ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ (BJP) ಶನಿವಾರ (ಜನವರಿ 04) 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ದೆಹಲಿಯಲ್ಲಿ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರತೀಯ ಜನತಾ ಪಕ್ಷ ಮಾಜಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರನ್ನು ಕಣಕ್ಕಿಳಿಸಿದೆ.
“ಬಿಜೆಪಿ ಪಕ್ಷದ ಹೈಕಮಾಂಡ್ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷ ನನ್ನ ಮೇಲೆ ವಿಶ್ವಾಸ ಇರಿಸಿ ಟಿಕೆಟ್ ನೀಡಿದೆ. ನಾನು ಪಕ್ಷದ ನಿರೀಕ್ಷೆಯನ್ನು ಹುಸಿಗೊಳಿಸಲಾರೆ. ದೆಹಲಿ ಕೋವಿಡ್ 19 ಸಮಸ್ಯೆ ಎದುರಿಸಿದಾಗ, ಆಕ್ಸಿಜನ್ ಅಗತ್ಯವಿದ್ದಾಗ ಅರವಿಂದ್ ಕೇಜ್ರಿವಾಲ್ ಜೀ ಅವರು ಪ್ರತಿಯೊಬ್ಬರಿಗೂ ಉಚಿತ ಕೊಡುಗೆ ನೀಡುವುದರಲ್ಲೇ ಕಾಲ ಕಳೆದಿದ್ದರು. ದೆಹಲಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ. ಯಮುನಾ ನದಿ ಸ್ವಚ್ಚತೆ, ವಾಯು ಮಾಲಿನ್ಯಕ್ಕೆ ಕಡಿವಾಣ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕಾಗಿದೆ. ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೋ, ಆಗ ಈ ಎಲ್ಲಾ ಕೆಲಸಗಳನ್ನು ಮಾಡುವುದಾಗಿ ವರ್ಮಾ ಅವರು” ಭರವಸೆ ನೀಡಿದ್ದಾರೆ.
ದೆಹಲಿಯ ಮಾಜಿ ಸಾರಿಗೆ ಸಚಿವ, ಕೇಜ್ರಿವಾಲ್ ಅವರ ಆಪ್ತ ಕೈಲಾಶ್ ಗೆಹ್ಲೋಟ್ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಮುಂಬರುವ ಚುನಾವಣೆಯಲ್ಲಿ ಗೆಹ್ಲೋಟ್ ಬಿಜ್ವಾಸನ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ದಕ್ಷಿಣ ದೆಹಲಿಯ ಹಾಲಿ ಸಂಸದ ರಮೇಶ್ ಬಿಧುರಿ ಅವರು ದೆಹಲಿ ಹಾಲಿ ಮುಖ್ಯಮಂತ್ರಿ ಅತಿಶಿ ಅವರ ವಿರುದ್ಧ ಕಲ್ಕಾಜೀ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಿಧುರಿಗೆ ಟಿಕೆಟ್ ನೀಡಿರಲಿಲ್ಲವಾಗಿತ್ತು. ಕಲ್ಕಾಜೀ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲ್ಕಾ ಲಾಂಬಾ ಅವರನ್ನು ಕಣಕ್ಕಿಳಿಸಿದೆ.
ರಮೇಶ್ ಬಿಧುರಿ ಅವರು ಕಳೆದ 10 ವರ್ಷಗಳಿಂದ ಸಂಸದರಾಗಿದ್ದಾರೆ. ಆದರೆ ಪಕ್ಷ ಅವರ ಕಾರ್ಯಕ್ಷಮತೆ ಬಗ್ಗೆ ವಿಶ್ವಾಸವಿಲ್ಲದೇ ಲೋಕಸಭಾ ಚುನಾವಣೆ ವೇಳೆ ಟಿಕೆಟ್ ನೀಡಿರಲಿಲ್ಲ. ಈಗ ಕಲ್ಕಾಜೀ ಮತದಾರರು ಅವರ ಕೆಲಸದ ಬಗ್ಗೆ ಹೇಗೆ ವಿಶ್ವಾಸ ಹೊಂದಲು ಸಾಧ್ಯ ಎಂದು ಸಿಎಂ ಅತಿಶಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
2003ರಿಂದ 2013ರವರೆಗೆ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಸಂಪುಟದಲ್ಲಿ ಸಚಿವರಾಗಿದ್ದ ಅರವಿಂದ್ ಸಿಂಗ್ ಲವ್ಲಿ ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲವ್ಲಿ ಪೂರ್ವ ದೆಹಲಿಯ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
2015ರಿಂದ ಆಮ್ ಆದ್ಮಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಆದರೆ 201ರಿಂದ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಒಂದೇ ಒಂದು ಸ್ಥಾನದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ ಅವರು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಬಿಜೆಪಿ ಮತ್ತು ಆಪ್ ನಡುವಿನ ಜಿದ್ದಾಜಿದ್ದಿನ ಕದನವಾಗಲಿದೆ. ಕಾಂಗ್ರೆಸ್ ದೆಹಲಿಯಲ್ಲಿ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಆದರೆ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲವಾಗಿತ್ತು.
ಆಪ್ ಇಂಡಿಯಾ (INDIA) ಬ್ಲಾಕ್ ನ ಮೈತ್ರಿ ಪಕ್ಷವಾಗಿ ಗುರುತಿಸಿಕೊಂಡಿದೆ. ಆದರೆ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಪ್ ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿವೆ. ಕಳೆದ ವರ್ಷ ನಡೆದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಆಪ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.