Advertisement

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

09:22 AM Dec 21, 2024 | Team Udayavani |

ರಬಕವಿ-ಬನಹಟ್ಟಿ : ಬರೋಬ್ಬರಿ ತಿಂಗಳ ನಂತರ ಇಲ್ಲಿನ ಕೆಎಚ್‌ಡಿಸಿ ಪ್ರಧಾನ ಕಚೇರಿ ಎದುರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿದ್ದ ಕೈಮಗ್ಗ ನೇಕಾರರ ಸತ್ಯಾಗ್ರಹವನ್ನು ಜವಳಿ ಸಚಿವ ಶಿವಾನಂದ ಪಾಟೀಲರ ಭರವಸೆ ಮೆರೆಗೆ ಕೈಬಿಡುವಲ್ಲಿ ಕಾರಣವಾಯಿತು.

Advertisement

ಶುಕ್ರವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ, ಸತ್ಯಾಗ್ರಹನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು. ನೇಕಾರರು ಎಂದಿಗೂ ಹೋರಾಟ ನಡೆಸಬಾರದು ಬದಲಾಗಿ ಸಮಸ್ಯೆಗಳಿಗೆ ಸರ್ಕಾರದೊಂದಿಗೆ ಸಂವಾದ ಅಥವಾ ಮಾತುಕತೆ ನಡೆಸಿ ನಂತರ ಹೋರಾಟಗಳಂತಹ ವ್ಯವಸ್ಥೆಗೆ ಅಣಿಯಾಗಬೇಕು. ದುಡಿಮೆಯಿಂದಲೇ ದಿನಂಪ್ರತಿ ಉಪಜೀವನ ನೇಕಾರರದ್ದು, ಉಪವಾಸದೊಂದಿಗೆ ಹೋರಾಟ ನನಗೂ ಬೇಸರವೆಂದು ಪಾಟೀಲ ತಿಳಿಸಿದರು.

ಮನೆಗಳಿಗೆ ಸಿಟಿಎಸ್ ಹಾಗು ನಿವೇಶನ ಹಂಚುವ ವಿಚಾರದಿಂದ ಕೈಬಿಡಬೇಕು. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಕಾರಣ ತಾಂತ್ರಿಕವಾಗಿ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವದು. ಸದ್ಯ ಅಥವಾ ಮುಂದೆಯೂ ಸಹಿತ ಯಾರನ್ನೂ ಒಕ್ಕಲೆಬ್ಬಿಸುವದಿಲ್ಲ ನೇಕಾರರು ಸುರಕ್ಷಿತವಾಗಿ ತಮ್ಮ ಮನೆಗಳಿಲ್ಲರಬಹುದು ಎಂದರು.

ಸಾಕಷ್ಟು ಸಮಸ್ಯೆಗಳು ನಿಗಮದಲ್ಲಿವೆ. ಅರಣ್ಯ ಇಲಾಖೆಯಿಂದ ಲೀಜ್ ವಿಸ್ತರಣೆಯಾಗಬೇಕಿದ್ದು, ನೇಕಾರ ಸಮುದಾಯದಲ್ಲಿನ ನಿಗಮಗಳೆರಡನ್ನು ಒಗ್ಗೂಡಿಸಿ ಅಭಿವೃದ್ಧಿಪಡಿಸುವ ಯೋಚನೆಯಲ್ಲಿದ್ದೇವೆ. ಅವೆಲ್ಲವುಗಳ ಪರಿಹಾರಕ್ಕೆ ನೇಕಾರರ ಸಹಕಾರ ಬೇಕಿದೆ ಎಂದರು. ತಮ್ಮ ಹೋರಾಟದ ಅವಧಿ 8-10 ದಿನಗಳಿರಲಿ ಬದಲಾಗಿ ತಿಂಗಳಾನುಗಟ್ಟಲೆ ನಡೆಸುವದು ಅಸಂಬದ್ಧವಾದುದು. ಕಾನೂನಾತ್ಮಕ ವಿಚಾರಣೆಯೊಂದಿಗೆ ಹೋರಾಟ ಕೈಗೊಂಡಲ್ಲಿ ಸೂಕ್ತವೆಂದು ನೇಕಾರರಿಗೆ ಸಚಿವರು ಕಿವಿಮಾತು ಹೇಳಿದರು.

Advertisement

ಆಡಿಟ್ ಆಗಿಲ್ಲ: ಕಳೆದ 2019 ರಿಂದ ಕೆಎಚ್‌ಡಿಸಿ ನಿಗಮದಲ್ಲಿ ಲೆಕ್ಕ ಪರಿಶೋಧನೆಯಾಗಿಲ್ಲ. ಇದೀಗ ನಡೆಸಲಾಗುತ್ತಿದ್ದು, ಇನ್ನೂ 3 ವರ್ಷಗಳದ್ದು ಬಾಕಿಯಿದ್ದು, ಶೀಘ್ರ ಮುಗಿಸಲಾಗುವದು. ಲಾಭ, ಹಾನಿ, ಹಗರಣ ಸೇರಿದಂತೆ ಯಾವದೇ ಮಾಹಿತಿ ದೊರೆತಿಲ್ಲ. ಒಟ್ಟಾರೆ ಲೋಪದೋಷಗಳು ತುಂಬಾಯಿದ್ದು, ನೂರಾರು ಕೋಟಿ ರೂ.ಗಳಷ್ಟು ನಿಗಮ ಹಾನಿಯಾಗಿದೆ ಎಂದು ಸ್ವತಃ ಸಚಿವರೇ ಒಪ್ಪಿಕೊಂಡ ಪ್ರಸಂಗ ನಡೆಯಿತು.

2 ಎಕರೆ ನಿವೇಶನ: ಸರ್ಕಾರದಿಂದ ಶೀಘ್ರವೇ 2 ಎಕರೆಯಷ್ಟು ಭೂಮಿ ಪಡೆದು ನೇಕಾರರ ಶೆಡ್‌ದೊಂದಿಗೆ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ನಿವೇಶನ ಹಂಚಿಕೆ ಮಾಡಲಾಗುವದು. ಸದ್ಯ ಡಚ್ ಕಾಲನಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ಸಿಟಿಎಸ್ ಉತಾರೆ ಆಗುವದಿಲ್ಲವೆಂದು ಸ್ಪಷ್ಟಪಡಿಸಿದ್ದಲ್ಲದೆ ಅರಣ್ಯ ಇಲಾಖೆಯದ್ದಾಗಿದ್ದು, ಸರ್ಕಾರ ಮಟ್ಟದಲ್ಲಿ ಪರಿವರ್ತನೆ ನಂತರ ಮುಂದಿನ ದಿನಗಳಲ್ಲಿ ದೊರೆಯುವದೆಂದರು.

ರಬಕವಿ-ಬನಹಟ್ಟಿಗೆ ಬಂಪರ್ ಕೊಡುಗೆ: ಬರುವ ಬಜೆಟ್‌ನಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ನೇಕಾರಿಗೆ ಬಂಪರ್ ಕೊಡುಗೆ ನೀಡುವದಾಗಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು. 55 ಸಾವಿರಕ್ಕೂ ಅಧಿಕ ನೇಕಾರರು ತಾಲೂಕಿನಲ್ಲಿದ್ದಾರೆ. ಜವಳಿ ಪಾರ್ಕ್ ಸೇರಿದಂತೆ ಕೋನ್ ಡೈಯಿಂಗ್‌ಗಳ ಅವಶ್ಯಕತೆಯಿದೆ. ಪ್ರಸಕ್ತ ವರ್ಷ ಹೆಚ್ಚಿನ ಕಾಳಜಿಯೊಂದಿಗೆ ಜವಳಿ ಕ್ಷೇತ್ರದ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next