ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಸಾಲದ ಸುಳಿಯಲ್ಲಿ ಸಿಲುಕಿದ್ದರೆ, ಅತ್ತ ಸಾರಿಗೆ ನೌಕರರು ವೇತನ ಪರಿಷ್ಕರಣೆ, ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ವೇತನದ ಮಾದರಿಯಲ್ಲಿ ಸಮಾನ ವೇತನದ ಬೇಡಿಕೆಯನ್ನು ಮುಂದಿಟ್ಟು ಈ ನಿಗಮಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
Advertisement
ಸಾಲ, ತುಟ್ಟಿಭತ್ತೆ, ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಸಹಿತ ನಾಲ್ಕೂ ನಿಗಮಗಳು ಒಟ್ಟು 6,330 ಕೋ. ರೂ. ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಸರಕಾರ ಈ ನಿಗಮಗಳಿಗೆ 2,000 ಕೋ. ರೂ. ವರೆಗೆ ಸಾಲ ಪಡೆಯಲು ಖಾತರಿ ನೀಡಲು ಸಮ್ಮತಿ ಸೂಚಿಸಿದೆ. ಆದರೆ ಸಾರಿಗೆ ನೌಕರರು ಸರಕಾರಿ ನೌಕರರ ಮಾದರಿಯಲ್ಲಿ ಸಮಾನ ವೇತನ ನೀಡುವಂತೆ ಪಟ್ಟು ಹಿಡಿದಿದ್ದು, ನೌಕರರ ಸಂಘಟನೆಗಳ ಒಕ್ಕೂಟ ಪದೇಪದೆ ಮುಷ್ಕರದ ಮಾರ್ಗ ಹಿಡಿಯುವುದಾಗಿ ಎಚ್ಚರಿಕೆ ನೀಡುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ನಿಗಮಗಳು ಕೂಡ ಸರಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿವೆ.
ಸರಕಾರಿ ಸಾರಿಗೆ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸರಕಾರ ಹೆಚ್ಚಿನ ಆಸ್ಥೆ ವಹಿಸಬೇಕು. ಸಾರಿಗೆ ಸಂಸ್ಥೆಗಳು, ಸಾರಿಗೆ ನೌಕರರು ಮತ್ತು ಪ್ರಯಾಣಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ಒಂದು ಸಮತೋಲಿತ ನಿರ್ಧಾರವನ್ನು ಸರಕಾರ ಕೈಗೊಳ್ಳಬೇಕು. ಪ್ರತೀ ಬಾರಿ ಸಂಕಷ್ಟ ಎದುರಾದಾಗಲೆಲ್ಲ ತಾತ್ಕಾಲಿಕ ಪರಿಹಾರ ಕ್ರಮಕ್ಕೇ ಸರಕಾರ ಮತ್ತು ಸಾರಿಗೆ ಸಂಸ್ಥೆಗಳು ಜೋತು ಬೀಳುತ್ತಿರುವುದರಿಂದಾಗಿ ಇಂದು ಈ ಎಲ್ಲ ಸಂಕಷ್ಟಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸರಕಾರ, ಸಾರಿಗೆ ಸಂಸ್ಥೆಗಳು ಮತ್ತು ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ, ಒಣಪ್ರತಿಷ್ಠೆ, ಹಠಮಾರಿ ಧೋರಣೆಯೆಲ್ಲವನ್ನು ಬದಿಗಿರಿಸಿ, ಸರಕಾರಿ ಸಾರಿಗೆ ಸಂಸ್ಥೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಕೂಡಿದ ಸುಧಾರಣಾತ್ಮಕ ನಿರ್ಧಾರವನ್ನು ಕೈಗೊಳ್ಳಬೇಕು.