Advertisement

ಮನೆಯೊಳಗೆ ಲಾಕ್‌ ಆದರೂ ಮನ ಆನ್‌ಲಾಕ್‌ ಆಗಿರಲಿ

11:50 PM May 10, 2021 | Team Udayavani |

ಕಳೆದ ಒಂದು ವರ್ಷದಿಂದ “ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ’ ಎಂಬಂತೆ ಇನ್ನೇನು ಹೋಯಿತು ಆರೋಗ್ಯದ ಸಂಕಷ್ಟ ಎಂದರೆ, ಮತ್ತೆ ಮತ್ತೆ ನಮ್ಮೊಳಗೆ ಸೇರಿಕೊಳ್ಳುತ್ತಿರುವ “ಕೊರೊನಾ’ ಎಂಬ ಕಂಟಕ ಇದೀಗ ಎರಡನೆಯ ರಣಕಹಳೆಯನ್ನು ಮೊಳಗಿಸಿದೆ. ಮತ್ತೂಮ್ಮೆ “ಕೋವಿಡ್‌ ಕರ್ಫ್ಯೂ’ ಎಂಬ ಬಂಧನದಲ್ಲಿ ನಮ್ಮೆಲ್ಲರನ್ನೂ ಕಟ್ಟಿಹಾಕಿದೆ.

Advertisement

ಮನೆಯೊಳಗೆ ಸದಾ ಕುಳಿತುಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರಲ್ಲಿಯೂ ಸ್ವತ್ಛಂದ ವಾಗಿ ಆಟವಾಡಿಕೊಂಡು, ಗೆಳೆಯರೊಡನೆ, ಓರಗೆ ಯವರೊಡನೆ ಸ್ನೇಹದಿಂದ ಕುಣಿದು ಕುಪ್ಪಳಿಸುವ ಪುಟಾಣಿಗಳಿಗಂತೂ ಇದೊಂದು ಸೆರೆವಾಸವೇ ಸರಿ. ಆದರೇನಂತೆ “ಆರೋಗ್ಯವೇ ಭಾಗ್ಯ’ ಎಂಬ ಸೂತ್ರದಂತೆ ಈ ಕೃತಕ ಸೆರೆವಾಸವನ್ನು ಅನುಭವಿ ಸುವುದೂ ಅನಿವಾರ್ಯ ಮತ್ತು ಸಕಾಲಿಕವಾಗಿದೆ. ಮನೆಯೊಳಗೆ ಲಾಕ್‌ ಆಗಿದ್ದರೂ ಮನವನ್ನು ಲಾಕ್‌ ಮಾಡದೇ ಸಂತಸದಿಂದಿರಬೇಕಿದೆ.

ನಮ್ಮೊಳಗಿನ ಹವ್ಯಾಸಗಳಿಗೆ ಒಂದಿಷ್ಟು ನೀರೆರೆದು ಚಿಗುರೊಡೆಸುವ ಮೂಲಕ ಮನಸ್ಸನ್ನು ಅನ್‌ ಲಾಕ್‌ ಮಾಡಬೇಕಿದೆ.
ಕೊರೊನಾ ತಂದೊಡ್ಡಿದ ಲಾಕ್‌ಡೌನ್‌ ನಮಗೆ ಹೊಸದೇನಲ್ಲ. ಕಳೆದ ವರ್ಷದ ಮುಂದುವರಿದ ಭಾಗವಷ್ಟೆ. ಮನೆಯಲ್ಲಿಯೇ ಇದ್ದು ಜಡತ್ವ ಬೆಳೆಸಿ ಕೊಳ್ಳದೇ ಒಂದಿಷ್ಟು ಹವ್ಯಾಸಗಳಿಗೆ ಮರುಚಾಲನೆ ನೀಡಬೇಕಾಗಿದೆ. ದಿನನಿತ್ಯದ ಕೆಲಸದ ಒತ್ತಡದಲ್ಲಿ ಓದಲಾಗದ ಪುಸ್ತಕಗಳನ್ನು ಆನ್‌ಲೈನ್‌ ಮೂಲಕವಾಗಲಿ, ಮನೆಯಲ್ಲಿನ ಸಂಗ್ರಹದಿಂದಾಗಲಿ, ಓದುವ ಹವ್ಯಾಸಕ್ಕೆ ನೀರೆರೆಯಬಹುದಾಗಿದೆ. “ಪುಸ್ತಕ ಓದುವ ಹವ್ಯಾಸ ಉಳ್ಳವನು ಎಲ್ಲಿ ಹೋದರೂ ಸಂತೋಷವಾಗಿರಬಲ್ಲ’ ಎಂಬ ಮಹಾತ್ಮಾ ಗಾಂಧೀಜಿಯವರ ಸೊಲ್ಲಿನಂತೆ ಮನೆ-ಮನಗಳ ಸಂತೋಷಕ್ಕೆ ಪುಸ್ತಕಗಳೇ ದಿವೌÂ ಷಧ ಎಂದರೆ ತಪ್ಪಾಗಲಾರದು. “ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂಬಂತೆ ಹಿರಿಯರು ಪುಸ್ತಕ ಹಿಡಿದು ಕುಳಿತರೆ ಮನೆಯಲ್ಲಿನ ಮಕ್ಕಳು ಕೂಡ ಮೊಬೈಲ್‌ನಲ್ಲಿ ಒಂದಿಷ್ಟು ಅನಾವಶ್ಯಕ ಚಾಟಿಂಗ್‌ ಮಾಡುವುದನ್ನು ಬಿಟ್ಟು ಪುಸ್ತಕಗಳೆಡೆಗೆ ಆಕರ್ಷಿತರಾಗುವರು. ಪುಸ್ತಕ ಪ್ರೀತಿಯು ಕೇವಲ ಓದು, ಜ್ಞಾನಾರ್ಜನೆಗಷ್ಟೇ ಸೀಮಿತವಾಗಿರದೇ ನಮ್ಮೊಳಗಿನ ಒಬ್ಬ ಬರಹಗಾರನನ್ನು ಪುಟಿದೇಳಿಸಿ, ಚಿಕ್ಕ-ಚೊಕ್ಕ ಬರವಣಿಗೆಗೂ ಪ್ರೇರೇಪಿಸುತ್ತದೆ.

ಪ್ರತೀಯೊಬ್ಬರ ಆಸಕ್ತಿಗಳೂ ಕೂಡ ವಿಭಿನ್ನವಾದವು. ಕೆಲವೊಬ್ಬರಿಗೆ ಕರಕುಶಲ ಕಲೆಯಲ್ಲಿ ಬಹಳ ಆಸಕ್ತಿ. ಅಂತಹವರಿಗೆ ಈ ಲಾಕ್‌ಡೌನ್‌ ವರವಾಗಬಲ್ಲುದು. ತೆಂಗಿನ ಕಾಯಿಯ ಗೆರಟೆಯಿಂದ ವಿವಿಧ ಆಕೃತಿ ತಯಾರಿಕೆ, ಕಸೂತಿ, ಮಣಿಗಳಲ್ಲಿ ಕರಕುಶಲ ವಸ್ತುಗಳ ತಯಾರಿ, ಪೇಪರ್‌ ಕ್ರಾಫ್ಟ್. ಇವುಗಳೆಲ್ಲವೂ ಬಹಳ ತಾಳ್ಮೆ ಮತ್ತು ಸಮಯವನ್ನು ನಿರೀಕ್ಷಿಸುತ್ತವೆ. ಈ ವಿರಾಮದ ಸಮಯವನ್ನೇ ಈ ಕಲೆಗಳಿಗೆ ಸುಸಮಯವನ್ನಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಪುಟ್ಟ ಮಕ್ಕಳಿಗಂತೂ ಕತ್ತರಿಸುವುದು, ಅಂಟಿಸುವುದು, ಬೀಜಗಳನ್ನು ಬಳಸಿ ಆಕೃತಿ ತಯಾರಿಕೆ, ಹತ್ತಿಯಿಂದ ಗೊಂಬೆ ತಯಾರಿಕೆ..ಈ ರೀತಿಯ ಚಟುವಟಿಕೆಗಳು ಹೆಚ್ಚು ಮುದ ನೀಡುತ್ತವೆ ಅಷ್ಟೇ ಅಲ್ಲದೆ, ಹೊಸ ಕಲಿಕೆಯ ದಾರಿಯನ್ನು ಸೂಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಾಗಾಲೋಟದ ಬದುಕಿನಲ್ಲಿ ತರಹೇವಾರಿ ಅಡುಗೆಗಳನ್ನು ಮನೆಯಲ್ಲಿ ಮಾಡಿ ತಿನ್ನುವುದಕ್ಕಿಂತ ಹೊಟೇಲ…, ರೆಸ್ಟೋರೆಂಟ್‌, ಚಾಟ್ಸ್‌ ಕಾರ್ನರ್‌ಗಳಲ್ಲಿ ತಿನ್ನುವುದೇ ಜಾಸ್ತಿಯಾಗಿದೆ. ಮನೆಯಲ್ಲಿಯೇ ಅಡುಗೆಯ ಹೊಸರುಚಿಗಳನ್ನು ಮಾಡಿ, ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಸವಿಯುವ ಪಾಕ ಪರಂಪರೆಯನ್ನು ಮತ್ತೆ ಮೈಗೂಡಿಸಿಕೊಳ್ಳಲು ಈ ಲಾಕ್‌ಡೌನ್‌ ಸಮಯವನ್ನು ಸಕಾಲಿಕ ಎಂದು ಕೊಳ್ಳಬೇಕಾಗಿದೆ. ಮನೆಯ ಮಕ್ಕಳಿಗೆ ಒಂದಿಷ್ಟು ಅಡುಗೆ ಕೆಲಸಗಳನ್ನು ಕಲಿಸಿಕೊಟ್ಟಾಗ ಅವರಿಗೂ ಮುಂದೆ ಬ್ಯಾಚುಲರ್‌ ಜೀವನ ನಡೆಸುವಾಗ ಮನೆಯಲ್ಲಿ ಒಬ್ಬರೇ ಅಡುಗೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಾಗ ಅನುಕೂಲವಾದಂತಾಗುತ್ತದೆ.

Advertisement

ಇದು ಅಂತರ್ಜಾಲದ ಯುಗವಾಗಿದೆ. ಅಂಥ ದ್ದರಲ್ಲಿ ಸಂಪೂರ್ಣವಾಗಿ ಅಂತರ್ಜಾಲದಿಂದ ವಿಮುಖರಾಗಲು ಸಾಧ್ಯವೇ? ಅಂತರ್ಜಾಲದ ಒಳಿ ತನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನವಾಗಬೇಕಿದೆ. ಇ-ಸಾರ್ವಜನಿಕ ಗ್ರಂಥಾಲಯದಂತಹ ಅಂತ ರ್ಜಾಲದ ಸೌಲಭ್ಯಗಳ ಬಳಕೆ ಮಾಡಿಕೊಳ್ಳು ವಂತಾಗಬೇಕು. ಚಿಕ್ಕ ಚಿಣ್ಣರು ಪಜೈಲ್‌ ಬಿಡಿಸುವುದು, ಚಿತ್ರಗಳನ್ನು ರಚಿಸುವುದು, ಚಿತ್ರಗಳಿಗೆ ಬಣ್ಣ ತುಂಬುವುದು.. ಹೀಗೆ ಇತ್ಯಾದಿ ಮನೋಲ್ಲಾಸ ನೀಡುವ ಕೆಲಸಗಳನ್ನು ಅಂತರ್ಜಾಲದ ಅಂಗಳ ದಲ್ಲಿಯೇ ಮಾಡಬಹುದಾಗಿದೆ.

“ಆಡಿ ಬಾ ನನ ಕಂದ ಅಂಗಾಲ ತೊಳೆದೇನ’ ಎಂಬ ಜನಪದದ ತಾಯಿಯ ಆಸೆಯಂತೆ, ಆಟಗಳು ದೈಹಿಕ ಮತ್ತು ಮಾನಸಿಕ ಶಕ್ತಿಯ ವೃದ್ಧಿಯಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಈ ಕರ್ಫ್ಯೂ ಕಾಲವೊಂತೂ ಮಕ್ಕಳು ಮತ್ತು ಹಿರಿಯರು ಒಗ್ಗೂಡಿ ಮನೆಯೊಳಗೆಯೇ ಬೌದ್ಧಿಕತೆಯನ್ನು ವೃದ್ಧಿಸುವ ಒಳಾಂಗಣ ಆಟಗಳಾನ್ನಾಡಲು ಸಿಕ್ಕ ಒಳ್ಳೆಯ ಸಮಯ. ಚೆಸ್‌, ಕೇರಂ, ಹಳೆಗುಳಿಮನೆ, ಪಗಡೆಯಂತಹ ಮೆದುಳಿಗೆ ಕೆಲಸವನ್ನು ಕೊಡುವಂತಹ ಒಳಾಂಗಣ ಆಟಗಳನ್ನು ಮನೆಮಂದಿಯೆಲ್ಲ ಸೇರಿ ಆಡಬೇಕಿದೆ. ಮನೆಯಂಗಳದಲ್ಲಿಯೋ ಅಥವಾ ತಾರಸಿಯ ಮೇಲೆಯೋ ಸಂಜೆಯ ಹೊತ್ತು ಕುಂಟೆಬಿÇÉೆ, ಶಟ್ಲ ಬ್ಯಾಡ್ಮಿಂಟನ್‌ನಂತಹ ಆಟಗಳನ್ನು ಆಡುವುದರಿಂದ ದೈಹಿಕ ವ್ಯಾಯಾಮವಾಗುವುದರ ಜತೆಗೆ ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ.

ಮನೆಯಲ್ಲಿ ಲಾಕ್‌ ಆದರೂ ದೂರವಾಣಿಯ ಮೂಲಕ ಮುಕ್ತವಾಗಿ ಬಂಧುಗಳೊಡನೆ, ಸ್ನೇಹಿತ ರೊಡನೆ ಮಾತನಾಡುವುದು, ಹಲವು ಹವ್ಯಾಸಗಳ ಮುಖಾಂತರ ಮನಸ್ಸನ್ನು ತೆರೆದಿಡುವುದು, ಸದಾ ಧನಾತ್ಮಕ ಚಿಂತನೆಗಳಲ್ಲಿ ತೊಡಗಿಸುವುದರ ಮೂಲಕ ಮನಸ್ಸನ್ನು ಲಾಕ್‌ ಆಗದಂತೆ ನಾವೆಲ್ಲರೂ ಉಲ್ಲಸಿತ ರಾಗಬೇಕಿದೆ. “ಸರ್ವೇ ಸಂತು ನಿರಾಮಯಾಃ’ ಎಂಬ ಸಂಸ್ಕೃತದ ಹಿತನುಡಿಯೊಂದರಂತೆ ಎಲ್ಲರೂ ರೋಗರಹಿತರಾಗಬೇಕಿದೆ. ಕೊರೊನಾ ಕಂಟಕ ದಿಂದ ದೂರವಾಗಲು “ಮನೆಯೇ ಮಂತ್ರಾ ಲಯ’ವನ್ನಾಗಿಸಿಕೊಂಡು,  ನಮ್ಮ ಆರೋಗ್ಯದ ರಕ್ಷಣೆಯನ್ನು ಮಾಡಿಕೊಳ್ಳುವುದರ ಜತೆಗೆ ಸಮಸ್ತ ಮನುಕುಲದ ಒಳಿತಿಗಾಗಿ ಮತ್ತು ಉಳಿವಿಗಾಗಿ ನಾವು ನಮ್ಮ ಕಿರು ಕಾಣಿಕೆಯನ್ನು ಸುರಕ್ಷತ ಕ್ರಮಗಳನ್ನು ಅನುಸರಿಸುವುದರ ಮೂಲಕ ನೀಡೋಣವಲ್ಲವೇ?

ಪ್ರಾಯೋಗಿಕ ಕಲಿಕೆ
ಮನುಷ್ಯ ಪ್ರಕೃತಿಯ ಕೂಸು. ಪ್ರಕೃತಿಯೊಂದಿಗಿನ ಬದುಕು ನೀಡುವ ಸಂತಸ ಅವರ್ಣನೀಯ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಲಾಕ್‌ ಅಗಿರುವ ನಗರ ಪ್ರದೇಶದವರೂ ಕೂಡ ತೋಟ, ಗದ್ದೆಯ ಚಟುವಟಿಕೆಗಳಲ್ಲಿ ತುಸು ಭಾಗಿಯಾಗಬಹುದಾಗಿದೆ. ಕಾಂಕ್ರೀಟ್‌ ಕಾಡಿನ ನಗರದೊಳಗೆ ಜೀವಿಸುವವರು ಕೂಡ ಮನೆಯಂಗಳದಲ್ಲಿಯೇ ಕೈತೋಟ ಮಾಡಿಕೊಂಡು, ಗಿಡಗಳಿಗೆ ನೀರುಣಿಸುವುದು, ಕಳೆ ತೆಗೆಯುವುದು ಇನ್ನಿತ್ಯಾದಿ ಕೆಲಸಗಳನ್ನು ಮಾಡುತ್ತ ಹಸುರುನೊಂದಿಗೆ ಕಾಲ ಕಳೆಯಬಹುದಾಗಿದೆ. ನಮ್ಮ ಆರೈಕೆಯಲ್ಲಿ ಬೆಳೆದ ಗಿಡವು ಹೂವು-ಹಣ್ಣು ಬಿಟ್ಟಾಗ ಸಿಗುವ ಆತ್ಮತೃಪ್ತಿ, ಸಂತಸ ವರ್ಣಿಸಲಸದಳ. ಈ ರೀತಿ ಪರಿಸರದೊಂದಿಗೆ ಹಿರಿಯರು ಕೆಲಸ ಮಾಡುವಾಗ ಎಳೆಯ ಮಕ್ಕಳಿಗೂ ಒಂದಿನಿತು ಕೆಲಸಗಳ ಪರಿಚಯವಾಗುವುದರೊಂದಿಗೆ ಪ್ರಾಯೋಗಿಕ ಕಲಿಕೆಯಾದಂತಾಗುತ್ತದೆ.

– ಭಾರತಿ ಎ. ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next