Advertisement

ಮೊದಲು ನಮ್ಮೊಳಗಿನ ಭ್ರಷ್ಟತೆ ಹೋಗಲಿ

12:09 PM Dec 29, 2017 | |

ಬೆಂಗಳೂರು: “ಹೊರಗಿನ ಭ್ರಷ್ಟಾಚಾರ ನಿವಾರಣೆ ಮಾಡುವ ಮೊದಲು, ನಮ್ಮೊಳಗಿರುವ ಭ್ರಷ್ಟತೆ ಹೋಗಲಾಡಿಸಬೇಕು,’ ಎಂದು ನಟ ಉಪೇಂದ್ರ ಹೇಳಿದ್ದಾರೆ. ನಗರದ ಗಾಂಧಿಭವನದಲ್ಲಿ ಗುರುವಾರ ಪತ್ರಕರ್ತ ಸದಾಶಿವ ಶೆಣೈ ರಚನೆಯ “ಉಪ್ಪಿ ಅನ್‌ಲಿಮಿಟೆಡ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಭ್ರಷ್ಟಾಚಾರ ಹೋಗಲಾಡಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಆ ನಿಟ್ಟಿನಲ್ಲಿ ಸರಿಯಾದ ಪ್ರಯತ್ನ ಮಾಡುವುದಿಲ್ಲ. ಆದ್ದರಿಂದ ಹೊರಗಿನ ಭ್ರಷ್ಟಾಚಾರ ನಿವಾರಿಸುವ ಮುನ್ನ ನಮ್ಮಲ್ಲಿರುವ ಭ್ರಷ್ಟತೆ ದೂರ ಮಾಡುವ ಅಗತ್ಯವಿದೆ ಎಂದರು.

“ಏನೇನೂ ಇಲ್ಲದೆಯೇ ನಾನೊಂದು ಪಕ್ಷ ಸ್ಥಾಪನೆ ಮಾಡಿದ್ದೇನೆ. ಅದು ಜನರಿಗಾಗಿ ಮಾಡಿದ ಪಕ್ಷ. ರಾಜಕೀಯದಲ್ಲಿ “ರಾಜ’ನನ್ನು ತೆಗೆದು ಆ ಜಾಗದಲ್ಲಿ “ಪ್ರಜಾ’ ಸೇರಿಸಿದ್ದೇನೆ. ಅದನ್ನು ಮುನ್ನಡೆಸುವ ಜವಾಬ್ದಾರಿ ಪ್ರಜ್ಞಾವಂತರದ್ದು. ನನಗೆ ಈಗ 224 ಒಳ್ಳೆಯ ಸೈನಿಕರು ಬೇಕಾಗಿದ್ದಾರೆ. ಆ ಮೂಲಕ ನನ್ನೊಳಗಿನ ಮತ್ತು ಪ್ರಜ್ಞಾವಂತರ ವಿಚಾರಧಾರೆಗಳನ್ನು ಸಾರುವ ಪ್ರಯತ್ನ ಮಾಡುತ್ತಿದ್ದೇನೆ,’ ಎಂದು ಹೇಳಿದರು.

ವಿಚಾರ ಪೂಜೆಯಾಗಲಿ: “ಕ್ಷಣ ಕ್ಷಣಕ್ಕೂ ಕಲಿಯುವುದು ಸಾಕಷ್ಟಿರುತ್ತದೆ. ಆದರೆ, ಕಲಿಯುವ ಮನಸ್ಸು ಇರಬೇಕಷ್ಟೇ. ಭಗವದ್ಗೀತೆ ಹೇಳಿದ ಕೃಷ್ಣನನ್ನು ನಾವು ದೇವರಾಗಿ ಕೂರಿಸಿದ್ದೇವೆ. ಆದರೆ, ಅದೇ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಮರೆತಿದ್ದೇವೆ,’ ಎಂದು ಬೇಸರ ವ್ಯಕ್ತಪಡಿಸಿದ ಉಪೇಂದ್ರ, “ಇತ್ತೀಚಿನ ದಿನಗಳಲ್ಲಿ ಪಕ್ಷ ಪೂಜೆ ಹಾಗೂ ವ್ಯಕ್ತಿ ಪೂಜೆ ಬ್ರಾಂಡ್‌ ಆಗಿಬಿಟ್ಟಿದೆ. ಇದೆಲ್ಲವನ್ನೂ ಬಿಟ್ಟು ವಿಚಾರ ಪೂಜೆ ಆಗಬೇಕಿದೆ.

ಪ್ರಜಾಕೀಯ ಪಕ್ಷ ಕಟ್ಟಿರುವುದು ನನಗೊಂದು ದೊಡ್ಡ ಸವಾಲು,’ ಎಂದರು. ಕೃತಿ ವಿಮರ್ಶೆ ಮಾಡಿ ಮಾತನಾಡಿದ ಪತ್ರಕರ್ತ ಜೋಗಿ, “ಉಪೇಂದ್ರ ಅವರು ಸಮಯ ಸಿಕ್ಕಾಗೆಲ್ಲಾ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ. ಅದು ಒಳ್ಳೆಯ ಬೆಳವಣಿಗೆ.

Advertisement

ಡಾ.ರಾಜಕುಮಾರ್‌ ಅವರನ್ನು ಬಿಟ್ಟರೆ ಹೆಚ್ಚು ಪುಸ್ತಕಗಳು ಬಂದಿರುವುದು ಉಪೇಂದ್ರ ಅವರ ಕುರಿತು. ಸದಾಶಿವ ಶೆಣೈ ಬರೆದಿರುವ “ಉಪ್ಪಿ ಅನ್‌ಲಿಮಿಟೆಡ್‌’ ಪುಸ್ತಕದಲ್ಲಿ ಉಪೇಂದ್ರ ಅವರ ಯೌವ್ವನದ ಜೀವನ ಹೇಗಿತ್ತು ಎಂಬುದನ್ನು ಹೇಳಲಾಗಿದೆ.

ಉಪೇಂದ್ರ ಅವರು ಓದುವಾಗ ಕಾಲೇಜು ಚುನಾವಣೆಯಲ್ಲಿ ಸ್ಪರ್ಧಿಸಿ ಆರು ಮತಗಳಿಂದ ಸೋಲು ಅನುಭವಿಸುತ್ತಾರೆ. ಅವರು ಎಲ್‌ಡಿ (ಲವ್‌ ಡಿಸಾಪಾಯಿಂಟ್‌) ಅಂತಾನೇ ಗುರುತಿಸಿಕೊಂಡವರು. ಪುಡಿ ರೌಡಿಯೊಬ್ಬನ ಪ್ರೀತಿಯ ಯಶಸ್ಸಿಗೆ ಆಗಲೇ ಲವ್‌ಲೆಟರ್‌ ಬರೆದುಕೊಟ್ಟ ಬಗ್ಗೆ ಕೂಡ ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕರಾದ ಟಿ.ಎನ್‌.ಸೀತಾರಾಂ, ಇಂದ್ರಜಿತ್‌ ಲಂಕೇಶ್‌, ಲೇಖಕ ಸದಾಶಿವ ಶೆಣೈ, ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ಜಿ.ಎಂ.ಕುಮಾರ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್‌ ದಿನೇಶ್‌ ಮತ್ತಿತರರು ಇದ್ದರು.

ನನ್ನ ತಲೆಯೊಂದು ಖಾಲಿ ಪಾತ್ರೆ: “ನನ್ನ ಜೀವನ ಏನೂ ಇಲ್ಲದೆ ಶುರುವಾಗಿದ್ದರಿಂದಲೇ ಇಂದು ಈ ಮಟ್ಟಕ್ಕೆ ಬಂದಿದ್ದೇನೆ. ಕಾಲೇಜು ದಿನಗಳಲ್ಲಿ ನಾನು ಬರೆಯುತ್ತಿದ್ದ ಕವನ ಮತ್ತು ಹಾಡುಗಳನ್ನು ಓದಿದವರು ಮೆಚ್ಚುಗೆ ವ್ಯಕ್ತಪಡಿಸಿದರೆ ಖುಷಿಯಾಗುತ್ತಿತ್ತು. ಆ ದಿನಗಳಲ್ಲಿ ಏನೂ ಇಲ್ಲದ್ದಾಗ ಸಿಕ್ಕ ವಸ್ತುಗಳೇ ಸಂತೋಷ ಕೊಡುತ್ತಿದ್ದವು.

ನನ್ನ ತಲೆಯಲ್ಲಿ ಸಾಕಷ್ಟು ಕಲ್ಪನೆಗಳಿವೆ ಎಂದು ಎಲ್ಲರೂ ಹೇಳುತ್ತಾರೆ. ನಿಜ ಹೇಳುವುದಾದರೆ, ನನ್ನ ತಲೆಯಲ್ಲಿ ಏನೂ ಇಲ್ಲ. ಅದೊಂದು ಖಾಲಿ ಪಾತ್ರೆ. ಒಂದು ಖಾಲಿ ಪಾತ್ರೆಯಲ್ಲಿ ಏನೇ ಹಾಕಿದರೂ ಅದು ತುಂಬಿಸಿಕೊಳ್ಳುವಂತೆ ಖಾಲಿ ಇರುವ ನನ್ನ ತಲೆಯಲ್ಲಿ ಯಾರು ಏನೇ ಹೇಳಿದರೂ ತುಂಬಿಸಿಕೊಳ್ಳುತ್ತೇನೆ,’ ಎಂದು ಉಪೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next