಅವರು ಐಎನ್‌ಡಿಐಎ ಮಿತ್ರರಲ್ಲ. ಐ ಮಾತ್ರ ಉಳಿದಿದೆ. ಇಂದಿರಾ ಕಾಂಗ್ರೆಸ್ ಬಿಟ್ಟು ಉಳಿದವರೆಲ್ಲರೂ ಮನೆ ಖಾಲಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಜೋಡೋ ಎಂದು ಹೊರಹೋಗುತ್ತಿದ್ದಂತೆ ಕಾಂಗ್ರೆಸ್ ಛೋಡೋ ಎಂದು ಅನೇಕರು ಪಕ್ಷ ಬಿಡುತ್ತಿದ್ದಾರೆ. ಕಾಂಗ್ರೆಸಿಗೆ ಈ ದೇಶದಲ್ಲಿ ನೆಲೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.
– ಆರ್.ಅಶೋಕ, ವಿಧಾನಸಭೆ ವಿಪಕ್ಷ ನಾಯಕ
ಅಹಿಂದ ಬೆಂಬಲ ಮೋದಿಗಿದೆ
ಮೋದಿ ಅವರು ಕಾಂಗ್ರೆಸ್ ಕೊಡದೇ ಇರುವಷ್ಟು ಅನುಕೂಲ ಕೊಟ್ಟಿದ್ದಾರೆ. ಈಗ ಅಹಿಂದ ಬೆಂಬಲ ಮೋದಿಗಿದೆ. ಮೋಸ ಅರ್ಥ ಆಗಿದೆ. ಅಲ್ಪಸಂಖ್ಯಾಕರಿಗೂ ಸರಿಯಾದ ಯೋಚನೆ ಮಾಡುವ ಶಕ್ತಿ ಬಂದಿದೆ. ಅವರೂ ಬೆಂಬಲಿಸುತ್ತಾರೆ. ರಾಮಮಂದಿರ ನಮ್ಮ ಬದ್ಧತೆ ಆಗಿತ್ತು. ಅದನ್ನು ಈಡೇರಿಸಿದ್ದೇವೆ. ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸಿಗೆ ಈ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ.
– ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ