ಚೆನ್ನೈ: ತಿರುಪತಿ ಲಡ್ಡು ಅಪವಿತ್ರ ವಿಚಾರದ ತೀವ್ರತೆ ತಣ್ಣಗಾದರೂ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್(Pawan Kalyan) ಮಾತ್ರ ತಮ್ಮ ವ್ರತ ಮತ್ತು ಹೇಳಿಕೆಗಳಿಂದ ನಿತ್ಯವೂ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಅವರು ಪರೋಕ್ಷವಾಗಿ ತಮಗೆ ನೀಡಿದ ಎಚ್ಚರಿಕೆಗೆ ತಮಿಳು ನಾಡು ಡಿಸಿಎಂ ಉದಯನಿಧಿ ಸ್ಟಾಲಿನ್(Udhayanidhi Stalin) ಶುಕ್ರವಾರ(ಅ4 ) ರಂದು ನಗು ಬೀರಿ ನಾಲ್ಕೇ ಪದಗಳ, ಕಾದು ನೋಡೋಣ…(Let’s wait and see…) ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಉದಯನಿಧಿ ಅವರು ನೀಡಿದ್ದ ‘ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ ಅದನ್ನು ನಾಶ ಮಾಡಬೇಕು” ಎಂಬ ವಿವಾದಕ್ಕೆ ಗುರಿಯಾಗಿದ್ದ ಹೇಳಿಕೆಗೆ ಪವನ್ ಕಲ್ಯಾಣ್ ಅವರು ಗುರುವಾರ ತಿರುಪತಿಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಪರೋಕ್ಷವಾಗಿ ಹೆಸರು ಉಲ್ಲೇಖಿಸದೆ ಆಕ್ರೋಶ ಹೊರ ಹಾಕಿದ್ದರು.
‘ಸನಾತನ ಧರ್ಮ’ ಒಂದು ವೈರಸ್‌ನಂತೆ ಅದನ್ನು ನಾಶಪಡಿಸುತ್ತೇವೆ ಎಂದು ಹೇಳಬೇಡಿ. ಯಾರೇ ಹೇಳಿದರೂ ಹೇಳಲಿ.ನೀವು ಸನಾತನ ಧರ್ಮವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಯಾರಾದರೂ ಪ್ರಯತ್ನಿಸಿದರೆ ನೀವು ನಾಶವಾಗುತ್ತೀರಿ ”ಎಂದು ಕೇಸರಿ ವಸ್ತ್ರ ಧಾರಿಯಾಗಿದ್ದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹೇಳಿದ್ದರು, ಮಾತ್ರವಲ್ಲದೆ ತಾನು ಎಲ್ಲ ಧರ್ಮಗಳನ್ನು ಗೌರವಿಸುವ ಕ್ಷಮೆಯಿಲ್ಲದ ಸನಾತನಿ ಹಿಂದೂ ಎಂದು ಘೋಷಿಸಿಕೊಂಡಿದ್ದರು.
ಡಿಎಂಕೆ ವಕ್ತಾರ ಡಾ.ಸೈಯದ್ ಹಫೀಜುಲ್ಲಾ ಪ್ರತಿಕ್ರಿಯಿಸಿ “ಡಿಎಂಕೆ ಯಾವುದೇ ಧರ್ಮ ಅಥವಾ ನಿರ್ದಿಷ್ಟವಾಗಿ ಹಿಂದೂ ಧರ್ಮದ ಬಗ್ಗೆ ಮಾತನಾಡುವುದಿಲ್ಲ” ಆದರೆ ಜಾತಿ ದೌರ್ಜನ್ಯಗಳು, ಅಸ್ಪೃಶ್ಯತೆ ಮತ್ತು ಜಾತಿವಾದದ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತದೆ. ಬಿಜೆಪಿ, ಟಿಡಿಪಿ, ಮತ್ತು ಪವನ್ ಕಲ್ಯಾಣ್ ಅವರು ರಾಜಕೀಯ ಲಾಭಕ್ಕಾಗಿ ಧರ್ಮ ಮತ್ತು ಹಿಂದೂ ದೇವರುಗಳನ್ನು ಬಳಸುತ್ತಾರೆ. ಅವರೇ ನಿಜವಾದ ಶತ್ರುಗಳು. ಪವನ್ ಕಲ್ಯಾಣ್ ಹೇಳಿಕೆ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ” ಎಂದರು.