ಹೊಸಕೋಟೆ: ನಗರದಲ್ಲಿ ಜನರು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೇ ಜೀವನ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಬಹುತೇಕ ಭರವಸೆಗಳು ಇದುವರೆವಿಗೂ ಈಡೇರಿಲ್ಲ. 2012ರಲ್ಲಿ ಪ್ರಾರಂಭಗೊಂಡ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಶೇ. 90ರಷ್ಟು ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ಮುಕ್ತಾಯಗೊಂಡಿದ್ದು ಶೇ. 25ರಷ್ಟು ಪ್ರದೇಶದಲ್ಲಿ ಹಾಳಾದ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಬಾಕಿ ಉಳಿದಿದೆ.
2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ನೀಡಿದ್ದ ಭರವಸೆ ಇದುವರೆವಿಗೂ ಈಡೇರಿಲ್ಲ. 2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಒಳಚರಂಡಿ ಕಾಮಗಾರಿಗೆ ಕೇಂದ್ರ ಸರಕಾರದ ಅನುದಾನದ ಬಿಡುಗಡೆಯಲ್ಲಿ ವಿಳಂಭವಾಗುತ್ತಿರುವ ಕಾರಣ ಕಾಮಗಾರಿ ಪೂರ್ಣಗೊಳಿಸಲು ಅಡಚಣೆಯಾಗಿದೆ ಎಂದು ಹೇಳುವ ಮೂಲಕ ವಿಳಂಭಕ್ಕೆ ಸಬೂಬು ಹೇಳಲಾಗಿತ್ತು.
ಸುಮಾರು 3 ವರ್ಷಗಳ ಹಿಂದೆಯೇ ನಗರದ ಚಿಕ್ಕಕೆರೆ ಅಂಗಳದಲ್ಲಿ ಹಾಗೂ ಪೆತ್ತನಹಳ್ಳಿ ಬಳಿ ನಿರ್ಮಿಸುತ್ತಿರುವ ಕೊಳಚೆ ನೀರು ಶುದ್ಧೀಕರಣ ಘಟಕಗಳು ಇನ್ನೂ ಪೂರ್ಣಗೊಂಡಿಲ್ಲ. ಒಂದು ವರ್ಷದ ಹಿಂದೆ ನಿಲುಗಡೆಯಾಗಿದ್ದ ಕಾಮಗಾರಿಯನ್ನು ಇದೀಗ 1 ತಿಂಗಳಿಂದ ಪುನರಾರಂಭಿಸಲಾಗಿದೆ. ಸಂಪೂರ್ಣವಾಗಿ ಅಗತ್ಯವಾದ ನೀರು ಸಂಗ್ರಹಣೆ ವ್ಯವಸ್ಥೆ, ಶುದ್ಧಿಕರಣ ಯಂತ್ರಗಳ ಅಳವಡಿಕೆ ಮಾಡಲು ಇನ್ನೂ 6 ತಿಂಗಳುಗಳಿಂದ 1 ವರ್ಷಗಳ ಸಮಯ ಬೇಕಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸುತ್ತಾರೆ. ಇದರಿಂದಾಗಿ ನಿವಾಸಿಗಳೂ ಇನ್ನೂ ಕನಿಷ್ಠ 1 ವರ್ಷಗಳ ಕಾಲ ಸಮಸ್ಯೆಯೊಂದಿಗೆ ಜೀವನ ನಡೆಸಬೇಕಾದ್ದು ಅನಿವಾರ್ಯವಾಗಲಿದೆ.
ಕುಡಿಯುವ ನೀರು: ಹಿಂದಿನ ಚುನಾವಣೆ ಸಂದರ್ಭದಲ್ಲಿ 4-5 ದಿನಗಳಿಗೊಮ್ಮೆ ಸರಬರಾಜಾಗುತ್ತಿರುವ ನೀರಿನ ಅವಧಿಯನ್ನು ಕಡಿಮೆ ಮಾಡಿ 2 ದಿನಗಳಿಗೊಮ್ಮೆ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ 120 ಕೊಳವೆಬಾವಿಗಳನ್ನು ಹೊಂದಿದ್ದರೂ ಮಳೆಯ ತೀವ್ರ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿತದಿಂದ 16 ಸಂಪೂರ್ಣ ಭತ್ತಿಹೋಗಿದ್ದು ಪ್ರಸ್ತುತ 104 ಕೊಳವೆಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ದೊಡ್ಡಕೆರೆ ಅಂಗಳದಲ್ಲಿರುವ 46 ಕೊಳವೆಬಾವಿಗಳನ್ನು ಮಾತ್ರ ಆಶ್ರಯಿಸಬೇಕಾಗಿದ್ದು ಪ್ರಸ್ತುತ 8-10 ದಿನಗಳಿಗೊಮ್ಮೆ ನೀರು ಒದಗಿಸಲಾಗುತ್ತಿದೆ. ಇದರೊಂದಿಗೆ ವಿದ್ಯುತ್ ಸರಬರಾಜಿನಲ್ಲೂ ಸಹ ಅಡಚಣೆಯಾಗುತ್ತಿರುವ ಕಾರಣ ನಗರಸಭೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಿವಾಸಿಗಳು ಟ್ಯಾಂಕರ್ ಮೂಲಕ ನೀರು ಪಡೆಯುವುದು ಸಾಮಾನ್ಯವಾಗುತ್ತಿದ್ದು ನಗರಸಭೆ ಸಿಬ್ಬಂದಿ ನೀರು ಸರಬರಾಜು ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎಂಬ ದೂರುಗಳು ಸಾಮಾನ್ಯವಾಗುತ್ತಿವೆ.
2011ರ ಜನಗಣತಿಯಂತೆ ನಗರದಲ್ಲಿ 56511 ಜನಸಂಖ್ಯೆಯಿದ್ದು ಪ್ರತಿಯೊಬ್ಬರಿಗೆ ಪ್ರತಿದಿನ 125 ಲೀ.ಗಳಷ್ಟು ನೀರನ್ನು ನೀಡಬೇಕಾಗಿದೆ. ಇದರಂತೆ ಪ್ರತಿದಿನ 70.70 ಲಕ್ಷ ಲೀ.ಗಳನ್ನು ಒದಗಿಸಬೇಕಾಗಿದ್ದು ಕೇವಲ 37.2 ಲಕ್ಷ ಲೀ.ಗಳಷ್ಟೇ ಲಭ್ಯವಿದ್ದು 33.50 ಲಕ್ಷ ಲೀ.ಗಳಷ್ಟು ಕೊರತೆಯಿದೆ. ಇದನ್ನು ನಿವಾರಿಸಲು ಹೆಚ್ಚಿನ ಕೊಳವೆಬಾವಿಗಳನ್ನು ಕೊರೆಯಬೇಕಾಗಿದ್ದರೂ ಮಳೆ ಬಿದ್ದಲ್ಲಿ ಮಾತ್ರ ಅಂತರ್ಜಲ ಮಟ್ಟ ವೃದ್ಧಿಗೊಂಡು ನೀರಿನ ಪ್ರಮಾಣ ಸುಧಾರಣೆಯಾಗಬೇಕಾಗಿದೆ.
ಆದಾಗ್ಯೂ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಇತರೆ ತಾಲೂಕು ಕೇಂದ್ರಗಳಿಗೆ ಹೋಲಿಸಿದಲ್ಲಿ ನಗರದಲ್ಲಿ ಇದುವರೆವಿಗೂ ಯಾವುದೇ ತೀವ್ರ ಸಮಸ್ಯೆ ಉದ್ಭವಿಸಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.