Advertisement

ಹಿಂದಿ ಹೇರಿಕೆ ವಿರೋಧಿಸಲು 9 ಮುಖ್ಯಮಂತ್ರಿಗಳಿಗೆ ಪತ್ರ

11:36 AM Jul 10, 2017 | |

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮುಂದುವರಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಈ ಹೋರಾಟಕ್ಕೆ ಬೆಂಬಲ ಕೋರಿ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ರಾಜ್ಯಗಳ ಮುಖಂಡರಿಗೆ ಪತ್ರ ಬರೆದಿದೆ.

Advertisement

ಮೆಟ್ರೋ ಯೋಜನೆಗೆ ಆರ್ಥಿಕ ನೆರವು ನೀಡಿದೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಫ‌ಲಕ, ಧ್ವನಿ ಆಧಾರಿತ ಪ್ರಕಟಣೆಗಳ ಮೂಲಕ ಉದ್ದೇಶಪೂರ್ವಕವಾಗಿ ಹಿಂದಿ ಹೇರಲು ಮುಂದಾಗಿದೆ. ಹಿಂದಿಯೇತರ ರಾಜ್ಯಗಳು ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌, ಒರಿಸ್ಸಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌, ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ ಸೇರಿದಂತೆ ಮತ್ತಿತರ ರಾಜ್ಯಗಳ ಪ್ರಮುಖ ನಾಯಕರಿಗೆ ಬೆಂಬಲ ಕೋರಿ ಪತ್ರ ಬರೆಯಲಾಗಿದೆ.

ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ; ಹಿಂದಿಯೇತರ ರಾಜ್ಯಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಈ ಹೇರಿಕೆ ಇದೆ. ಆದ್ದರಿಂದ ಈ ಧೋರಣೆ ವಿರುದ್ಧ ಕೈಜೋಡಿಸಬೇಕು ಎಂದು ಕೋರಿದ್ದಾರೆ. ಅಲ್ಲದೆ, ಈ ಸಂಬಂಧ ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ನಗರದಲ್ಲಿ ಸಭೆ ಕರೆಯಲಾಗಿದ್ದು, ಹಿಂದಿಯೇತರ ರಾಜ್ಯಗಳ ನಾಯಕರನ್ನೂ ಆಹ್ವಾನಿಸಲಾಗಿದೆ. ಇದಕ್ಕೆ ಪೂರಕ ಸ್ಪಂದನೆ ದೊರಕಿದೆ ಎಂದು ಕರವೇ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧ ಇಲ್ಲದಿದ್ದರೂ 1976ರ ಅಧಿಕೃತ ಭಾಷಾ ಕಾಯ್ದೆ ಸೆಕ್ಷನ್‌ 11ರಡಿ ಹಿಂದಿ ಹೇರಿಕೆಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಕೇಂದ್ರವು ನೂರಾರು ಕೋಟಿ ಖರ್ಚು ಮಾಡಿ, ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಪ್ರತಿಷ್ಠಾಪಿಸಲು ಹೊರಟಿದೆ. ಈ ಸಂಬಂಧ ಈಗಾಗಲೇ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಆಂದೋಲನ ನಡೆಯುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯೂ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ನಿರಂತರ ಅಭಿಯಾನ ನಡೆದಿದ್ದು, ದೇಶದ ಗಮನಸೆಳೆದಿದೆ. ಭಾಷಾ ಸಮಾನತೆ ನೆಲೆಗೊಳ್ಳಬೇಕು ಎಂಬುದು ಕರವೇ ಆಗ್ರಹ, ದೇಶದಲ್ಲಿ ಭಾಷಾ ಸಮಾನತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಆಂದೋಲನಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಮತ್ತು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಬೇಕು.

ಅಷ್ಟಕ್ಕೂ ನಮ್ಮ ವಿರೋಧ ಹಿಂದಿ ವಿರುದ್ಧವಲ್ಲ. ಹಿಂದಿಯೂ ಇತರ ಎಲ್ಲ ಪ್ರಾದೇಶಿಕ ಭಾಷೆಗಳ ಹಾಗೆ ಒಂದು ಪ್ರಾದೇಶಿಕ ಭಾಷೆ. ದೇಶದ ಹೆಚ್ಚು ಸಂಖ್ಯೆಯ ಜನ ಅದನ್ನು ಬಳಸುತ್ತಾರೆ ಅಷ್ಟೇ. ಇದೇ ಕಾರಣಕ್ಕೆ ಎಲ್ಲರ ಮೇಲೂ ಹಿಂದಿ ಹೇರುವುದು ಸರಿ ಅಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರೂ ಈ ಹಿಂದಿ ವಿರೋಧಿ ಆಂದೋಲನವನ್ನು ಬೆಂಬಲಿಸಬೇಕು ಎಂದು ಪತ್ರದಲ್ಲಿ ಟಿ.ಎ. ನಾರಾಯಣಗೌಡ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next