Advertisement

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

02:45 PM Dec 18, 2024 | ನಾಗೇಂದ್ರ ತ್ರಾಸಿ |

ಆರ್ಥಿಕ ವೆಚ್ಚ ಕಡಿತಗೊಳಿಸುವ ಮತ್ತು ಪದೇ, ಪದೇ ಎದುರಾಗುವ ಚುನಾವಣೆಯಿಂದ ಸರಕಾರದ ನೀತಿ-ನಿಯಮಗಳಿಗೆ ಅಡ್ಡಿಯಾಗುವ ಆತಂಕ ನಿವಾರಿಸುವ ನಿಟ್ಟಿನಲ್ಲಿ ದೇಶದಲ್ಲಿ ಒಂದು ದೇಶ, ಒಂದು ಚುನಾವಣೆ ಯೋಜನೆ ಕಾರ್ಯಗತಗೊಳಿಸಬೇಕೆಂಬ ದೀರ್ಘಕಾಲದ ಚಿಂತನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ವಿಧೇಯಕ 2024 ಹಾಗೂ ಸಾಮಾನ್ಯ ವಿಧೇಯಕವನ್ನು ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಲೋಕಸಭೆಯಲ್ಲಿ ಮಂಡಿಸಿದ್ದರು.

Advertisement

ಎರಡನೇ ಮಸೂದೆಯು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ ಹಾಗೂ ರಾಷ್ಟ್ರರಾಜಧಾನಿ ದೆಹಲಿ ಆಡಳಿತದ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿತ್ತು. ಈ ಬದಲಾವಣೆಯ ಮುಖ್ಯ ಗುರಿ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲೇ ಕೇಂದ್ರಾಡಳಿತ, ದೆಹಲಿಯಲ್ಲೂ ಚುನಾವಣೆ ನಡೆಸುವ ಉದ್ದೇಶ ಹೊಂದಿದೆ.

ಒಂದು ದೇಶ, ಒಂದು ಚುನಾವಣೆ ಜಾರಿಗೊಳಿಸುವುದಾಗಿ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಅದರಂತೆ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮತ್ತೊಂದೆಡೆ ವಿಧೇಯಕ ಹಾಗೂ ಇದರ ಅನುಷ್ಠಾನದ ಕುರಿತು ಜಂಟಿ ಸಂಸದೀಯ ಸಮಿತಿ (JPC) ರಚಿಸಬೇಕಾಗಿದೆ. ಒಂದು ದೇಶ, ಒಂದು ಚುನಾವಣೆ ಜಾರಿ ಕುರಿತು ಜೆಪಿಸಿ ಹೊಣೆಗಾರಿಕೆ ಏನು, ಯಾರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬಿತ್ಯಾದಿ ವಿಚಾರಗಳ ವಿಮರ್ಶೆ ಇಲ್ಲಿದೆ…

31 ಸದಸ್ಯರ ಜೆಪಿಸಿ :

Advertisement

ಲೋಕಸಭೆ ಹಾಗೂ ರಾಜ್ಯಸಭೆ ಸೇರಿದಂತೆ ಗರಿಷ್ಠ 31 ಸದಸ್ಯರನ್ನೊಳಗೊಂಡಂತೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗುತ್ತದೆ. ಇದರಲ್ಲಿ ಲೋಕಸಭೆಯ 21 ಮಂದಿ ಸದಸ್ಯರು ಇರಲಿದ್ದಾರೆ. ಈ ಸಮಿತಿ ಪ್ರಸ್ತಾವಿತ ತಿದ್ದುಪಡಿಯನ್ನು ಪರಿಶೀಲಿಸಲಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು 48 ಗಂಟೆಯೊಳಗೆ ಜೆಪಿಸಿ ಸದಸ್ಯರ ಹೆಸರನ್ನು ಅಂತಿಮಗೊಳಿಸಬೇಕಿದೆ.‌ ಶುಕ್ರವಾರ ಚಳಿಗಾಲದ ಅಧಿವೇಶನ ಮುಗಿಯಲಿದ್ದು, ಈ ಸಮಯದೊಳಗೆ ಜೆಪಿಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಬೇಕಾಗಿದೆ. ಒಂದು ವೇಳೆ ಈ ಅಧಿವೇಶನದೊಳಗೆ ಜೆಪಿಸಿ ರಚನೆ ಆಗದಿದ್ದರೆ, ಒಂದು ದೇಶ, ಒಂದು ಚುನಾವಣೆ ಮಸೂದೆ ರದ್ದಾಗಲಿದ್ದು, ಮುಂದಿನ ಅಧಿವೇಶನದಲ್ಲಿ ಮರು ಮಂಡನೆಯಾಗಬೇಕು.

ಸದಸ್ಯರ ಆಯ್ಕೆಗಾಗಿ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ. ಆದರೆ ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವೇ ಅತೀ ದೊಡ್ಡ ಪಕ್ಷವಾಗಿರುವುದರಿಂದ ಜೆಪಿಸಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ಸಿಗುವ ನಿರೀಕ್ಷೆ ಇದೆ.

ಅಧ್ಯಯನಕ್ಕಾಗಿ ಜೆಪಿಸಿಗೆ 90 ದಿನಗಳ ಕಾಲಾವಕಾಶ:

ಜಂಟಿ ಸಂಸದೀಯ ಸಮಿತಿ (JPC) ರಚನೆಯಾದ ನಂತರ ವಿವರವಾದ ವರದಿಯನ್ನು ಒಪ್ಪಿಸಲು 90 ದಿನಗಳ ಕಾಲಾವಧಿ ನಿಗದಿಪಡಿಸಲಾಗುತ್ತದೆ. ಒಂದು ವೇಳೆ ಅಗತ್ಯವಿದ್ದರೆ ಕಾಲಾವಧಿಯನ್ನು ವಿಸ್ತರಿಸಬಹುದಾಗಿದೆ.

ಈ ಅವಧಿಯಲ್ಲಿ ಜೆಪಿಸಿ, ಸಮಿತಿಯಲ್ಲಿದ್ದ ಸದಸ್ಯರನ್ನು ಹೊರತುಪಡಿಸಿ ಸಂಸದರು, ಸಂವಿಧಾನ ತಜ್ಞರು, ನಿವೃತ್ತ ನ್ಯಾಯಾಧೀಶರು, ವಕೀಲರು, ಚುನಾವಣಾ ಆಯೋಗದ ನಿವೃತ್ತ ಸದಸ್ಯರು, ರಾಜ್ಯ ವಿಧಾನಸಭೆಯ ಸ್ಪೀಕರ್‌, ಸಾರ್ವಜನಿಕರು ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ ಸಲಹೆ-ಸೂಚನೆಯನ್ನು ಪಡೆಯಲಿದೆ.

ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಕ್ರೋಢಿಕರಿಸಿದ ನಂತರ ಸಮಿತಿ ತನ್ನ ಶಿಫಾರಸ್ಸನ್ನು ಅಂತಿಮಗೊಳಿಸುವ ಮೊದಲು ಪ್ರಸ್ತಾವಿತ ತಿದ್ದುಪಡಿಯನ್ನು ಹಂತ, ಹಂತವಾಗಿ ಪರಿಶೀಲಿಸಿ, ಅಧ್ಯಯನ ನಡೆಸಲಿದೆ.

ಒಂದು ದೇಶ, ಒಂದು ಚುನಾವಣೆ ಜಾರಿಯಾದಲ್ಲಿ, ದೇಶಾದ್ಯಂತ ಏಕಕಾಲದಲ್ಲಿ ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಮೂಲಕ ದೀರ್ಘ ಚುನಾವಣ ಪ್ರಕ್ರಿಯೆಗೆ ಕಡಿವಾಣ ಬೀಳಲಿದೆ. ಪ್ರಸ್ತುತ 2024ರಲ್ಲಿ ಲೋಕಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗೆ ಚುನಾವಣೆ ನಡೆದಿತ್ತು. 2023ರಲ್ಲಿ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆದಿದ್ದು, 2025ರಲ್ಲಿ ದೆಹಲಿ ಮತ್ತು ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. 2026ರಲ್ಲಿ ತಮಿಳುನಾಡು ಹಾಗೂ ಪಶ್ಚಿಮಬಂಗಾಳ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಪ್ರಕ್ರಿಯೆಗೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next