Advertisement

Actor Darshan ಭೇಟಿಗಿಲ್ಲ ಸಿನೆಮಾ ನಟರು, ರಾಜಕೀಯ ನಾಯಕರಿಗೆ ಅವಕಾಶ

11:23 PM Aug 29, 2024 | Team Udayavani |

ಬೆಳಗಾವಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದ ನಟ ದರ್ಶನ್‌ ಮೇಲೆ ಬಳ್ಳಾರಿ ಜೈಲಿನಲ್ಲಿ ಕಟ್ಟೆಚ್ಚರ ವಹಿಸಬೇಕು. ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ 24/7 ಸಿಸಿ ಕೆಮರಾ ಕಣ್ಗಾವಲು ಹಾಕಬೇಕು ಸೇರಿ ದಂತೆ ವಿವಿಧ ಕಠಿನ ನಿಯಮ ಕೈಗೊಳ್ಳುವಂತೆ ಜೈಲಿನ ಅಧೀಕ್ಷಕರಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರ ವಲಯ ಡಿಐಜಿ ಟಿ.ಪಿ. ಶೇಷ ಜ್ಞಾಪನಾ ಪತ್ರ ಬರೆದಿದ್ದಾರೆ.

Advertisement

ಜೈಲಿನಲ್ಲಿ ದರ್ಶನ್‌ನನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ಕಟ್ಟೆಚ್ಚರ ವಹಿಸಬೇಕು ಎಂಬ ಬಗ್ಗೆ ಪತ್ರ ಬರೆದಿರುವ ಡಿಐಜಿ, ದರ್ಶನ್‌ನನ್ನು ಸಾಮಾನ್ಯ ಬಂದಿಯಂತೆಯೇ ಪರಿಗಣಿಸಿ ಅಷ್ಟೇ ಸೌಲಭ್ಯ ಒದಗಿಸಬೇಕು. ಬೇರೆ ಕೈದಿಗಳ ಜತೆಗೆ ಆತ ಬೆರೆಯವಂತಿಲ್ಲ. ಪ್ರತ್ಯೇಕ ಕೊಠಡಿಯಲ್ಲಿ ಇಡಬೇಕು. ಆ ಕೊಠಡಿಯೊಳಗೆ 24/7 ಸಿಸಿ ಕೆಮರಾ ಇರಿಸಬೇಕು. ಪ್ರತಿಕ್ಷಣದ ಸಿಸಿ ಕೆಮರಾ ದೃಶ್ಯಾವಳಿ ಶೇಖರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ದರ್ಶನ್‌ ಭೇಟಿಗೆ ಪತ್ನಿ, ರಕ್ತ ಸಂಬಂಧಿ,ವಕೀಲರಿಗೆ ಮಾತ್ರ ಅವಕಾಶ ನೀಡಬೇಕು. ಚಿತ್ರರಂಗದ ಕಲಾವಿದರು, ರಾಜಕೀಯ ನಾಯಕರು, ಅಭಿಮಾನಿಗಳಿಗೆ ಅವಕಾಶ ನೀಡಬಾರದು. ದರ್ಶನ್‌ ಇರುವ ಸೆಲ್‌ ಬಳಿ ಪ್ರತ್ಯೇಕವಾಗಿ ಮುಖ್ಯ ವೀಕ್ಷಕ
ಅಧಿಕಾರಿಯನ್ನು ನಿಯೋಜಿಸಬೇಕು. ನಿತ್ಯ ಜೈಲರ್‌ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಬೀಗ ಹಾಕಬೇಕು ಹಾಗೂ ಬೀಗ ತೆರೆಯಬೇಕು. ಸೆಲ್‌ಗೆ ನಿಯೋಜಿಸುವ ಸಿಬಂದಿ ಬಾಡಿವೋರ್ನ್ ಕೆಮರಾ ಧರಿಸಿರಬೇಕು ಎಂದು ತಿಳಿಸಿದ್ದಾರೆ.

ಇತರ ಆರೋಪಿಗಳು ಶಿವಮೊಗ್ಗ, ಧಾರವಾಡ, ಹಿಂಡಲಗಾ ಜೈಲಿಗೆ
ಹುಬ್ಬಳ್ಳಿ: ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರವಾದ ಬೆನ್ನಲ್ಲೇ ಆತನ ಸಹಚರರನ್ನೂ ಶಿವಮೊಗ್ಗ, ಧಾರವಾಡ, ಮೈಸೂರು, ಹಿಂಡಲಗಾ ಜೈಲುಗಳಿಗೆ ಸ್ಥಳಾಂತರಿಸಲಾಯಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದ 6ನೇ ಆರೋಪಿ ಜಗದೀಶ್‌ ಹಾಗೂ 12ನೇ ಆರೋಪಿ ಲಕ್ಷ್ಮಣ್‌ನನ್ನು ಶಿವಮೊಗ್ಗ ಕಾರಾಗೃಹಕ್ಕೆ ಕರೆತರಲಾಯಿತು. ಕಾವೇರಿ ಬ್ಯಾರಕ್‌ನಲ್ಲಿ ಇರಿಸಲಾಗಿದ್ದು ಕ್ರಮವಾಗಿ 1072ನೇ ನಂಬರ್‌ ಹಾಗೂ 1073ನೇ ನಂಬರ್‌ ನೀಡಲಾಗಿದೆ.

Advertisement

ಇನ್ನು ಎ-9 ಆರೋಪಿ, ದರ್ಶನ ಸಹಚರ ಧನರಾಜ್‌ನನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ವಿಚಾರಣಾ ಕೈದಿಯಾದ ಈತನಿಗೆ 8629 ಸಂಖ್ಯೆ ಕೊಡಲಾಗಿದೆ. ಧನರಾಜ್‌ನನ್ನು ಧಾರವಾಡದ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದ ಪೊಲೀಸರು ಅದೇ ವಾಹನದಲ್ಲಿ ಎ-14 ಆರೋಪಿ ಪ್ರದೂಷ್‌ನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next