Advertisement
ಜೆಡಿಎಸ್‌ನಲ್ಲಿ ಸ್ಥಾನ ಹೆಚ್ಚಿಸಿಕೊಳ್ಳುವ ತವಕಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಮುಂದುವರಿಸುವ ಬಗ್ಗೆ ಜೆಡಿಎಸ್‌ನಲ್ಲೂ ಗೊಂದಲವಿದೆ. ಮೈತ್ರಿ ಬಗ್ಗೆ ಹಳೇ ಮೈಸೂರು ಭಾಗದ ಶಾಸಕರು, ಮುಖಂಡರು ಆಸಕ್ತಿ ತೋರಿದರೆ, ಮಲೆನಾಡು-ಉತ್ತರ ಕರ್ನಾಟಕ ಭಾಗದವರು ಮೈತ್ರಿ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related Articles
Advertisement
ಕರಾವಳಿ ಭಾಗದಲ್ಲಿ ಜೆಡಿಎಸ್‌ಗೆ ಶಕ್ತಿ ಇಲ್ಲ. ಆದರೆ, ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿನ ಶಕ್ತಿ ಇದೆ. ಈ ಹಿಂದಿನ ಚುನಾವಣೆಗಳಲ್ಲಿ ಅದು ಸ್ಪಷ್ಟವಾಗಿದ್ದು, ಅನೇಕ ಕಡೆ ಜೆಡಿಎಸ್ ಗೆದ್ದಿತ್ತು. ಹೀಗಾಗಿ ಆ ಭಾಗದಲ್ಲಿ ಪಕ್ಷವನ್ನು ಬಲಪಡಿಸಬೇಕಾದರೆ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಸೂಕ್ತ ಎಂಬ ಮಾತುಗಳನ್ನು ಆ ಭಾಗದ ಮುಖಂಡರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂಬುದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲದ ಲೋಕಸಭೆ ಚುನಾವಣೆಯಲ್ಲಿ ಏಕೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬೇಕು? ಅದರ ಬದಲು ಪ್ರತ್ಯೇಕವಾಗಿ ಚುನಾವಣೆ ಎದುರಿಸಿ ಪಕ್ಷವನ್ನು ಬಲಪಡಿಸೋಣ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಿದ್ದಾರೆ. ಆದರೆ, ನಾಯಕರ ಮುಂದೆ ಇದನ್ನು ಹೇಳುವ ಧೈರ್ಯ ಇಲ್ಲದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ವಿರೋಧದ ನಡುವೆಯೇ ಕಾಂಗ್ರೆಸ್ ತಯಾರಿವಿಧಾನಸಭೆ ಚುನಾವಣೆಯಲ್ಲಿ ಸೋತು ರಾಷ್ಟ್ರಮಟ್ಟದಲ್ಲಿ ಪಕ್ಷದ ಭವಿಷ್ಯದ ಅಸ್ತಿತ್ವಕ್ಕಾಗಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆ ಎದುರಿಸಲು ದೋಸ್ತಿ ಪಕ್ಷ ಜೆಡಿಎಸ್‌ನೊಂದಿಗೆ ಕ್ಷೇತ್ರ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವುದು ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜೆಡಿಎಸ್ ಪ್ರಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಭವಿಷ್ಯದಲ್ಲಿ ಅಸ್ತಿತ್ವದ ಪ್ರಶ್ನೆಯಾಗಿದೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಬೇಡ ಎಂಬ ಅಭಿಪ್ರಾಯ ಹಳೆ ಮೈಸೂರು ಭಾಗದ ಬಹುತೇಕ ಕಾಂಗ್ರೆಸ್ ನಾಯಕರ ವಾದ. ಕ್ಷೇತ್ರ ಹೊಂದಾಣಿಕೆ ಲೆಕ್ಕಾಚಾರದಲ್ಲಿ ಹಳೆ ಮೈಸೂರು ಭಾಗದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕ ಭಾಗದ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿರುವುದರಿಂದ ಆ ಕ್ಷೇತ್ರಗಳನ್ನು ಸಾರಾಸಗಟಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್ ಭವಿಷ್ಯಕ್ಕೆ ಕುತ್ತು ಬರಲಿದೆ ಎಂಬುದು ಅವರ ಆತಂಕವೂ ಆಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಅದೇ ಪ್ರಮುಖ ಸಮಸ್ಯೆಯಾಗಿದ್ದು, ಹೈ ಕಮಾಂಡ್ ಆದೇಶ ಪಾಲನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜೆಡಿಎಸ್ ಕಣ್ಣಿಟ್ಟಿರುವ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಲಿ ಸಂಸದರಿದ್ದು, ಉಳಿದ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗೆ ಪ್ರಬಲ ವಿರೋಧಿಯಾಗಿರುವುದು ಜೆಡಿಎಸ್ ಮಾತ್ರ. ಬದ್ದ ವೈರಿ ಜೊತೆ ಕೈ ಜೋಡಿಸಿ ಯಾರೊಂದಿಗೆ ಹೋರಾಟ ಮಾಡುವುದು ಹೇಗೆ ಎಂಬ ಪ್ರಶ್ನೆ ಮುಂದಿಡುತ್ತಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಲಿ ಸಂಸದರಿದ್ದು, ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟು ಕೊಡಬಾರದು ಎಂಬ ಒತ್ತಡ ಸ್ಥಳೀಯ ಮಟ್ಟದಲ್ಲಿ ಹೆಚ್ಚಾಗಿದೆ. ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಪ್ರಬಲ ಸ್ಪರ್ಧಿಯಾಗಿದ್ದು, ಮಂಡ್ಯದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದು, ಹಾಸನದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಪ್ರಬಲ ಸ್ಪರ್ಧೆ ಒಡ್ಡಿ 2ನೇ ಸ್ಥಾನದಲ್ಲಿದೆ. ಆ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದರಿಂದ ತಳ ಮಟ್ಟದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಆತಂಕ ಇದ್ದು, ಬೇರೆ ಪಕ್ಷದ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಹಾಸನದಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದ್ದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬಿಜೆಪಿಯೇ ನೇರ ಸ್ಪರ್ಧಿಯಾಗಿರುವುದರಿಂದ ಜೆಡಿಎಸ್ ವಿರೋಧಿಸುವ ಕಾಂಗ್ರೆಸ್ ಮತಗಳು ಬಿಜೆಪಿಗೆ ಹೋಗುವ ಆತಂಕ ಇದ್ದು, ಅನಾಯಾಸವಾಗಿ ಈ ಭಾಗದಲ್ಲಿ ಬಿಜೆಪಿಗೆ ಬಾಗಿಲು ತೆರೆದುಕೊಟ್ಟಂತಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರ ಮಟ್ಟದ ಲೆಕ್ಕಾಚಾರ ಹಾಕುವ ಭರದಲ್ಲಿ ಕಾಂಗ್ರೆಸ್ ತನ್ನ ಬೇರುಗಳನ್ನು ತಾನೇ ಸಡಿಲು ಮಾಡಿಕೊಳ್ಳುತ್ತಿದ್ದು, ಈ ಮೂಲಕ ಜೆಡಿಎಸ್ ಶಕ್ತಿ ವೃದ್ಧಿಗೂ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂಬ ವಿಶ್ಲೇಷಣೆಗಳು ಪಕ್ಷದ ವಲಯದಲ್ಲೇ ಕೇಳಿಬರುತ್ತಿದೆ. ಮೈತ್ರಿಯಿಂದ ಬಿಜೆಪಿಗೆ ಲಾಭ?
ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್-ಜೆಡಿಎಸ್-ಬಿಎಸ್‌ಪಿ ಮೈತ್ರಿಕೂಟ ಲೋಕಸಭೆ ಚುನಾವಣೆ ಎದುರಿಸಿದರೆ ಲಾಭದ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಜೆಡಿಎಸ್ ಜತೆಗಿನ ಮೈತ್ರಿ ಒಪ್ಪದ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಬರಬಹುದು ಎಂಬ ದೂರಾಲೋಚನೆ ಬಿಜೆಪಿಯಲ್ಲಿದೆ. ಅದರಲ್ಲೂ ಹಳೇ ಮೈಸೂರು, ಉ.ಕ ಭಾಗದಲ್ಲಿ ಜೆಡಿಎಸ್ ವಿರೋಧಿಸಿಕೊಂಡು ಬಂದವರ ಮೇಲೆ ಬಿಜೆಪಿಯ ಕಣ್ಣಿದೆ. ಈಗಾಗಲೇ ಒಂದಷ್ಟು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳಿವೆ. ಇದಷ್ಟೇ ಅಲ್ಲ, ಕಾಂಗ್ರೆಸ್-ಜೆಡಿಎಸ್- ಬಿಎಸ್‌ಪಿ ಮೈತ್ರಿಯಿಂದ ಬಿಜೆಪಿಯತ್ತ ಹೆಚ್ಚು ಮತಗಳು ಕ್ರೋಢೀಕರಣ ಆಗುತ್ತವೆ ಎಂಬ ಲೆಕ್ಕಾಚಾರವೂ ಇದೆ. ಉದಾಹರಣೆಗೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರ. 2014 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ 4,15,280 ಮತ ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಬಚ್ಚೇಗೌಡರು 4,15,280 ಮತ ಪಡೆದು 9 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೆ, ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ 3,46, 339 ಮತ ಪಡೆದರು. ಒಂದೊಮ್ಮೆ ಕುಮಾರಸ್ವಾಮಿ ಅಲ್ಲಿ ಸ್ಪರ್ಧೆ ಮಾಡಿರದಿದ್ದರೆ ಬಚ್ಚೇಗೌಡರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದರು ಎಂಬ ಲೆಕ್ಕಾಚಾರ ಬಿಜೆಪಿಯದು. ಕೋಲಾರದಲ್ಲಿ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ವಿರುದ್ಧದ ಅಲೆ ಇತ್ತು. ಆದರೂ ಜೆಡಿಎಸ್ ಅಭ್ಯರ್ಥಿ 3,71.076 ಮತ, ಬಿಜೆಪಿ ಅಭ್ಯರ್ಥಿ ವಿ.ನಾರಾಯಣಸ್ವಾಮಿ 2,67,322 ಮತ ಪಡೆದರು. ಒಂದೊಮ್ಮೆ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಕಣದಲ್ಲಿ ಇದ್ದರೆ ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಲಾಭ. ಕಾಂಗ್ರೆಸ್ ವಿರುದ್ಧದ ಮತಗಳು ಒಂದೆಡೆ ಬಂದಂತಾಗುತ್ತದೆ. ತುಮಕೂರಿನಲ್ಲಿ ಕಾಂಗ್ರೆಸ್‌ನ ಮುದ್ದಹನುಮೇಗೌಡರು 4,29.868 ಮತ ಪಡೆದು ಗೆದ್ದಿದ್ದಾರೆ. ಅಲ್ಲಿ ಬಿಜೆಪಿಯ ಬಸವರಾಜ್ 3,55,827 ಮತ ಪಡೆದು 2ನೇ ಸ್ಥಾನ, ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಎ.ಕೃಷ್ಣಪ್ಪ 2,58,683 ಮತ ಪಡೆದಿದ್ದರು. ಅಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಒಂದಾದರೆ ಬಿಜೆಪಿಗೆ ಗೆಲುವಾಗಲಿದೆ ಎಂಬ ವಾದ ಬಿಜೆಪಿಯದು. ಅದೇ ರೀತಿ, ಕಾಂಗ್ರೆಸ್ ಗೆಲುವು ಸಾಧಿಸಿರುವ ಚಾಮರಾಜನಗರ, ಕಲಬುರಗಿ ಚಿಕ್ಕೋಡಿ ಕ್ಷೇತ್ರಗಳಲ್ಲಿ ಮೈತ್ರಿಯಿಂದ ಬಿಜೆಪಿಗೆ ಲಾಭ ಆಗಲಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆಪಿಗೆ ಕಷ್ಟ ಎಲ್ಲಾಗಬಹುದು?: ಬಿಜೆಪಿ ಗೆಲುವು ಸಾಧಿಸಿರುವ ಬೆಂಗಳೂರು ಉತ್ತರ, ಸೆಂಟ್ರಲ್, ದಕ್ಷಿಣ , ಬೀದರ್, ಬಿಜಾಪುರ, ಬಾಗಲಕೋಟೆ ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಬಿಜೆಪಿಗೆ ಕಷ್ಟವಾಗಬಹುದು. ಈ ಕ್ಷೇತ್ರಗಳಲ್ಲಿ ರಣತಂತ್ರ ಬದಲಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾಗಿರುವ ಮತಗಳು ಹಾಗೂ ಫಲಿತಾಂಶದ ಹಿನ್ನೆಲೆಯಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ. ಆದರೂ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಯ ಸಾಮರ್ಥ್ಯದ ಮೇಲೂ ಅವಲಂಬಿತವಾಗಿರಲಿದೆ. ಆದರೂ, ಈಗಾಗಲೇ ಆ ನಿಟ್ಟಿನಲ್ಲಿ ಚಿಂತನೆ, ಚರ್ಚೆಗಳು ನಡೆದು ವಿಧಾನಸಭೆ ಚುನಾವಣೆಯಲ್ಲಿ ಬೂತ್‌ವಾರು ಪಡೆದಿರುವ ಮತಗಳ ಮಾಹಿತಿ ಸಂಗ್ರಹಿಸಿ ಬೂತ್ ಮಟ್ಟದಿಂದಲೇ ಬಿಜೆಪಿಯನ್ನು ಬಲಿಷ್ಠಗೊಳಿಸುವ ಕೆಲಸಕ್ಕೂ ಚಾಲನೆ ನೀಡಲಾಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದರೆ ರಾಜ್ಯದಲ್ಲಿ ಬಿಜೆಪಿ ಮೇಲೆ ಗಂಭೀರ ಪರಿಣಾಮವೇನೂ ಬೀರುವುದಿಲ್ಲ. ಏಕೆಂದರೆ ಸಂಸತ್ ಚುನಾವಣೆಯಲ್ಲಿ ಜನರ ಆಯ್ಕೆ ಬೇರೆಯೇ ಮಾನದಂಡದಡಿ ಆಗುತ್ತದೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಕಠಿಣ ಹೋರಾಟ ಏರ್ಪಡಬಹುದು. ನಾವು ನಮ್ಮ ಕಾರ್ಯತಂತ್ರ ಬದಲಿಸಿಕೊಳ್ಳಬೇಕಾದ ಆನಿವಾರ್ಯತೆಯಂತೂ ಇದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸಬೇಕಾಗುತ್ತದೆ.
– ಬಸನಗೌಡ ಪಾಟೀಲ್ ಯತ್ನಾಲ್, ಶಾಸಕ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹೈಕಮಾಂಡ್ ಆದೇಶ ಮಾಡಿದರೆ ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ. ಆದರೆ, ಕ್ಷೇತ್ರ ಹೊಂದಾಣಿಕೆ ಸಂದರ್ಭದಲ್ಲಿ ಹಳೇ ಮೈಸೂರಿನ ಎಲ್ಲ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು ಎಂಬುದು ನಮ್ಮ ಬೇಡಿಕೆ. ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟರೆ ಹಾಸನವನ್ನು ಕಾಂಗ್ರೆಸ್ ಇಟ್ಟುಕೊಳ್ಳಬೇಕು. ಕ್ಷೇತ್ರ ಹೊಂದಾಣಿಕೆಯಿಂದ ಜೆಡಿಎಸ್‌ಗೆ ಹೆಚ್ಚಿನ ಲಾಭವಾಗಲಿದೆ. ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಾಗುವುದಿಲ್ಲ.
– ಎ. ಮಂಜು, ಮಾಜಿ ಸಚಿವ. ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವಾಗ ಎಲ್ಲಾ ಭಾಗದ ಪ್ರಮುಖರು ಒಟ್ಟಾಗಿ ಕುಳಿತು ತೀರ್ಮಾನ ಕೈಗೊಳ್ಳುತ್ತಾರೆ. ಏನಾದರೂ ಸಮಸ್ಯೆಗಳಿದ್ದರೆ ಆ ಸಂದರ್ಭದಲ್ಲಿ ಬಗೆಹರಿಸಿಕೊಳ್ಳಲಾಗುವುದು. ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲದೇ ಇರುವಾಗ ಸ್ವತಂತ್ರವಾಗಿ ಪಕ್ಷ ಸಂಘಟನೆ ಮಾಡುವುದೂ ಕಷ್ಟ. ಇದನ್ನು ಹೊಂದಾಣಿಕೆ ಬೇಡ ಎನ್ನುವವರು ಗಮನದಲ್ಲಿಟ್ಟುಕೊಳ್ಳಬೇಕು. ಎರಡೂ ಪಕ್ಷಗಳ ಉದ್ದೇಶ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದು.
– ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಸಾಧ್ಯವಾಗಲಿಕ್ಕಿಲ್ಲ. ರಾಹುಲ್ ಗಾಂಧಿಯವರು ಪ್ರಧಾನಿ
ಅಭ್ಯರ್ಥಿಯಾಗಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ.
– ಎಚ್.ಡಿ.ದೇವೇಗೌಡ,
ಮಾಜಿ ಪ್ರಧಾನಿ ಸಮ್ಮಿಶ್ರ ಸರ್ಕಾರವಿರುವ ಪರಿಸ್ಥಿತಿಯಲ್ಲಿ ಅಸಹನೆಯನ್ನು ಸಹಿಸಿಕೊಂಡು ಪಕ್ಷವನ್ನು ಸಂಘಟಿಸಬೇಕಿದೆ.ಎಲ್ಲರೂ ವೈಮನಸ್ಸು ಮರೆತು ಒಟ್ಟಾಗಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲು ಅವಕಾಶ ನೀಡಬಾರದು.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ – ಎಸ್.ಲಕ್ಷ್ಮಿನಾರಾಯಣ/ಪ್ರದೀಪ್‌ಕುಮಾರ್ ಎಂ./ಶಂಕರ ಪಾಗೋಜಿ