ಬೆಂಗಳೂರು: ಮಹದಾಯಿ ನದಿ ನೀರಿಗೆ ಆಗ್ರಹಿಸಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿರುವ ರೈತ ಸೇವಾ ಕರ್ನಾಟಕ ಸಂಘಟನೆ ಕಾರ್ಯಕರ್ತರು “ನೀರು ಕೊಡಿ ಇಲ್ಲವೇ, ದಯಾ ಮರಣಕ್ಕೆ ಅವಕಾಶ ಕೊಡಿ’ ಧರಣಿಯನ್ನು ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆರಂಭಿಸಿದ್ದಾರೆ.
ಧರಣಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ರೈತರು ಮಹದಾಯಿ ನದಿಯಲ್ಲಿ ಕುಡಿಯುವ ನೀರಿನ ಪಾಲು ಕೇಳಿ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನ್ಯಾಯಸಿಗದಿರುವುದು ಅತ್ಯಂತ ನೋವಿನ ವಿಚಾರ ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆಯ ಪ್ರಧಾನಿಯಾಗಿರುವ ನರೇಂದ್ರ ಮೋದಿ ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶಿಸಿ ಎರಡೂ ರಾಜ್ಯಗಳ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬಹುದಿತ್ತು.ಆದರೆ, ಚುನಾವಣೆ ವೇಳೆ ರಾಜ್ಯದ ಜನರ ನೆನಪು ಮಾಡಿಕೊಳ್ಳುವ ಮೋದಿ ನಂತರ ರಾಜ್ಯವನ್ನು ನಿರ್ಲಕ್ಷಿಸಿಬಿಡುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆರಾಜ್ಯ ಗೋವಾ ಹಗೆತನದ ಧೋರಣೆ ಬಿಟ್ಟು, ಭಾÅತೃತ್ವ ಭಾವನೆಯಿಂದ ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲು ಔದಾರ್ಯ ತೋರಬೇಕಿತ್ತು. ಆದರೆ, ಗೋವಾದ ಹಠ ಮುಂದುವರಿಸಿದೆ. ಜತೆಗೆ, ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಹೊಣೆಗಾರಿಕೆ ವೈಫಲ್ಯದಿಂದ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಆಗಸ್ಟ್ 21ರಂದು ಬರಲಿರುವ ನ್ಯಾಯಧೀಕರಣದ ತೀರ್ಪು ರಾಜ್ಯದ ಪರವಾಗಿರಲಿ ಎಂದು ಆಶಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ವಿರೇಶ್ ಸೊರಬದಮಠ ಮಾತನಾಡಿ, ಮಹದಾಯಿ ನದಿ ನೀರಿನಲ್ಲಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತವಾಗಿ ಪಾಲಿಗೆ ಆಗ್ರಹಿಸಿ ನಾಲ್ಕು ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಪಕ್ಷಾತೀತವಾದ ಹೋರಾಟ ಇದಾಗಿದೆ.
ಮಹದಾಯಿಯಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲುಕೊಡಿಸುವಲ್ಲಿ ಎಲ್ಲ ಪಕ್ಷಗಳು ವೈಫಲ್ಯ ಅನುಭವಿಸಿವೆ. ಹೀಗಾಗಿ ನಮಗೆ ನ್ಯಾಯವೂ ಮಾತ್ರ ಮರೀಚಿಕೆಯಾಗಿದೆ. ಪ್ರಧಾನ ಮಂತ್ರಿ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ. ಹೀಗಾಗಿ, ಪ್ರಾಣ ತ್ಯಾಗಕ್ಕೂ ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.
ನ್ಯಾಯಧೀಕರಣದ ತೀರ್ಪು ರಾಜ್ಯದ ಪರವಾಗಿ ಬಂದರೆ ಧರಣಿ ಅಂತ್ಯಗೊಳಿಸುತ್ತೇವೆ. ಇಲ್ಲದಿದ್ದರೆ ರಾಷ್ಟ್ರಪತಿಗಳು ದಯಾಮರಣ ನೀಡುವತನಕ ಹೋರಾಟ ಕೈ ಬಿಡುವುದಿಲ್ಲ ಎಂದು ತಿಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಸೇರಿ ಹಲವು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.