Advertisement

Karnataka: ನಕ್ಸಲ್‌ ಶರಣಾಗತಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ

01:32 AM Dec 31, 2024 | Team Udayavani |

ಬೆಂಗಳೂರು: ನಕ್ಸಲ್‌ ಮುಕ್ತ ಕರ್ನಾಟಕ ಮಾಡುವತ್ತ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗತಿ ಹೊಂದಲು ಆಹ್ವಾನ ನೀಡಿದ್ದಾರೆ.

Advertisement

ನಕ್ಸಲರು ಶರಣಾದರೆ ಅದಕ್ಕೆ ಬೇಕಿರುವ ಕಾನೂನಿನ ಎಲ್ಲ ನೆರವು ಸಹಿತ ಪುನರ್ವಸತಿಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಕ್ಸಲರು ಮುಖ್ಯವಾಹಿನಿಗೆ ಬರಬೇಕೆಂದು ಸರಕಾರವು ಬಯಸುತ್ತದೆ ಎಂದಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಸಿಎಂ, ನಕ್ಸಲರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯೂ ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ನನ್ನನ್ನು ಭೇಟಿ ಮಾಡಿರುತ್ತಾರೆ.

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ನಕ್ಸಲರು ಮುಖ್ಯವಾಹಿನಿಗೆ ಬರಲು ಮುಂದಾಗಿದ್ದರೆ, ಸರಕಾರ ಈ ಪ್ರಕ್ರಿಯೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

ನಕ್ಸಲರು ಮುಖ್ಯವಾಹಿನಿಗೆ ಬರಲು ಮುಂದಾದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳಗೊಳಿಸಿ, ಸಮರ್ಪಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಪುನರ್ವಸತಿಗೆ ಕ್ರಮ: ಕಾನೂನು ನೆರವು
ನಕ್ಸಲರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಹಾಗೂ ಆಯುಧಗಳನ್ನು ಸರಕಾರಕ್ಕೆ ಅರ್ಪಣೆ ಮಾಡುವ ನಕ್ಸಲರಿಗೆ ಪ್ರೋತ್ಸಾಹ ಧನ, ಕೌಶಲ ತರಬೇತಿ ನೀಡುವುದಲ್ಲದೆ ಪುನರ್ವಸತಿಗೂ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮ ಕೈಗೊಳ್ಳಲಾಗುವುದು. ಅವರ ಮೇಲಿನ ಮೊಕದ್ದಮೆ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕಾನೂನು ಕೈಗೆತ್ತಿಕೊಂಡರೆ ಕಠಿನ ಕ್ರಮ
ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗುವ ಯಾರೇ ಆದರೂ ಕಠಿನ ಕಾನೂನು ಕ್ರಮವನ್ನು ನಮ್ಮ ಸರಕಾರ ಕೈಗೊಳ್ಳಲಿದೆ ಎಂದೂ ಸ್ಪಷ್ಟಪಡಿಸಬಯಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next