Advertisement

Bellary Jail ‘ಬಹಿರ್ದೆಸೆ’ ಕಷ್ಟವಾಗುತ್ತಿದೆ; ಸರ್ಜಿಕಲ್‌ ಚೇರ್‌ ಕೊಡಿ: ದರ್ಶನ್‌

01:43 AM Sep 01, 2024 | Team Udayavani |

ಬಳ್ಳಾರಿ: ನನಗೆ ಬ್ಯಾಕ್‌ಪೇನ್‌ ಇದ್ದು, ಸೆಲ್‌ನಲ್ಲಿ ಇಂಡಿಯನ್‌ ಟಾಯ್ಲೆಟ್‌ ಇರುವುದರಿಂದ ಬಹಿರ್ದೆಸೆಗೆ ಕಷ್ಟವಾಗುತ್ತಿದೆ. ಹಾಗಾಗಿ ಸರ್ಜಿಕಲ್‌ ಚೇರ್‌ ಒದಗಿಸಿ ಎಂದು ದರ್ಶನ್‌(Darshan) ಕೋರಿದ್ದಾರೆ. ಅವರ ವೈದ್ಯಕೀಯ ವರದಿ ನೋಡಿದ ಬಳಿಕ ಸರ್ಜಿಕಲ್‌ ಚೇರ್‌ ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಬೆಳಗಾವಿ ಉತ್ತರ ವಲಯ ಕಾರಾಗೃಹದ ಡಿಐಜಿ ಟಿ.ಪಿ. ಶೇಷ ಹೇಳಿದ್ದಾರೆ.

Advertisement

ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಹಿನ್ನೆಲೆಯಲ್ಲಿ ನಗರದ ಕಾರಾಗೃಹಕ್ಕೆ ಭೇಟಿ ನೀಡಿ ಅವರು ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ದರ್ಶನ್‌ಗೆ ಯಾವುದೇ ವಿಶೇಷ ಸೌಲಭ್ಯ ನೀಡಿಲ್ಲ. ದರ್ಶನ್‌ ತನ್ನ ಕೈ ನೋವಿನ ಬಗ್ಗೆಯೂ ಹೇಳಿದ್ದಾನೆ. ಟಿವಿ ಬೇಕು ಎಂದಿಲ್ಲ. ಒಂದು ವೇಳೆ ಟಿವಿ ಕೇಳಿದರೆ ನಮ್ಮ ಪರಮಾಧಿಕಾರ ಬಳಸಿ ಕೊಡುತ್ತೇವೆ ಎಂದರು.

ವಿಜಯಲಕ್ಷ್ಮೀಯಿಂದ ಜೈಲಲ್ಲಿ ದರ್ಶನ್‌ ಭೇಟಿ
ಕಳೆದ 2 ದಿನಗಳಿಂದ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮೀ ಶನಿವಾರ ಭೇಟಿಯಾದರು.

ಬೆಂಗಳೂರಿನಿಂದ ಬಂದ ವಿಜಯಲಕ್ಷ್ಮೀ ಮತ್ತು ಅವರ ಸಹೋದರಿಯ ಪತಿಗೆ ಸಂಜೆ ವೇಳೆಗೆ ಜೈಲು ಸಿಬಂದಿ ದರ್ಶನ್‌ನನ್ನು ಸಂದರ್ಶಕರ ಕೊಠಡಿಯಲ್ಲಿ ಭೇಟಿಗೆ ಅವಕಾಶ ಕಲ್ಪಿಸಿದರು. ಪತಿಯನ್ನು ನೋಡಿದ ವಿಜಯಲಕ್ಷ್ಮೀ ಕಣ್ಣೀರು ಹಾಕಿದರು. ಪತಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು ಎನ್ನಲಾಗಿದೆ.

ಬಟ್ಟೆ, ಒಣ ಹಣ್ಣು ತಂದ ಪತ್ನಿ
ವಿಜಯಲಕ್ಷೀ ಅವರು ದರ್ಶನ್‌ಗೆ ಬೇಕರಿ ತಿನಿಸು, ಸಾಬೂನು, ಬಟ್ಟೆ, ಒಣ ಹಣ್ಣು ತಂದು ಕೊಟ್ಟಿದ್ದಾರೆ. ಮಲಗಲು ಬೆಡ್‌ಶೀಟ್‌ ತಂದಿದ್ದರು. ಅದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಪಸ್‌ ತೆಗೆದುಕೊಂಡು ಹೋಗಿದ್ದಾರೆ.

Advertisement

ಬಳ್ಳಾರಿಯಲ್ಲಿ ವಿಜಯಲಕ್ಷ್ಮಿ ಬಾಡಿಗೆ ಮನೆ ಹುಡುಕಾಟ
ಬೆಂಗಳೂರಿನಿಂದ ಬಂದು ಹೋಗಲು ದೂರವಾಗುತ್ತಿರುವ ಕಾರಣ ದರ್ಶನ್‌ಗೆ ಜಾಮೀನು ಸಿಗುವವರೆಗೂ ಅವರ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಯಲ್ಲೇ ನೆಲೆಸಲು ತೀರ್ಮಾನಿಸಿದ್ದು, ಆಪ್ತರ ಮೂಲಕ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಭೇಟಿಯಾಗಲು ರಕ್ತಸಂಬಂಧಿಗಳು ಮತ್ತು ವಕೀಲರಿಗೆ ಮಾತ್ರ ಅವಕಾಶವಿದೆ ಎಂದು ಟಿ.ಪಿ. ಶೇಷ ಸ್ಪಷ್ಟಪಡಿಸಿದರು.

ದರ್ಶನ್‌ಗೆ ವಿಶೇಷ ಸೌಲಭ್ಯಕ್ಕಾಗಿ ಹಣದ ಆಮಿಷವೊಡ್ಡಿಲ್ಲ: ಶೇಷ
ಜೈಲಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಲು ಹಣದ ಆಮಿಷವೊಡ್ಡಿದ್ದಾರೆ ಎಂಬುದು ಸುಳ್ಳು. ನಾವು ಯಾವ ರಾಜಕಾರಣಿಯ ಮಾತೂ ಕೇಳುವುದಿಲ್ಲ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಬೆಳಗಾವಿ ಉತ್ತರ ವಲಯ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ಬೇರೆ ಕೈದಿಗಳಿಗಿಂತ ಹೆಚ್ಚಿನ ನಿಗಾ ವಹಿಸಲು ದರ್ಶನ್‌ಗೆ ಹೈಸೆಕ್ಯೂರಿಟಿ ಸೆಲ್‌ ನೀಡಲಾಗಿದೆ. ಸೆಲ್‌ಗೆ 3 ಸಿಸಿ ಕೆಮರಾ ಅಳವಡಿಸಲಾಗಿದೆ. ಭದ್ರತೆಗೆ ನಿಯೋಜಿಸಿದ ಸಿಬಂದಿಗೂ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ. ಅಲ್ಲಿಗೆ ತೆರಳುವ ಇಬ್ಬರು ಸಿಬಂದಿಗೆ ಬಾಡಿ ವಾರ್ನರ್‌ ಕೆಮರಾ ಅಳವಡಿಸಲಾಗಿದೆ. ಎಲ್ಲರಿಗೂ ಒಂದೇ ಕಾನೂನು; ದರ್ಶನ್‌ಗೂ ಅದು ಅನ್ವಯ ಎಂದರು.

ದರ್ಶನ ಮಾಡಿಸಿ: ಕೈದಿಗಳ ಮೊರೆ

ಬಳ್ಳಾರಿ ಜೈಲು ಸೇರಿರುವ ದರ್ಶನ್‌ನನ್ನು ಭೇಟಿ ಮಾಡಲು ನಮಗೂ ಅವಕಾಶ ಕೊಡಿ ಎಂದು ಇತರ ಕೈದಿಗಳು ಜೈಲು ಸಿಬಂದಿಯಲ್ಲಿ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಲ್ಲಿ 385ಕ್ಕೂ ಹೆಚ್ಚು ಕೈದಿಗಳಿದ್ದು. 60ಕ್ಕೂ ಹೆಚ್ಚು ಕೈದಿಗಳು ದರ್ಶನ್‌ನ ಪ್ರತ್ಯಕ್ಷ ದರ್ಶನಕ್ಕೆ ತವಕ ವ್ಯಕ್ತಪಡಿಸಿದ್ದಾರೆ. ಜೈಲು ಅಧಿಕಾರಿಗಳಿಗೆ ನೀವೇ ನಮ್ಮ ಮನವಿ ತಿಳಿಸಿ, ನಾವಿರುವ ಸೆಲ್‌ ಬಳಿಗಾದರೂ ದರ್ಶನ್‌ ಶಿಫ್ಟ್‌ ಮಾಡಿ ಎಂದು ಮನವಿ ಮಾಡುತ್ತಿರುವುದು ಸಿಬಂದಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.

ಕ್ಯಾಂಟೀನ್‌ ಬಂದ್‌
ಇನ್ನೊಂದೆಡೆ ದರ್ಶನ್‌ ಅಲ್ಲಿಗೆ ಬರುತ್ತಿದ್ದಂತೆ ಜೈಲಿನಲ್ಲಿ ಈ ಹಿಂದಿನಿಂದಲೂ ಇದ್ದ ಕ್ಯಾಂಟೀನ್‌ ಬಂದ್‌ ಆಗಿದ್ದು, ಇತರ ಕೈದಿಗಳಿಗೆ ಸಂಕಷ್ಟ ಎದುರಾಗಿದೆ. ಕ್ಯಾಂಟೀನ್‌ನಲ್ಲಿ ದೊರೆಯುತ್ತಿದ್ದ ಟೀ, ಕಾಫಿ, ಬಿಸ್ಕತ್‌, ಹಣ್ಣುಗಳನ್ನು ಕೈದಿಗಳು ಖರೀದಿಸುತ್ತಿದ್ದರು. ಈಗ ಕ್ಯಾಂಟೀನ್‌ ಬಂದ್‌ ಆಗಿರುವುದರಿಂದ ಈ ವಸ್ತುಗಳು ಸಿಗದೆ ಹೊತ್ತುಹೊತ್ತಿಗೆ ನೀಡುವ ಊಟ-ಉಪಾಹಾರವನ್ನಷ್ಟೇ ಸೇವಿಸಬೇಕಾಗಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next