Advertisement
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2010-11ನೇ ಸಾಲಿನಲ್ಲಿ ಅಳಿಕೆ ಸತ್ಯಸಾಯಿ ವಿಹಾರದಿಂದ ಮೆಣಸಿನ ಗಂಡಿ ಮೂಲಕವಾಗಿ ಕೆಳಗಿನ ಮುಳಿಯ ಸೇರುವ 6.42 ಕಿ.ಮೀ. ರಸ್ತೆಗೆ 341.50 ಲಕ್ಷ ರೂ. ಮಂಜೂರಾಗಿತ್ತು. ಕಳೆದ 9 ವರ್ಷಗಳಿಂದ ಮಂಜೂರಾಗಿರುವ ಬಗ್ಗೆ ರಾಜಕಾರಣಿಗಳು ಘೋಷಿಸುತ್ತಿದ್ದರು ಹೊರತಾಗಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರಲಿಲ್ಲ.
ಅಳಿಕೆ, ಗಂಗೆಮೂಲೆ, ಮೆಣಸಿನಗಂಡಿ, ದೂಜಮೂಲೆ, ಮುಳಿಯ ನೆಕ್ಕರೆ, ಕೆಳಗಿನ ಮುಳಿಯವಾಗಿ ನೆಕ್ಕಿತ್ತಪುಣಿ ಸೇರುವ ಈ ರಸ್ತೆಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಇದು ಈ ಊರಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಮಳೆಗಾಲದಲ್ಲಿ ವಾಹನ ಸಂಚಾರ ಕಷ್ಟಕರವಾಗಿತ್ತು. ರೋಗಿಯನ್ನು ಗದ್ದೆ, ತೋಡಿನ ಬದಿಗಳಲ್ಲಿ ಹೊತ್ತು ಆಸ್ಪತ್ರೆ ಸೇರುವ ಪರಿಸ್ಥಿತಿ ಇತ್ತು. ಹಿಂದಿನ ಲೋಕಸಭಾ ಚುನಾವಣೆ ಸಮಯ ಭರವಸೆ ನೀಡಿ ಹೋದ ವ್ಯಕ್ತಿಗಳು ಮಾತ್ರ ಬಳಿಕ ಇತ್ತ ಆಗಮಿಸಲೇ ಇಲ್ಲ. ಯಾವ ಭರವಸೆಗೂ ಕಾಯದೇ ನಮ್ಮ ರಸ್ತೆಯನ್ನು ನಾವೇ ಅಭಿವೃದ್ಧಿಪಡಿಸುತ್ತೇವೆ ಎನ್ನುತ್ತಿದ್ದಾರೆ ರಸ್ತೆ ಫಲಾನುಭವಿಗಳು.