ಒಂದು ಕಾಡಿನಲ್ಲಿ ಜಿಂಕೆ, ಆಮೆ, ಕಾಗೆ ಮತ್ತು ಇಲಿ ವಾಸಿಸುತ್ತಿದ್ದವು. ಆ ನಾಲ್ವರೂ ಪ್ರಾಣಸ್ನೇಹಿತರು. ಯಾವಾಗಲೂ ಒಟ್ಟಿಗೇ ಆಡಿ, ಕುಣಿದು ನಲಿಯುತ್ತಿದ್ದವು. ಹೀಗಿರುವಾಗ ಒಂದು ದಿನ ಅವುಗಳಿಗೆ ಆಪತ್ತೂಂದು ಎದುರಾಯಿತು. ಆ ನಾಲ್ವರೂ ಒಟ್ಟಿಗೆ ಇದ್ದ ಸಮಯದಲ್ಲಿ ಬೇಟೆಗಾರನೊಬ್ಬ ಅವುಗಳ ಮೇಲೆ ದಾಳಿ ಮಾಡಿದ. ಈ ಹಠಾತ್ ದಾಳಿಗೆ ಹೆದರಿದ ಕಾಗೆ ಹಾರಿಹೋಯಿತು. ಜಿಂಕೆ ಮತ್ತು ಇಲಿ ಓಡಿಹೋಗಿ ತಪ್ಪಿಸಿಕೊಂಡವು. ಪಾಪ, ನಿಧಾನ ಜೀವಿಯಾದ ಆಮೆ ಬೇಟೆಗಾರನ ಕೈಗೆ ಸಿಕ್ಕಿಹಾಕಿಕೊಂಡಿತು. ಜಿಂಕೆಯನ್ನು ಹಿಡಿಯಲಾಗಲಿಲ್ಲವಲ್ಲ ಎಂಬ ಬೇಸರದಲ್ಲಿ ಬೇಟೆಗಾರ ಆಮೆಯನ್ನು ಚೀಲದಲ್ಲಿ ಬಿಗಿದು ತುಂಬಿಕೊಂಡು ಹೊರಟ.
ಸ್ನೇಹಿತನಿಗಾದ ಗತಿಯನ್ನು ನೋಡಿ ಉಳಿದ ಮೂವರಿಗೂ ಬೇಸರವಾಯ್ತು. ಕಾಗೆ ಹೇಳಿತು, “ಬೇಟೆಗಾರ ಜಾಸ್ತಿ ದೂರ ಹೋಗಿರಲಿಕ್ಕಿಲ್ಲ. ಬೇಗ ಏನಾದರೊಂದು ಉಪಾಯ ಮಾಡಿ, ಆಮೆಯನ್ನು ಬಿಡಿಸಿಕೊಳ್ಳೋಣ’ ಹಾರಿ ಹೋಗಿ ಬೇಟೆಗಾರ ಎಲ್ಲಿ ಹೋಗುತ್ತಿದ್ದಾನೆಂದು ನೋಡಿ , ಉಳಿದಿಬ್ಬರಿಗೆ ಮಾಹಿತಿ ನೀಡಿತು. ಬೇಟೆಗಾರ ಹೋಗುವ ದಾರಿಯಲ್ಲೇ ಸ್ವಲ್ಪ ದೂರದಲ್ಲಿ ಜಿಂಕೆ ಸತ್ತಂತೆ ಬಿದ್ದುಕೊಂಡಿತು. “ಅಯ್ಯಯ್ಯೋ, ದೊಡ್ಡ ಜಿಂಕೆ ತಪ್ಪಿ ಹೋಯ್ತಲ್ಲ’ ಎಂದು ಬೇಸರದಲ್ಲಿದ್ದ ಬೇಟೆಗಾರನಿಗೆ ದಾರಿಯಲ್ಲಿ ಬಿದ್ದಿರುವ ಜಿಂಕೆಯನ್ನು ನೋಡಿ ಸಂತೋಷವಾಯಿತು. ಕೈಯಲ್ಲಿದ್ದ ಚೀಲವನ್ನು ಎಸೆದು ಜಿಂಕೆಯ ಬಳಿ ಹೋದ. ತತ್‌ಕ್ಷಣ ಜಿಂಕೆ ಮೇಲಕ್ಕೆದ್ದು ಓಡತೊಡಗಿತು. ಚಕಿತನಾದ ಬೇಟೆಗಾರನೂ ಜಿಂಕೆಯ ಹಿಂದೆ ಓಡಿದ. ಆದರೆ ಜಿಂಕೆಯ ವೇಗದ ಮುಂದೆ ಬೇಟೆಗಾರನ ಕಾಲು ಸೋತಿತು. ಸಪ್ಪೆ ಮೋರೆ ಹಾಕಿಕೊಂಡು ಚೀಲ ಎಸೆದಿದ್ದ ಕಡೆಗೆ ವಾಪಸಾದ.
ಅಷ್ಟರಲ್ಲಿ ಇಲಿ ತನ್ನ ಹರಿತವಾದ ಹಲ್ಲುಗಳಿಂದ ಆಮೆಯನ್ನು ಬಂಧಿಸಿದ್ದ ಚೀಲವನ್ನು ಕಡಿದು ತುಂಡು ತುಂಡು ಮಾಡಿಬಿಟ್ಟಿತು. ಆಮೆ ಚೀಲದಿಂದ ಹೊರಬಂದು ಬೇಗಬೇಗ ಪೊದೆಯೊಳಗೆ ಹೋಗಿ ಅವಿತುಕೊಂಡಿತು. ಬೇಟೆಗಾರ ವಾಪಸ್ ಬಂದು ನೋಡುವಾಗ ಚೀಲ ಹರಿದು ಬಿದ್ದಿತ್ತು. ಆಮೆ ತಪ್ಪಿಸಿಕೊಂಡಿತ್ತು. ಆತ ಕೈ ಕೈ ಹಿಸುಕಿಕೊಂಡು ಊರಿನತ್ತ ಮರಳಿದ.
ಆಮೆ, ಇಲಿ, ಜಿಂಕೆ ಮತ್ತು ಕಾಗೆ ಪ್ರಾಣಸ್ನೇಹಿತರಾಗಿ ಆನಂದದಿಂದ ಮೊದಲಿನಂತೆ ಆಡಿಕೊಂಡಿದ್ದವು.
ನಿರ್ಮಲಾ ದೇವಿ